More

    ರಾಮಮಂದಿರ ಧರ್ಮ ಪುನರುತ್ಥಾನ ಸಂಕೇತ: ಪೇಜಾವರ ಶ್ರೀ

    ಉಡುಪಿ: ಪರಕೀಯರ ದಾಳಿಗೆ ಒಳಗಾಗಿ ಪರಭಾರೆಯಾಗಿದ್ದ ರಾಮಜನ್ಮಸ್ಥಾನವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತೆ ಹಿಂದು ಸಮಾಜಕ್ಕೆ ಒಪ್ಪಿಸಿದ್ದು, ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ದೇವಾಲಯ ಹಿಂದು ಧರ್ಮದ ಪುನರುತ್ಥಾನದ ಸಂಕೇತವಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
    ಭಾನುವಾರ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟ ಪಂಗಡದ ಬಡಾವಣೆಗೆ ಮೊದಲ ಬಾರಿ ಭೇಟಿ ನೀಡಿ, ಮಠದ ವತಿಯಿಂದ ಪ್ರತಿ ಮನೆಗಳಿಗೆ ಕೊಡಮಾಡಿದ ರಾಮದೀಪವನ್ನು ಸಾಂಕೇತಿಕವಾಗಿ ಬೆಳಗಿಸಿ, ಅವರು ಮಾತನಾಡಿದರು.
    ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದು ಸಮಾಜದ ಸಹಕಾರ ಮತ್ತು ಸಹಭಾಗಿತ್ವ ಪಡೆಯಲು ಹಿಂದು ಸಮಾಜದ ವಿವಿಧ ವರ್ಗದ ಜನರನ್ನು ಭೇಟಿ ಮಾಡುತ್ತಿದ್ದೇವೆ. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ ಸುಭಿಕ್ಷೆ ಸಮೃದ್ಧಿ ನೆಲೆಸಲು ಪ್ರತಿನಿತ್ಯ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ, ರಾಮಮಂತ್ರ ಜಪ ನಡೆಸಬೇಕು. ಪ್ರತಿಯೊಬ್ಬರು ರಾಮನ ಜೀವನಾದರ್ಶಗಳನ್ನು ಪಾಲಿಸಬೇಕು ಎಂದು ಆಶಿಸಿದರು.
    100ಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿದ ಶ್ರೀಗಳನ್ನು ಸ್ಥಳೀಯರು ಸಾಮೂಹಿಕ ಭಜನೆಯೊಂದಿಗೆ ಬರಮಾಡಿಕೊಂಡರು. ರವಿ ಕರ್ಕೇರ ಮತ್ತು ಸದಾನಂದ ಎಂಬುವರ 2 ಮನೆಗಳಿಗೆ ತೆರಳಿದ ಶ್ರೀಗಳು ಸಾಂಕೇತಿಕವಾಗಿ ರಾಮದೀಪ ಬೆಳಗಿಸಿ, ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿ ರಾಮ ಮಂತ್ರ ಉಪದೇಶ ನೀಡಿದರು.
    ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮಠದ ಅಧೀನದಲ್ಲಿರುವ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಿಂದ ತಂದ ಲಡ್ಡು ಪ್ರಸಾದವನ್ನು ಕಾಲನಿ ನಿವಾಸಿಗಳಿಗೆ ಹಂಚಲಾಯಿತು.
    ಇದೇ ಸಂದರ್ಭದಲ್ಲಿ ಶ್ರೀಗಳು ಕಾಲನಿ ಸಮೀಪದ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಮೂಕಾಂಬಿಕಾ ಭಜನಾ ಮಂದಿರಕ್ಕೆ ಭೇಟಿ ನೀಡಿ ಮಂಗಳಾರತಿ ಬೆಳಗಿದರು. ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜನಾ ಮಂದಿರ ಅಧ್ಯಕ್ಷ ಜಯ ಸಾಲ್ಯಾನ್, ಮಾಜಿ ಅಧ್ಯಕ್ಷ ಮಾಧವ ಕರ್ಕೇರ, ಜೀವನ್ ಪಾಳೆಕಟ್ಟೆ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂತಿ ಭಟ್, ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts