More

    ಪಕ್ಷದ ಮಾನದಂಡ ಪ್ರಕಾರ ಅಭ್ಯರ್ಥಿ ಹೆಸರು ಘೋಷಣೆ

    ರಾಯಚೂರು: ಲೋಕಸಭೆ ಚುನಾವಣೆಗೆ ಪಕ್ಷದ ಮಾನದಂಡಗಳನ್ನು ಅನುಸರಿಸಿ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಒಂದೆರಡು ದಿನಗಳಲ್ಲಿ ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
    ಸ್ಥಳೀಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಈಗಾಗಲೇ ರಾಷ್ಟ್ರ ಮತ್ತು ರಾಜ್ಯದ ನಾಯಕರು ಸಭೆ ನಡೆಸಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದು, ಎಲ್ಲ ರೀತಿಯ ತುಲನೆ ಮಾಡಿ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದರು.
    ರಾಯಚೂರು, ಬಳ್ಳಾರಿ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ ತಲಾ ಮೂರು ಹೆಸರುಗಳನ್ನು ಕಳಿಸಿಕೊಡಲಾಗಿದೆ. ಪ್ರಸಕ್ತ ನಡೆಯುವ ಲೋಕಸಭೆ ಚುನಾವಣೆ ನಮ್ಮ ಚುನಾವಣೆಯಲ್ಲ. ದೇಶದ ಭವಿಷ್ಯ ಮತ್ತು ಅಭಿವೃದ್ಧಿಯ ಚುನಾವಣೆಯಾಗಿದೆ. ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ.
    ಜನಾರ್ದನರೆಡ್ಡಿ ಹಿಂದೆ, ಇಂದು ಹಾಗೂ ಮುಂದೆಯೂ ಸ್ನೇಹಿತರೇ. ಪಕ್ಷದ ಮತ್ತು ರಾಜಕೀಯವನ್ನು ಸ್ನೇಹದಲ್ಲಿ ತಳಕು ಹಾಕುವುದು ಸರಿಯಲ್ಲ. ರಾಮುಲುಗೆ ಟಿಕೆಟ್ ನೀಡಿದರೆ ಸೋಲುತ್ತಾರೆ ಎಂದು ಅವರು ಯಾವ ದೃಷ್ಟಿಕೋನದಿಂದ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮವಾಗಿದೆ.
    ದಾವಣಗೆರೆಯಲ್ಲಿ ಜೆ.ಎಂ.ಸಿದ್ಧೇಶ್ವರಗೆ ಟಿಕೆಟ್ ನೀಡಿದರೆ ನಾವೇ ಸೋಲಿಸುತ್ತೇವೆ ಎಂದು ಪಕ್ಷದ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡಿರುವುದು ತಪ್ಪು. ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಕುರಿತು ಬಹಿರಂಗ ಹೇಳಿಕೆ ನೀಡಿಕೆ ನೀಡದಂತೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ.
    ಸಂವಿಧಾನಕ್ಕೆ ಸಂಬಂಸಿದಂತೆ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಕುರಿತು ಪಕ್ಷ ಅದು ಅವರ ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಸಂವಿಧಾನ ತಿದ್ದುಪಡಿಗೆ ಮುಂದಾಗುವುದಿಲ್ಲ. ಸಂವಿಧಾನದ ಅಡಿಯಲ್ಲಿಯೇ ಪ್ರಧಾನಿ ಮೋದಿ ಆಡಳಿತ ಮಾಡುತ್ತಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
    ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts