More

    ಎಪಿಎಂಸಿ ಮೇಗಾ ಮಾರುಕಟ್ಟೆಯಲ್ಲಿ ಸ್ಥಳೀಯ ವರ್ತಕರಿಗೆ ನಿವೇಶನ ನೀಡಲು ಆಗ್ರಹ; ವರ್ತಕರಿಂದ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಮೇಗಾ ಮಾರುಕಟ್ಟೆಯಲ್ಲಿ ಸ್ಥಳೀಯ ವರ್ತಕರಿಗೆ ನಿವೇಶನ ಹಂಚಿಕೆ ಮಾಡಬೇಕು. 250 ರೂ.ಗೆ ಚದುರ ಅಡಿಯಂತೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಎಪಿಎಂಸಿ ವರ್ತಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
    ಇಲ್ಲಿನ ಸ್ಟೇಷನ್ ರಸ್ತೆ ವರ್ತಕರ ಸಂಘದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಬಸ್‌ನಿಲ್ದಾಣ ರಸ್ತೆ, ಪೋಸ್ಟ್ ಸರ್ಕಲ್, ಅಶೋಕ ಸರ್ಕಲ್ ಮಾರ್ಗವಾಗಿ ಎಪಿಎಂಸಿ ಕಚೇರಿ ವರೆಗೆ ಸಾಗಿ ಬಂದರು. ಅಲ್ಲಿ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿ ಎಂ.ವಿ. ಶೈಲಜಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ನೇತೃತ್ವ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಮಾತನಾಡಿ, ಸ್ಥಳೀಯ ಎಪಿಎಂಸಿ ವತಿಯಿಂದ ಮೇಗಾ ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ್ದು, ಅದರಲ್ಲಿ ನಿವೇಶನ ಹಂಚಿಕೆಗೆ ರಾಜ್ಯದ ಎಲ್ಲ ವರ್ತಕರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಚದುರ ಅಡಿಗೆ 400 ರೂ. ಬೆಲೆ ನಿಗದಿ ಮಾಡಲಾಗಿದೆ.
    ಆದರೆ, ಎಪಿಎಂಸಿ ಈ ನಿರ್ಧಾರದಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಅನ್ಯಾಯವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಎಲ್ಲ ನಿವೇಶನಗಳನ್ನು ಸ್ಥಳೀಯ ವರ್ತಕರಿಗೆ ಕೊಡಬೇಕು. ಅಲ್ಲದೆ ಚದುರ ಅಡಿಗೆ 250 ರೂ.ನಂತೆ ನೀಡಬೇಕು ದರ ನಿಗದಿ ಪಡಿಸಬೇಕು. ಅಲ್ಲಿಯವರೆಗೆ ನಿವೇಶನ ಹಂಚಿಕೆ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
    ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಮಲ್ಲಿಕಾರ್ಜುನ ಅರಳಿ, ಸದಾಶಿವ ಉಪ್ಪಿನ, ಗುರುಪ್ರಕಾಶ ಜಂಬಗಿ, ಮಾಲತೇಶ ಕಜ್ಜರಿ, ಉಮೇಶ ಹೊನ್ನಾಳಿ, ಸುಧೀರ ಕುರವತ್ತಿ, ಬಿ.ಎಸ್. ಸಣ್ಣಗೌಡ್ರ, ಸಚಿನ ಲಿಂಗನಗೌಡ್ರ, ಶಿವಾನಂದ ಸುಣಗಾರ, ರಘು ಮಜ್ಜಗಿ, ಪರಮೇಶಪ್ಪ ಬಣಕಾರ, ಪರಮೇಶಪ್ಪ ಹೊಟ್ಟಿಗೌಡ್ರ, ಮಾಲತೇಶ ಚಳಗೇರಿ, ಮಾಲತೇಶ ಕರಚಿಕ್ಕಪ್ಪನವರ, ಕಿರಣ ಅಂತರವಳ್ಳಿ, ಯಮನೂರಪ್ಪ ಯಲಗುರೇಶ್ವರ, ಬಸವರಾಜ ಹುಲ್ಲತ್ತೇರ, ಪರಶುರಾಮ ಮಾಳೋದೆ ಸೇರಿ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts