ಮೈಸೂರು: ಪ್ರತಿಯೊಬ್ಬರು ಅಂತರ್ಮುಖಿಗಳಾದಾಗ ಅಂತರಂಗ ಪರಿಶುದ್ಧಗೊಳ್ಳುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಮೆರಿಕದ ನ್ಯೂಜೆರ್ಸಿಯ ವೀರಶೈವ ಸಮಾಜದಿಂದ ಶನಿವಾರ ಆಯೋಜಿಸಿದ್ದ ಸತ್ಸಂಗದಲ್ಲಿ ಆಶೀರ್ವಚನ ನೀಡಿದರು. ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಕಲೆಗಳು ಅರಿವಿಲ್ಲದಂತೆಯೇ ಮನುಷ್ಯನನ್ನು ಆವರಿಸಿಕೊಳ್ಳುತ್ತವೆ. ಅಂತಹ ಶಕ್ತಿ ಅವುಗಳಲ್ಲಿದೆ. ಅವು ಮನುಷ್ಯನ ಮನಸ್ಸು ಮತ್ತು ಹೃದಯವನ್ನು ಅರಳಿಸುತ್ತವೆ. ಮನುಷ್ಯ ಸುಖವಾಗಿರಲೆಂದೇ ದುಡಿಮೆಯನ್ನು ಮಾಡುತ್ತಾನೆ ಎಂದರು.
ಎಲ್ಲರೂ ಸುಖವನ್ನೇ ಬಯಸುತ್ತಾರೆ. ಕಷ್ಟ-ಸುಖಗಳು ಎಲ್ಲರಿಗೂ ಇರುತ್ತವೆ. ಬಹಿರಂಗದ ಸುಖಕ್ಕಿಂತ ಅಂತರಂಗದ ಸುಖ ಮುಖ್ಯ. ಅದು ಭಗವಂತನ ಧ್ಯಾನ, ಪೂಜೆ, ಭಕ್ತಿಗಳಲ್ಲಿ ದೊರೆಯುತ್ತದೆ. ಮನುಷ್ಯ ಅಂತರ್ಮುಖಿಯಾದಾಗ ನಿಜವಾದ ಸುಖ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಭಾರತದ ಋಷಿಮುನಿಗಳು ಮತ್ತು ಸಂತರು ಜಗತ್ತಿನ ಸಾರ್ವತ್ರಿಕ ಸತ್ಯಗಳನ್ನು ಕಂಡುಕೊಂಡುವರು ಎಂಬುದು ಹೆಮ್ಮೆಯ ವಿಷಯ. ಅನೇಕ ವೈಜ್ಞಾನಿಕ ಸತ್ಯಗಳನ್ನು ಭಾರತೀಯರು ಅವರ ದಿವ್ಯಶಕ್ತಿಯಿಂದಲೇ ಕಂಡುಕೊಂಡರು. ಎಲ್ಲರೂ ಅಂತರಂಗವನ್ನು ಪರಿಶುದ್ಧಗೊಳಿಸಿಕೊಳ್ಳಬೇಕು. ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಫಲ ನಿರೀಕ್ಷಿಸುತ್ತಲೇ ಕೆಲಸ ಮಾಡಬೇಕು. ಆಗ ಆದರಲ್ಲಿ ಯಶಸ್ಸು ದೊರೆಯುತ್ತದೆ. ನಿಷ್ಕಾಮವಾದ ಭಕ್ತಿಯಿಂದ ಭಗವಂತನನ್ನು ಧ್ಯಾನಿಸಬೇಕು. ಮನುಷ್ಯ ತನ್ನನ್ನು ತಾನು ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿಎಸ್‌ಎನ್‌ಜೆ ಅಧ್ಯಕ್ಷ ಓಂಕಾರಮೂರ್ತಿ ಮುರುಂಡಿ, ಬೃಂದಾವನ ಕನ್ನಡ ಸಂಘದ ಅಧ್ಯಕ್ಷೆ ಪದ್ಮಿನಿ, ಎಚ್‌ಎಸ್‌ಬಿಬಿ ಉಪಾಧ್ಯಕ್ಷ ಡಾ.ಬಾಬು ಕಿಲಾರೆ ವೀರೇಗೌಡ ಇದ್ದರು.