More

    ಆಚರಣೆಗಳು ಧಾರ್ಮಿಕ ಸಹಿಷ್ಣುತೆ ಸಾರಲಿ

    ಹೊಳೆಹೊನ್ನೂರು: ಆಚರಣೆಗಳು ಆಡಂಬರಕ್ಕೆ ಸೀಮಿತವಾಗದೆ ಧಾರ್ಮಿಕ ಸಹಿಷ್ಣುತೆ ಸಾರುವಂತಿರಬೇಕು ಎಂದು ಚನ್ನಗಿರಿ ಕೇದಾರ ಮಠದ ಶ್ರೀ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಸಮೀಪದ ಕಲ್ಲಿಹಾಳ್ ಸರ್ಕಲ್‌ನಲ್ಲಿ ವೀರಶೈವ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ರೇಣುಕಾ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕಳೆದೆರಡು ವರ್ಷದಿಂದ ಸರ್ಕಾರ ರೇಣುಕಾ ಜಯಂತಿ ಆಚರಣೆಗೆ ತಂದಿರುವುದು ಆಶಾದಾಯಕ ಬೆಳವಣಿಗೆ. 18 ಉಪ ಜಾತಿಗಳ ಮಠಗಳ ನಿರ್ಮಾಣದ ಕೀರ್ತಿ ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಧರ್ಮ ಪ್ರಚಾರ ಮಾಡಿ ಸಾಮಾಜಿಕ ಮೌಲ್ಯಗಳ ತತ್ವದಡಿ ಜಗಕ್ಕೆ ದಶ ಸೂತ್ರಗಳನ್ನು ಉಪದೇಶ ಮಾಡಿದರು. ಪ್ರತಿಯೊಂದು ಧರ್ಮದ ಕೊನೆಯ ಸಾರ ಮಾನವನ ಕಲ್ಯಾಣವೇ ಆಗಿದೆ. ಸರ್ವ ಜನಾಂಗಕ್ಕೂ ಸಾಮಾಜಿಕ ಮೌಲ್ಯಗಳನ್ನು ಬೋಧನೆ ಮಾಡಿದ ರೇಣುಕರು ಇತಿಹಾಸದ ಪುಟ ಸೇರಿದ್ದಾರೆ ಎಂದರು.
    ಪರಿವರ್ತನೆ ಜಗದ ನಿಯಮ. ಒಳ್ಳೆಯ ಉಪದೇಶಗಳು ಬದುಕಿಗೆ ಸನ್ಮಾರ್ಗ ನೀಡುತ್ತವೆ. ಸರಳ ಆಚರಣೆಗಳು ಮನಸಿಗೆ ಮುದ ನೀಡುತ್ತವೆ. ಭಗವಂತ ನೀಡಿರುವ ಕ್ಷಣಿಕ ಜೀವನದಲ್ಲಿ ಮಾನವ ನಿರ್ವಹಿಸುವ ಕಾಯಕಗಳು ಧರ್ಮಮಾರ್ಗವಾಗಿರಬೇಕು. ಜೀವನವೆಂಬ ಪುಸ್ತಕದ ಮೊದಲ ಹಾಗೂ ಕೊನೆಯ ಪುಟಗಳಂತೆ ಮಧ್ಯದ ಪುಟಗಳು ವರ್ಣರಂಜಿತವಾಗಿರಬೇಕು. ಜೀವನದಲ್ಲಿ ಗಳಿಸಿದ ಸಂಪತ್ತಿನ ಅಲ್ಪ ಭಾಗವಾದರೂ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗವಾಗಬೇಕು. ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಂಡು ಸಮಾಜ ಸಂಘಟನೆಗೆ ಮುಂದಾಗಬೇಕು. ಧಾರ್ಮಿಕ ಕಾರ್ಯಗಳಿಗೆ ಕೈ ಜೋಡಿಸುವುದು ಪುಣ್ಯದ ಕೆಲಸ ಎಂದರು.
    ಮಾರಶೆಟ್ಟಿಹಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿಯಿಂದ ಕಲ್ಲಿಹಾಳ್ ಸರ್ಕಲ್‌ವರೆಗೂ ವೀರಗಾಸೆ ತಂಡದೊಂದಿಗೆ ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಗ್ರಾಮಾಂತರ ವೀರಶೈವ ಸಮಾಜ ಅಧ್ಯಕ್ಷ ಕಾಂತರಾಜ್, ಪ್ರಮುಖರಾದ ಹಾಲಸ್ವಾಮಿ ತಿಮ್ಲಾಪುರ, ಸತೀಶ್, ವೇದಮೂರ್ತೈಯ್ಯ ಶಾಸಿ, ಸೋಮಶೇಖರಯ್ಯ, ಕೆ.ಪಿ.ಕಿರಣ್‌ಕುಮಾರ್, ಕಲ್ಮನೆ ಶಿವಣ್ಣ, ದೇವರಾಜ್, ರುದ್ರಮುನಿ, ದಿವಾಕರ್, ನಂಜುಂಡಪ್ಪ, ಧರಣೇಶ್, ಪ್ರದೀಪ್, ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts