More

    ಅಂಕಸಾಲೆ ಕ್ಷೇತ್ರ ಪುನರುತ್ಥಾನ, ಐತಿಹಾಸಿಕ ಪುಣ್ಯತಾಣ ಅಭಿವೃದ್ಧಿಗೆ ಸಂಘಟನೆಗಳ ಒಲವು

    ಯಶೋಧರ ಬಂಗೇರ ಮೂಡುಬಿದಿರೆ

    1200 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಅಂಕಸಾಲೆ ಕ್ಷೇತ್ರ ಹಲವು ದಶಕಗಳಿಂದ ಪಾಳು ಬಿದ್ದಿದ್ದು, ಇದರ ಪುನರುತ್ಥಾನಕ್ಕೆ ಶ್ರೀ ಕ್ಷೇತ್ರ ಅಂಕಸಾಲೆ ಚಾಮುಂಡಿ ಬೆಟ್ಟ ಟ್ರಸ್ಟ್ ಹಾಗೂ ಯುವ ಸಂಘಟನೆಗಳು ಮುಂದೆ ಬಂದಿವೆ.

    ಕಾರಣಿಕ ಕ್ಷೇತ್ರವಾಗಿ ಹೆಸರು ಪಡೆದಿರುವ ಈ ಕ್ಷೇತ್ರದಲ್ಲಿದ್ದ ದೈವ-ದೇವಸ್ಥಾನಗಳು ಹಲವು ದಶಕಗಳ ಹಿಂದೆ ನೆಲಸಮಗೊಂಡಿವೆ. ಪಾಳು ಬಿದ್ದಿರುವ ನಾಗನಕಟ್ಟೆ, ಸಿರಿಗಳ ಕಟ್ಟೆ, ಹನುಮಂತನ ಕಟ್ಟೆ ಹಾಗೂ ಈಶ್ವರ ಗುಡಿಗಳ ಕುರುಹುಗಳು ಇಲ್ಲಿ ಕಾಣಸಿಗುತ್ತವೆ. ದಟ್ಟ ಕಾಡಿನ ಮಧ್ಯೆ ಪಾಳು ಬಿದ್ದಿರುವ ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಅಂಕಸಾಲೆ ಚಾಮುಂಡಿ ಬೆಟ್ಟ ಟ್ರಸ್ಟ್ ಮುಂದೆ ಬಂದಿದ್ದು, ನೇತಾಜಿ ಬ್ರಿಗೇಡ್ ಯುವ ಸಂಘಟನೆ ಹಾಗೂ ಕೊಂಡಗಲ್ಲಿನ ಸತ್ಯನಾರಾಯಣ ಸಮಿತಿ ಟ್ರಸ್ಟ್ ಜತೆ ಕೈಜೋಡಿಸುತ್ತಿದೆ.

    ದಟ್ಟ ಕಾಡಿನ ಪ್ರದೇಶವನ್ನು ಶುದ್ಧ್ದಗೊಳಿಸಿ ಅಲ್ಲಿರುವ ಕುರುಹುಗಳನ್ನು ಪತ್ತೆ ಮಾಡಿ, ಊರ ಜನರ ಅಭಿಪ್ರಾಯದಂತೆ ಆದಿ ಆಲಡೆ ಕ್ಷೇತ್ರವಾಗಿ ಪರಿವರ್ತಿಸಲು ಟ್ರಸ್ಟ್ ಮುಂದಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ಸಂಘಟನೆಯ ಯುವಕರು, ಬಿಡುವಿನ ವೇಳೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

    ವಿಶೇಷ ಕ್ಷೇತ್ರ: ಪುರಾತನ ಸ್ಥಳದಲ್ಲಿರುವ ದೇವರನ್ನು ದುರ್ಗಾದೇವಿ ಅಥವಾ ಬಿದಿರೆಯ ದೇವಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ನಾಗದೇವರು ಇಲ್ಲಿನ ಮೂಲದೇವರು. ಇಲ್ಲಿ 1987ರಲ್ಲಿ ಅಷ್ಟಪಿಂಡು ನಾಗಮಂಡಲ ನಡೆದಿತ್ತು. ಆದಿ ಕ್ಷೇತ್ರವಾಗಿ ನೆಲೆಗೊಂಡ ನಾಗ ಗುಡಿಯಲ್ಲಿ 4 ದಿಕ್ಕಿನತ್ತ ಮುಖ ಮಾಡಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷ. ಅಂಕಸಾಲೆ ದೇವಸ್ಥಾನದಲ್ಲಿ ದೈವ-ದೇವರುಗಳ ನಿತ್ಯ ಪೂಜೆ ಕಾರ್ಯಗಳು ನಡೆಯುತ್ತಿತ್ತು. ರಕ್ತೇಶ್ಚರಿ, ಚಾಮುಂಡಿ, ಭದ್ರಕಾಳಿ, ಧೂಮಾವತಿ, ಪಂಜುರ್ಲಿ, ಗುಳಿಗ, ನಂದಿಗೋಣ, ಕ್ಷೇತ್ರಪಾಲ, ಈಶ್ವರ, ಗಣಪತಿ, ಹನುಮಂತ, ಸತ್ಯಸಾರಾಮಾನಿ ದೈವ ಹಾಗೂ ಮಾರಿಯಮ್ಮ ದೇವರುಗಳು ನೆಲೆಗೊಂಡಿವೆ. 125 ವರ್ಷಗಳ ಹಿಂದೆ ಊರ ಜನರು ಸೇರಿ ದೈವಗಳಿಗೆ ಕೋಲ ನಡೆಸುತ್ತಿದ್ದರು. ಇತಿಹಾಸದ ಪ್ರಕಾರ ಮೂಡುಬಿದಿರೆ ರಾಜ ಮನೆತನವನ್ನು ಆಳುತ್ತಿದ್ದ ಕುಲಶೇಖರ ಹಾಗೂ ಆಳುಪ ರಾಜರ ಆಳ್ವಿಕೆ ಕಾಲದ ಬಳಿಕ ಮೊಘಲ್ ರಾಜ ಮನೆತನದವರು ಆಳ್ವಿಕೆ ನಡೆಸುವ ಸಂದರ್ಭ ಅಂಕಸಾಲೆ ಕ್ಷೇತ್ರ ನಾಶ ಮಾಡಿದರು ಎಂಬುದನ್ನು ಶಿಲಾ ಶಾಸನಗಳಲ್ಲಿ ಕಾಣಬಹುದು.

    ಜಾತಿ-ಧರ್ಮ, ಭೇದ, ಭಾವವಿಲ್ಲದೆ ಸೌಹಾರ್ದದಿಂದ ಮುನ್ನಡೆದರೆ ಪುರಾತನ ಅಂಕಸಾಲೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು. ಪರಂಪರೆಗೆ ಅನುಗುಣವಾಗಿ ದೇವಸ್ಥಾನದ ಅಭಿವೃದ್ಧಿ ಹಾಗೂ ಹಿರಿಯ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಲಾಗುತ್ತದೆ

    ಅಜಿತ್ ಕುಮಾರ್
    ಶ್ರೀ ಕ್ಷೇತ್ರ ಅಂಕಸಾಲೆ ಚಾಮುಂಡಿ ಬೆಟ್ಟ ಟ್ರಸ್ಟ್ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts