More

    ಡೊನೇಷನ್ ಹಾವಳಿ ತಪ್ಪಿಸುವಂತೆ ಮನವಿ

    ಭದ್ರಾವತಿ: ಖಾಸಗಿ ಶಾಲಾ ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಬೇಕು ಹಾಗೂ ಖಾಸಗಿ ಖಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಬುಧವಾರ ತಹಸೀಲ್ದಾರ್ ನಾಗರಾಜ್ ಹಾಗೂ ಬಿಇಒ ಎ.ಕೆ.ನಾಗೇಂದ್ರಪ್ಪ ಅವರಿಗೆ ಎನ್‌ಎಸ್‌ಯುಐ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

    ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಡೊನೇಷನ್ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ. ಇದರಿಂದ ಪಾಲಕರಿಗೆ ಹೊರೆಯಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಡೊನೇಷನ್ ಹಾವಳಿ ತಪ್ಪಿಸಲು ಕಠಿಣ ಆದೇಶ ಹೊರಡಿಸಬೇಕು. ಅಲ್ಲದೆ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತದೆ. ಇಂತಹ ಸಂಸ್ಥೆಗಳು ಶುಲ್ಕದಲ್ಲಿ ವಿನಾಯತಿ ನೀಡಿದರೆ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆಗಾಗಿ ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಡೆಯುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ತಕ್ಷಣ ಖಾಸಗಿ ಕಾಲೇಜುಗಳಿಗೆ ಪ್ರವೇಶಾತಿ ಬಯಸಿ ಹೋಗುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡದೆ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ ಎಂದು ಅಲ್ಲಿನ ಆಡಳಿತ ಮಂಡಳಿ ಉಡಾಫೆ ಉತ್ತರ ನೀಡುತ್ತಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳು ರೋಸ್ಟರ್ ಪದ್ಧತಿ ಅನುಸರಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಆದೇಶಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಎನ್‌ಎಸ್‌ಯುಐ ಘಟಕದಿಂದ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
    ಎನ್‌ಎಸ್‌ಯುಐ ತಾಲೂಕು ಘಟಕದ ಅಧ್ಯಕ್ಷ ಬಾಷಾ, ಮುರುಗೇಶ್, ಮಾದಿಗ ಸಮಾಜದ ಮಂಜುನಾಥ್, ಚಂದ್ರಪ್ಪ, ಮಹಾಂತೇಶ, ಗಂಗಾ, ರಂಗಸ್ವಾಮಿ, ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts