More

    ಕಸ್ತೂರಿ ರಂಗನ್ ವರದಿ ವಿರುದ್ಧ ಸುಪ್ರೀಂಗೆ ಮೊರೆ; 1553 ಹಳ್ಳಿಗಳಿಗೆ ಕಾಡುತ್ತಿದೆ ಆತಂಕ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ರಾಜ್ಯದ 1553 ಹಳ್ಳಿಗಳ ಜನರಿಗೆ ಮಾರಕ ಎಂದೇ ವಿಶ್ಲೇಷಿಸಲಾಗಿರುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ತಡೆ ಹಿಡಿಯಲು ಒಂದೊಮ್ಮೆ ಕೇಂದ್ರ ಸರ್ಕಾರ ನೆರವಿಗೆ ಬಾರದೆ ಹೋದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆ ಕುರಿತಂತೆ 2013ರಲ್ಲಿ ಕೇಂದ್ರಕ್ಕೆ ಸಲ್ಲಿಕೆಯಾದ ಡಾ. ಕಸ್ತೂರಿ ರಂಗನ್ ವರದಿ ವಿರುದ್ಧ ರಾಜ್ಯ ಸರ್ಕಾರ ಹಲವು ಬಾರಿ ಆಕ್ಷೇಪಣೆ ಸಲ್ಲಿಸಿದರೂ ಆತಂಕ ದೂರಾಗಿಲ್ಲ. ಹೀಗಾಗಿ ಮುಂದೆಯೂ ಇದೇ ಪರಿಸ್ಥಿತಿ ಮರುಕಳಿಸಬಹುದೆಂಬ ಕಾರಣಕ್ಕೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

    ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ಕಾರದ ನಿಲುವು ತಿಳಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಸಂಪುಟ ಉಪಸಮಿತಿ ರಚಿಸಿದ್ದರು. ಸಮಿತಿಯು, ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸುವ ಸಲುವಾಗಿ ಹಸಿರು ನ್ಯಾಯಾಧಿಕರಣ ನೀಡಿರುವ ಆದೇಶ ಪರಿಶೀಲಿಸಿ ತನ್ನ ನಿಲುವು ಸ್ಪಷ್ಟಮಾಡಿಕೊಂಡಿತು. ಈಗಾಗಲೇ ರಾಜ್ಯ ತಳೆದಿರುವ ನಿಲುವನ್ನು ಮತ್ತೊಮ್ಮೆ ಪುನರುಚ್ಚ್ಚಸಿ, ಸಿಎಂ ಅವರಿಂದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಲು ಸಭೆ ನಿರ್ಣಯಿಸಿತ್ತು. ಆ ಪ್ರಕಾರವೇ, ಕೇಂದ್ರ ಹೊರಡಿಸಿರುವ ಕರಡು ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಈಗಿರುವಂತೆ ಒಪ್ಪಿ ಕಾರ್ಯಗತಗೊಳಿಸಲು ಸಾಧ್ಯವೇ ಇಲ್ಲ. ರಕ್ಷಣೆ ಉದ್ದೇಶವನ್ನು ರಾಜ್ಯ ಬಹುತೇಕ ಸಾಧಿಸಿದ್ದು, ಈ ಅಧಿಸೂಚನೆ ಅನ್ವಯಿಕತೆಯನ್ನು ಮರುಪರಿಶೀಲಿಸಿ ಎಂದುೕ ಖಾರವಾಗಿಯೇ ಪತ್ರ ಮುಖೇನ ಆಕ್ಷೇಪಣೆ ದಾಖಲಿಸಿದೆ.

    ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದ ಹಿನ್ನೆಲೆಯಲ್ಲಿ ವಿರೋಧ ಪರಿಗಣಿಸದೆ ಕೇಂದ್ರ ಸರ್ಕಾರ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವಂತಹ ಅಧಿಸೂಚನೆ ಅಂತಿಮಗೊಳಿಸಿ ಪ್ರಕಟಿಸಿದಲ್ಲಿ ಅದರ ಬಗ್ಗೆ ನ್ಯಾಯಿಕ ಪರಿಹಾರೋಪಾಯವಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಹಾಗೂ ಸವೋಚ್ಚ ನ್ಯಾಯಾಲಯದಲ್ಲಿ ಸ್ಪೆಷಲ್ ಲೀವ್ ಪಿಟಿಶನ್ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಯ ಮುಖ್ಯಾಂಶ

    • ಗುಜರಾತ್​ನ ತಪತಿ ನದಿ ಮೂಲದಿಂದ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮಾರಿವರೆಗೂ 1,64,280 ಚದರ ಕಿಲೋ ಮೀಟರ್ ಪ್ರದೇಶವನ್ನು ಪಶ್ಚಿಮಘಟ್ಟ ಎಂದು ಗುರುತಿಸಲಾಗಿದೆ
    • ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಹಲವು ಭೂ ಭಾಗ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರಲಿದೆ
    • ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲವಿದ್ಯುತ್, ಪವನ ವಿದ್ಯುತ್ ಯೋಜನೆ ಕಾರ್ಯ ಸ್ಥಗಿತಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ
    • 20 ಸಾವಿರ ಚದರ ಮೀಟರ್​ಗಿಂತ ದೊಡ್ಡ ಕಟ್ಟಡ ನಿರ್ವಿುಸುವಂತಿಲ್ಲ. ಸಿಮೆಂಟ್, ಕಲ್ಲು ರಾಸಾಯನಿಕ, ಬಳಕೆ ಜನವಸತಿ ಪ್ರದೇಶ ನಿರ್ಮಾಣಕ್ಕೂ ನಿಷೇಧ, ಸದ್ಯ ಇರುವ ಕೈಗಾರಿಕೆಗಳನ್ನು ಮುಂದಿನ ಐದು ವರ್ಷದಲ್ಲಿ ಮುಚ್ಚಬೇಕಾಗುತ್ತದೆ.

    ನಾಲ್ಕು ಬಾರಿ ಆಕ್ಷೇಪಣೆ: ಡಾ. ಕೆ. ಕಸ್ತೂರಿ ರಂಗನ್ ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆಗಾಗಿ ನೀಡಿರುವ ವರದಿ ಜಾರಿಗೆ ಕೇಂದ್ರ ಸರ್ಕಾರ ಮೊದಲ ಬಾರಿಗೆ 2014ರ ಮಾ.10ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ 2014ರ ಮೇ 5ರಂದು ಪತ್ರ ಮೂಲಕ ಆಕ್ಷೇಪಣೆ ಸಲ್ಲಿಸಿತ್ತು. ಬಳಿಕ ಕೇಂದ್ರ ಸರ್ಕಾರ 2015 ಸೆ.4, 2017ರ ಫೆ.27, 2018ರ ಅ.3ರಂದು ಮತ್ತೆ ಅಧಿಸೂಚನೆ ಹೊರಡಿಸಿತು. ರಾಜ್ಯ ಸರ್ಕಾರದ ಕಡೆಯಿಂದ 2015ರ ಅ.20, 2017ರ ಏ.22, 2018ರ ಡಿ.13ರಂದು ಪುನಃ ಆಕ್ಷೇಪಣೆ ಸಲ್ಲಿಸಿ, ವರದಿ ತಿರಸ್ಕರಿಸುವಂತೆ ಕೋರಲಾಗಿತ್ತು.

    ಕೇರಳ ಮಾಡಿದ್ದೇನು?: ಕೇಂದ್ರ ಸರ್ಕಾರ ಹೊರಡಿಸಿದ ಮೊದಲೆರೆಡು ಅಧಿಸೂಚನೆಯಲ್ಲಿ ಕೇರಳದ ಹೆಸರಿತ್ತು. ಅಲ್ಲಿನ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡು ಪ್ರಬಲ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕೇರಳ ಹೆಸರನ್ನೇ ಕೈಬಿಟ್ಟಿದೆ. ಹೀಗಾಗಿ ಕೇರಳಕ್ಕೀಗ ಕಸ್ತೂರಿರಂಗನ್ ವರದಿ ಭಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts