More

    ಒಣದ್ರಾಕ್ಷಿಗೂ ಬೆಂಬಲ ಬೆಲೆ ಘೋಷಿಸಿ, ಸರ್ಕಾರಕ್ಕೆ ಉಮೇಶ ಕೋಳಕೂರ ಆಗ್ರಹ

    ವಿಜಯಪುರ: ರಾಜ್ಯದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿದ ಮಾದರಿಯಲ್ಲಿ ಒಣದ್ರಾಕ್ಷಿಗೂ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ನೂರಾರು ರೈತರು ಬಬಲೇಶ್ವರದಲ್ಲಿ ಬಿಜೆಪಿ ಮಂಡಲ ಘಟಕದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

    ನಗರದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು ಹಾಗೂ ಬಿಜೆಪಿ ಪದಾಧಿಕಾರಿಗಳು ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ನೇತೃತ್ವ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಮಾತನಾಡಿ, ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ತೆಂಗು ಬೆಳೆಗಾರರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೊಬ್ಬರಿಗೆ ಬೆಂಬಲ ಬೆಲೆಯೂ ಘೋಷಿಸಲಾಯಿತು. ಆದರೆ, ದ್ರಾಕ್ಷಿ ಬೆಳೆಗಾರರ ಬಗ್ಗೆ ಸರ್ಕಾರ ಕಿಂಚಿತ್ತೂ ಚರ್ಚೆ ನಡೆಸದಿರುವುದು ಖೇದಕರ ಎಂದರು.

    ರಾಜ್ಯದ ದ್ರಾಕ್ಷಿ ಕಣಜ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಒಣದ್ರಾಕ್ಷಿ ಬೆಲೆ ಕುಸಿದಿದೆ. ರೈತರು ವೈಜ್ಞಾನಿಕ ಬೆಲೆ ಸಿಗದ ಕಾರಣಕ್ಕೆ ದ್ರಾಕ್ಷಿ ಬೆಳೆಯನ್ನೇ ನೆಲಸಮ ಮಾಡಲು ಮುಂದಾಗಿದ್ದಾರೆ. ದ್ರಾಕ್ಷಿಗೆ ಮಾಡಿದ ಔಷಧೋಪಚಾರದ ಖರ್ಚು ಸಹ ಕೈಗೆ ಸಿಗದಾಗಿದೆ. ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿಟ್ಟ ಒಣದ್ರಾಕ್ಷಿಗೆ ಹೆಚ್ಚಿನ ಬಾಡಿಗೆ ನೀಡಬೇಕಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಆದರೆ, ಈವರೆಗೂ ಒಣದ್ರಾಕ್ಷಿ ಬೆಳೆಗಾರರ ಬಗ್ಗೆ ಚಿಂತಿಸದಿರುವುದು ನೋವಿನ ಸಂಗತಿ ಎಂದರು.

    ಮಂಡಲ ಪ್ರಧಾನ ಕಾರ್ಯದರ್ಶಿ ಈರಣ್ಣ ಎಸ್.ಶಿರಮಗೊಂಡ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ಒಣದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ಬೆಲೆ ಒದಗಿಸಿಕೊಡಬೇಕು. ಕೆಜಿ ಒಣದ್ರಾಕ್ಷಿಗೆ ಕನಿಷ್ಠ 250 ಬೆಂಬಲ ಬೆಲೆ ಒದಗಿಸಬೇಕೆಂದರು.

    ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದು ಬರದ ಛಾಯೆ ಆವರಿಸಿದೆ. ಹೀಗಾಗಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಕಬ್ಬು ಬೆಳೆಗಾರರಿಗೂ ಬೆಂಬಲ ಬೆಲೆ ನೀಡಬೇಕು. ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು. ತಿಕೋಟಾ ನೂತನ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

    ಮುಖಂಡರಾದ ಎಂ.ಎ. ಕನ್ನೂರ, ರಾಮು ಜಾಧವ, ರವಿಗೌಡ ಶಂ.ಬಿರಾದಾರ, ಬಸವರಾಜ ಕುರುವಿನಶೆಟ್ಟಿ, ಶಂಕರಗೌಡ ಬಿರಾದಾರ, ಪರಶುರಾಮ ಹಾವಡಿ, ಪ್ರಕಾಶ ಬಿರಾದಾರ (ಕಡೆಮನಿ), ಡಾ.ಪ್ರಕಾಶ ಬಿರಾದಾರ, ಶ್ರೀಶೈಲ ಕೋಟ್ಯಾಳ, ಬಾಳಾಸಾಹೇಬ ಬಿರಾದಾರ, ಶಾಂತಪ್ಪ ಮಾಳಿ, ಗುರುಪಾದ ಬಾಗಿ, ಮೌನೇಶ ಬಡಿಗೇರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts