More

    ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್-ಜೆಡಿಎಸ್ ವಿರೋಧ: ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ

    ಬೆಂಗಳೂರು : ಭೂಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಮಂಗಳವಾರ ಬೆಂಬಲಿಸಿ ಬಿಜೆಪಿಗೆ ನೆರವಾಗಿದ್ದ ಜೆಡಿಎಸ್, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ಬುಧವಾರ ಕಾಂಗ್ರೆಸ್​ಗೆ ಸಾಥ್ ನೀಡಿತು. ಜೆಡಿಎಸ್ 24 ತಾಸಿನೊಳಗೆ ತನ್ನ ನಿಲುವು ಬದಲಾಯಿಸಿಕೊಂಡಿದ್ದಕ್ಕೆ ವಿಧಾನಪರಿಷತ್ ಸಾಕ್ಷಿಯಾಯಿತು. ಅಲ್ಲದೆ, ಎಂದೆಂದಿಗೂ ರೈತರ ಪರವೆಂಬ ಸಂದೇಶ ಸಾರಲು ಪ್ರಯತ್ನಿಸಿತು.

    ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧೇಯಕವನ್ನು ಸದನದ ಪರ್ಯಾಲೋಚನೆಗೆ ಮಂಡಿಸಿ, ರ್ಚಚಿಸಿದ ಬಳಿಕ ಒಪ್ಪಿಗೆ ನೀಡಬೇಕೆಂದು ಕೋರಿದರು. ತಿದ್ದುಪಡಿ ವಿಧೇಯಕದ ಮೇಲೆ ಚರ್ಚೆ ಆರಂಭಿಸಿದ ಜೆಡಿಎಸ್​ನ ಮರಿತಿಬ್ಬೇಗೌಡ, ರೈತರನ್ನು ನಿರ್ನಾಮ ಮಾಡಿ ದೊಡ್ಡ ಕಂಪನಿಗಳಿಗೆ ರತ್ನಗಂಬಳಿ ಹಾಸಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು. ’ನನ್ನ ಬೆಳೆ ನನ್ನ ಹಕ್ಕು’ ರೈತರಿಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಮುಕ್ತ ಅವಕಾಶದ ಹೆಸರಿನಲ್ಲಿ ರೈತರನ್ನು ಮತ್ತೊಂದು ರೀತಿಯ ಶೋಷಣೆಗೆ ತಳ್ಳುತ್ತಿದೆ. ಇದರಿಂದ ರೈತರಿಗಷ್ಟೇ ಅಲ್ಲ, ಗ್ರಾಹಕರಿಗೆ ಕಷ್ಟ. ರಾಜ್ಯದ ಬೊಕ್ಕಸಕ್ಕೆ ನಷ್ಡವಾಗಲಿದೆ. ಅಗತ್ಯ ವಸ್ತುಗಳ ಮೇಲೆ ಖಾಸಗಿ ಕಂಪನಿಗಳ ಏಕಸ್ವಾಮ್ಯ, ಆಹಾರ ಧಾನ್ಯಗಳ ಕೃತಕ ಅಭಾವ, ಕಪ್ಪು ಹಣ ಬಿಳಿ ಮಾಡುವಂತಹ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಮಧ್ಯಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿ, ದಲ್ಲಾಳಿಗಳು ರೈತರ ರಕ್ತ ಹೀರಿದ್ದಾರೆ. ಸ್ವತಃ ಕಬ್ಬು ಬೆಳೆದ ರೈತನಾಗಿ ಈ ಸಮಸ್ಯೆ ಕಂಡುಂಡಿರುವೆ. ರೈತರನ್ನು ಬಂಧಮುಕ್ತಗೊಳಿಸಿ, ದಲ್ಲಾಳಿಗಳ ಕಪಿಮುಷ್ಟಿಯಿಂದ ಪಾರು ಮಾಡುವುದು ತಿದ್ದುಪಡಿ ಮುಖ್ಯ ಉದ್ದೇಶವೆಂದು ಸಮರ್ಥಿಸಿಕೊಂಡರು.

    ಜೆಡಿಎಸ್​ನ ಮತ್ತೊಬ್ಬ ಸದಸ್ಯ ಎಸ್.ಎಲ್.ಭೋಜೇಗೌಡ ಮಸೂದೆಯನ್ನು ವಿರೋಧಿಸಿದರು. ಬೆಳಗಾಗೆ ನಾನೆದ್ದು ಯಾರ್ಯಾರ ನೆನೆಯಲಿ ಜಾನಪದ ಪದ್ಯ ಬದಲಿಸಿ, ಬೆಳಗಾಗಿ ನಾನೆದ್ದು ಎಂಎನ್​ಸಿಗಳನ್ನು ನೆನೆಯಲಿ ಎನ್ನುವಂತಾಗುತ್ತದೆ. ಡಿವಿಜಿಯವರ ತಮ್ಮ ಕಗ್ಗದಲ್ಲಿ ಹೇಳಿರುವಂತೆ ವರ್ತಮಾನವನ್ನು ಅರಿತು ಭವಿಷ್ಯದತ್ತ ಹೆಜ್ಜೆಯಿಡಬೇಕು. ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಸಹಕಾರ ಸಂಸ್ಥೆಗಳ ಬಲವರ್ಧನೆ, ರೈತರಿಗೆ ಅಧಿಕ ಸಾಲದ ನೆರವು ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿ, ಯುವಜನತೆಯನ್ನು ಸೆಳೆಯಲು ಒತ್ತು ನೀಡಬೇಕು ಎಂದರು.
    ಕಾಂಗ್ರೆಸ್​ನ ಅಲ್ಲಂ ವೀರಭದ್ರಪ್ಪ ಈ ಮಸೂದೆಯು ಅನ್ನದಾತರ ಹಿತಕ್ಕೆ ವಿರುದ್ಧವಾಗಿದೆ. ಎಂಎಸ್​ಪಿ ಸುಧಾರಣೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ ಇನ್ನಿತರ ಕ್ರಮಗಳ ಮೂಲಕ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

    ಎಪಿಎಂಸಿ ತಿದ್ದುಪಡಿ ಅಂಗೀಕಾರ : ಪ್ರತಿಪಕ್ಷಗಳಾದ ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಪ್ರತಿಭಟನೆಯ ಮಧ್ಯೆ ಎಪಿಎಂಸಿ ತಿದ್ದುಪಡಿ ವಿಧೇಯಕವು ವಿಧಾನಪರಿಷತ್​ನಲ್ಲಿ ಅಂಗೀಕಾರವಾಯಿತು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ಬೆಂಬಲಿಸಿದ್ದ ಜೆಡಿಎಸ್, ಎಪಿಎಂಸಿ ವಿಧೇಯಕ ವಿಷಯದಲ್ಲಿ ತದ್ವಿರುದ್ಧ ನಿಲುವು ತಳೆದು, ಮತ ವಿಭಜನೆಗೆ ಒತ್ತಾಯಿಸಿತು. ಸಭಾಪತಿ ಸ್ಪಂದಿಸಲಿಲ್ಲವೆಂದು ಪೀಠದ ಮುಂದೆ ಪ್ರತಿಭಟಿಸುವ ಮೂಲಕ ರೈತರ ಪರವಾಗಿದ್ದೇವೆ ಎಂಬ ಸಂದೇಶ ರವಾನಿಸುವ ಕಸರತ್ತು ನಡೆಸಿತು. ರೈತರ ಪಾಲಿಗೆ ಕರಾಳ ಶಾಸನವೆಂದ ಕಾಂಗ್ರೆಸ್, ಸೆಲಕ್ಟ್ ಕಮಿಟಿಗೆ ಒಪ್ಪಿಸಲು ಒತ್ತಾಯಿಸಿತು. ಸರ್ಕಾರ ಬಿಜೆಪಿ ವರಿಷ್ಠರ ಒತ್ತಡಕ್ಕೆ ಮಣಿದಿದೆ ಎಂದು ಟೀಕಿಸಿತು. ಈ ಮಸೂದೆ ಒಪ್ಪೆವು ಎಂದು ಹೇಳಿ ಸಭಾತ್ಯಾಗ ಮಾಡಿತು.

    ಇದಕ್ಕೂ ಮುಂಚೆ ನಡೆದ ಸುದೀರ್ಘ ಚರ್ಚೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉತ್ತರಿಸಿ, ಎಪಿಎಂಸಿ ಮುಚ್ಚುವುದಿಲ್ಲ. ಕನಿಷ್ಟ ಬೆಂಬಲ ಬೆಲೆಗೂ ಈ ಮಸೂದೆಗೂ ಸಂಬಂಧವಿಲ್ಲ. ಕನಿಷ್ಟ ಬೆಂಬಲ ಬೆಲೆ ಕೈಬಿಡುವುದಿಲ್ಲ ಎಂದು ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಪದೇಪದೆ ಸ್ಪಷ್ಟಪಡಿಸಿದ್ದಾರೆ. ರೈತರ ಹಿತರಕ್ಷಣೆ, ಸ್ಪರ್ಧಾತ್ಮಕ ಬೆಲೆ ದೊರಕಿಸುವುದು ಈ ಬಿಲ್​ನ ಉದ್ದೇಶವಾಗಿದೆ. ಕಳೆದ 6 ವರ್ಷಗಳಲ್ಲಿ 62 ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಉತ್ಪನ್ನಗಳ ಖರೀದಿಗೆ ಪರವಾನಗಿ ನೀಡಲಾಗಿದೆ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಬಗ್ಗೆ ರೈತರಿಂದ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    46,000 ದಾಟಿದ ಸೆನ್ಸೆಕ್ಸ್; 13,500 ದಾಟಿತು ನಿಫ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts