More

    ಅಂಕಲಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

    ಮಾಂಜರಿ: ‘ಗ್ರಾಮಗಳ ಅಭಿವೃದ್ಧಿಯೇ ರಾಮರಾಜ್ಯದ ಕನಸು ನನಸಾಗಲು ಬುನಾದಿ’ ಎಂದು ಗಾಂಧೀಜಿ ಹೇಳಿದ್ದರು. ಹಳ್ಳಿಗಳು ಪ್ರಗತಿ ಹೊಂದಿದರೆ ದೇಶದ ಊರ್ಧ್ವಮುಖಿ ಬೆಳವಣಿಗೆ ವೇಗ ಪಡೆಯುತ್ತದೆ ಎಂಬುದನ್ನು ಸಾಮಾಜಿಕ ಹಾಗೂ ಆರ್ಥಿಕ ತಜ್ಞರು ಈಗಲೂ ಪ್ರತಿಪಾದಿಸುತ್ತಾರೆ. ಲಭ್ಯ ಸಂಪನ್ಮೂಲ ಹಾಗೂ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯಿತಿ ಪ್ರಸಕ್ತ ವರ್ಷದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮುಡಿಯೊಡ್ಡಿದೆ.

    ಗ್ರಾಮದ ಸಮಗ್ರ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತಕ್ಕೆ ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕೃಷ್ಣಾ ನದಿ ದಡದ ಅಂಕಲಿ ಗ್ರಾಮ ಭಾಜನವಾಗಿದ್ದು, ಅಭಿವೃದ್ಧಿ ಹೊಸ ಕನಸುಗಳಿಗೆ ನೀರೆರೆಯುವಂತೆ ಮಾಡಿದೆ. ಸ್ಥಳೀಯ ಆಡಳಿತದಲ್ಲಿ ಉತ್ತಮ ಕಾರ್ಯನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂಕಲಿ ಗ್ರಾಮ ಪಂಚಾಯಿತಿಗೆ ಗಾಂಧಿಗ್ರಾಮ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹುಟ್ಟೂರು ಅಂಕಲಿ ಗ್ರಾಮವೀಗ ನಗರದಂತೆ ಕಂಗೊಳಿಸುತ್ತಿದೆ. ಪಟ್ಟಣಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಸುಂದರ ಗ್ರಾಮವಾಗಿ ಗಮನ ಸೆಳೆಯಲಾರಂಭಿಸಿದೆ. ಅಂಕಲಿ ಸರ್ಕಾರ ಮನೆತನದ ಮಾನದ ಕುದುರೆ ಲಕ್ಷಾಂತರ ಜನರ ಆರಾಧ್ಯದೈವ. ಮಹಾರಾಷ್ಟ್ರದ ಪಂಢರಪುರದ ವಿಠ್ಠಲ-ರುಕ್ಮಿಣಿ ಯಾತ್ರೆಗೆ ಪ್ರತಿ ವರ್ಷ ಈ ಮಾನದ ಕುದುರೆ ಹೋಗುವುದು ಗ್ರಾಮದ ಐತಿಹಾಸಿಕ ವೈಶಿಷ್ಟ್ಯ. ಗ್ರಾಮಕ್ಕೆ ಒಲಿದು ಬಂದಿರುವ ಗಾಂಧಿ ಗ್ರಾಮ ಪುರಸ್ಕಾರ ಇನ್ನಷ್ಟು ಕೀರ್ತಿ ತಂದಿದೆ.

    ಅ.2ರಂದು ಬೆಂಗಳೂರಿನಲ್ಲಿರುವ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಅಂಕಲಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಉಮರಾಣಿ ಹಾಗೂ ಉಪಾಧ್ಯಕ್ಷೆ ಲತಾ ಬುಬನಾಳೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದ ಅಸೋದೆ ಅವರಿಗೆ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಿದರು. ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ಇದ್ದರು.

    ಡಾ.ಕೋರೆ ಹುಟ್ಟೂರು ‘ಅಂಕಲಿ’

    ಚಿಕ್ಕೋಡಿ ತಾಲೂಕಿನ ಅಂಕಲಿ ಹಸಿರು ಹೊನ್ನು ಧರಿಸಿದ ಭೂತಾಯಿಯ ಮಡಿಲಿನಲ್ಲಿರುವ ವಿಶಿಷ್ಟ ಗ್ರಾಮ. ಕೆಎಲ್ಇ ಸಂಸ್ಥೆಯ ಬೇರುಗಳನ್ನು ಜಗದಗಲಕ್ಕೂ ಚಾಚುವಂತೆ ಮಾಡಿದ ಕಾರ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಹುಟ್ಟೂರು ಈ ಅಂಕಲಿ. ಡಾ.ಕೋರೆ ಅವರು ತಮ್ಮ ಜನ್ಮಭೂಮಿ ಅಂಕಲಿ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುತ್ತಲೇ ಬಂದಿದ್ದಾರೆ. ಯಾವ ಪಟ್ಟಣಕ್ಕೂ ಕಡಿಮೆ ಇಲ್ಲದಂತೆ ಅಂಕಲಿ ಬೆಳೆಯುವಲ್ಲಿ ಕೋರೆ ಅವರ ನಿಸ್ವಾರ್ಥ ಸೇವೆಯ ಕೊಡುಗೆ ಇದೆ. ಆಗಾಗ ಅಂಕಲಿಗೆ ತೆರಳಿ ಬಾಲ್ಯದ ನವಿರು ಹುಡುಕುವ ಕೋರೆ ಅವರು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದಕ್ಕೆ ಇನ್ನಿಲ್ಲದ ಹರ್ಷ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ, ಸಮೂಹ, ಸಂಸ್ಥೆ ಹಾಗೂ ಸರ್ಕಾರ ಒಟ್ಟಾಗಿ ಸಮನ್ವಯದಿಂದ ಕೈಜೋಡಿಸಿ ಕೆಲಸ ಮಾಡಿದರೆ ಪ್ರತಿ ಗ್ರಾಮವೂ ಅಂಕಲಿಯಾಗಲು ಸಾಧ್ಯವಿದೆ. ಪುರಸ್ಕಾರ ದೊರೆಯುವಂತೆ ಕೆಲಸ ಮಾಡಿದ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೂ ಗ್ರಾಮಸ್ಥರ ಸಹಕಾರ ನೆನೆದಿರುವ ಪ್ರಭಾಕರ ಕೋರೆ ಸ್ವಗ್ರಾಮದ ಅಭಿವೃದ್ಧಿ ಮತ್ತು ಹಿತ ಕಾಯಲು ಸದಾ ಸಿದ್ಧ ಎಂದಿದ್ದಾರೆ.

    ಪಕ್ಷಭೇದ ಮರೆತು ಎಲ್ಲ ಸದಸ್ಯರ ಸಹಕಾರದಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿರುವುದಕ್ಕೆ ಗಾಂಧಿ ಗ್ರಾಮ ಪ್ರಶಸ್ತಿ ದೊರೆತಿರುವುದು ಸಂತಸವುಂಟು ಮಾಡಿದೆ.
    | ವಿನೋದ ಅಸೋದೆ ಪಿಡಿಒ ಅಂಕಲಿ

    ಅಂಕಲಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದ್ದು ಹೆಮ್ಮೆಯ ವಿಷಯ. ಎಲ್ಲ ಸದಸ್ಯರು ಹಾಗೂ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತಷ್ಟು ಗ್ರಾಮಾಭಿವೃದ್ಧಿ ಸಾಧಿಸಲು ಶ್ರಮಿಸಲಾಗುವುದು.
    | ಬಾಳಪ್ಪ ಉಮ್ರಾಣಿ ಗ್ರಾಪಂ ಅಧ್ಯಕ್ಷ ಅಂಕಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts