More

    ಗೋರಕ್ಷಣೆಗೆ ಸುಗ್ರೀವ ಬಲ: ಸಚಿವ ಸಂಪುಟ ಅನುಮೋದನೆ, ಇಂದು ಗವರ್ನರ್​ಗೆ ರವಾನೆ..

    ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ತಡಮಾಡದೆ ಜಾರಿಗೊಳಿಸಲು ಬಯಸಿರುವ ಯಡಿಯೂರಪ್ಪ ಸರ್ಕಾರ ನಿರೀಕ್ಷೆಯಂತೆ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ದೊರೆತಿದ್ದು, ಮಂಗಳವಾರವೇ ರಾಜಭವನಕ್ಕೆ ರವಾನೆಯಾಗಲಿದೆ. ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.

    ಮುಂಬರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ಉದ್ದೇಶಿಸಿರುವ ಸರ್ಕಾರ ಜನವರಿ ಮೂರನೇ ವಾರದಲ್ಲಿ ಜಂಟಿ ಅಧಿವೇಶನ ಹಾಗೂ ಫೆಬ್ರವರಿ ಕೊನೆಯಲ್ಲಿ ಬಜೆಟ್ ಅಧಿವೇಶನ ನಡೆಸಲು ಸಿದ್ಧತೆ ನಡೆಸಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ. ಈ ಕಾಯ್ದೆಗೆ ಹೊಸ ರೂಪ ಕೊಡಲಾಗಿದೆ ಅಷ್ಟೆ. ಹಿಂದಿನ ಕಾಯ್ದೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಅದೇಕೆ ಕೆಲವರು ವಿರೋಧ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದರು. ಗಂಡು ಕರುವನ್ನು ಸಾಕಲು ಆಗದವರು ಅದನ್ನು ಗೋಶಾಲೆಗೆ ತಂದು ಬಿಡಬಹುದು. ಅಂಥ ಗೋವುಗಳನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

    ಗೋ ಹತ್ಯೆ ನಡೆಯಬಾರದೆಂಬುದು ಗಾಂಧೀಜಿ ಆಶಯ. ಇದು ಕೇವಲ ಸಂಘ ಪರಿವಾರ, ಬಿಜೆಪಿಯ ಆಸಕ್ತಿಯಷ್ಟೇ ಅಲ್ಲ ಎಂದು ಹೇಳಿದ ಅವರು, ಕ್ರಾಸ್ ತಳಿಗಳ ಗಂಡುಕರುಗಳ ರಕ್ಷಣೆಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಡ ಲಾಗಿದ್ದು, ಪ್ರಾಧಿಕಾರ ಮಾಡಲಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್​ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಿ ವಿಧಾನ ಸಭೆಯ ಅನುಮೋದನೆ ಪಡೆದುಕೊಂಡಿತ್ತು. ಆದರೆ ವಿಧಾನ ಪರಿಷತ್​ನಲ್ಲಿ ಮಂಡನೆ ಯಾಗಿ ಅನುಮೋದನೆ ಸಿಕ್ಕಿರಲಿಲ್ಲ.

    ಪರಿಷತ್​ನಲ್ಲಿ ಆಡಳಿತ ಪಕ್ಷಕ್ಕೆ ಪೂರ್ಣ ಬಹುಮತ ಇಲ್ಲ. ಜತೆಗೆ ಜೆಡಿಎಸ್ ಈ ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಒಂದೊಮ್ಮೆ ವಿಧೇಯಕದ ಪರಾಮರ್ಶೆ ಸೂಕ್ತ ಎಂದು ಪ್ರತಿಪಕ್ಷ ಕೋರಿಕೊಂಡು, ಸಭಾಪತಿ ಒಪ್ಪಿಬಿಟ್ಟರೆ ಈ ವಿಧೇಯಕ ಇನ್ನಾರು ತಿಂಗಳು ನನೆಗುದಿಗೆ ಬೀಳಲಿದೆ. ಹೀಗಾಗಿ ತಡ ಮಾಡಬಾರದೆಂದು ಸುಗ್ರೀವಾಜ್ಞೆಗೆ ಸರ್ಕಾರ ಮೊರೆ ಹೋಗಿದೆ. ಪೂರ್ಣ ಬಹುಮತ ಇರುವ ಸರ್ಕಾರ ಇದ್ದರೂ ಕಾಯ್ದೆ ಜಾರಿಗೆ ತರಲು ಸಾಧ್ಯವಾಗದ್ದಕ್ಕೆ ಪಕ್ಷದ ಮಟ್ಟದಲ್ಲಿ ಆಕ್ಷೇಪದ ದನಿ ಎದ್ದಿತ್ತು.

    ಜ.3ನೇ ವಾರ ಅಧಿವೇಶನ

    ಈ ಸಾಲಿನ ಅಧಿವೇಶನವನ್ನು ಪರಿಸಮಾಪ್ತಿಗೊಳಿಸಲು ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಜತೆಗೆ 2021ರ ಜನವರಿ ಮೂರನೇ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ನಿಶ್ಚಯಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ ನಿಗದಿಯಾಗಲಿದೆ. ಪ್ರಾಥಮಿಕ ಚರ್ಚೆಯಂತೆ ಜ.18ರಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಐದು ದಿನ ಕಲಾಪ ನಡೆಯುವುದು.

    ಗೋರಕ್ಷಣೆಗೆ ಸುಗ್ರೀವ ಬಲ: ಸಚಿವ ಸಂಪುಟ ಅನುಮೋದನೆ, ಇಂದು ಗವರ್ನರ್​ಗೆ ರವಾನೆ..ಸುದೀರ್ಘ ರಾಜಕೀಯ ದಲ್ಲಿರುವ ಸಿದ್ದರಾಮಯ್ಯ ಗೋ ಹತ್ಯೆ ಕಾಯ್ದೆ ಬಗ್ಗೆ ಚರ್ಚೆಯನ್ನೇ ಮಾಡದೆ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ.

    | ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

     

     

    ಇವುಗಳಿಗಿಲ್ಲ ನಿಷೇಧ

    • ಹೊಸ ಕಾಯ್ದೆ ಜಾರಿಯಾದರೂ ಎಮ್ಮೆ, ಕೋಣದ ಮಾಂಸ ಮಾರಾಟಕ್ಕೆ ನಿಷೇಧ ಇಲ್ಲ, ಚರ್ವೇದ್ಯಮಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ
    • 1964ರ ಗೋಹತ್ಯೆ ನಿಷೇಧ ಕಾಯ್ದೆಯ ಪ್ರಕಾರ, 12 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅವಕಾಶವಿತ್ತು. ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧಿಸಲು ಅವಕಾಶವಿಲ್ಲ

    ಸಂಪುಟದ ಇತರ ತೀರ್ಮಾನ

    • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ನೀಡುತ್ತಿದ್ದ ಸೆಸ್ ಪ್ರಮಾಣ ಶೇಕಡ 1ರಿಂದ ಶೇ 0.60ಕ್ಕೆ ಇಳಿಕೆ, ತುರ್ತು ಸಹಾಯವಾಣಿ 100ರ ಬದಲು 112ರ ಅನುಷ್ಠಾನಕ್ಕೆ -ಠಿ;35 ಕೋಟಿ
    • ನಂದಿ ಬೆಟ್ಟದ ತೋಟಗಾರಿಕೆ ಇಲಾಖೆ ಆಸ್ತಿ ಕೆಎಸ್​ಟಿಡಿಸಿಗೆ, ಕೆಮ್ಮಣ್ಣುಗುಂಡಿಯ ಆಸ್ತಿ ಜಂಗಲ್ ರೆಸಾರ್ಟ್​ಗೆ, ಸ್ಮಾರ್ಟ್ ಪೊಲೀಸಿಂಗ್ ಯೋಜನೆಯಡಿ ರಾಜ್ಯಾ ದ್ಯಂತ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ
    • ಹಾಸನ, ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗುವ ರಣಘಟ್ಟ ಕುಡಿಯುವ ನೀರಿನ ಯೋಜನೆಗೆ 124 ಕೋಟಿ ರೂ. ಮಂಜೂರು

    ಹೊಸ ನಿಯಮ

    • ಗೋ ಹತ್ಯೆಗೆ 3 ವರ್ಷಗಳಿಗೆ ಕಡಿಮೆ ಇಲ್ಲದ, 7 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ
    • 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ, ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂ.ದಂಡ, 7 ವರ್ಷ ಕಾರಾಗೃಹ ಶಿಕ್ಷೆ
    • ಹಸುಗಳ ಸಾಗಣೆಗೆ ಶುಲ್ಕ ವಿಧಿಸಲು ನಿಯಮ
    • ಗೋ ವಧಾಗಾರಗಳಲ್ಲಿ ವಿಲೇವಾರಿ ಮಾಡಲು ನಿಯಮ
    • ಗೋ ರಕ್ಷಣೆಗೆ ಸಂಬಂಧಪಟ್ಟಂತೆ ಲೆವಿ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಅವಕಾಶ ಒದಗಿಸಲಿವೆ
    • ಸಬ್ ಇನ್​ಸ್ಪೆಕ್ಟರ್ ಹಂತದ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರದ ಮಾನ್ಯತೆ, ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದಾಗ ತನಿಖಾಧಿಕಾರಿಗೆ ಸಹಕಾರ ಕೊಡಬೇಕಾಗುತ್ತದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts