More

    ರಾಜ್ಯಪಾಲರ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

    ಗಂಗಾವತಿ: ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಜ.10ರ ಭಾನುವಾರದಂದು ಭೇಟಿ ನೀಡಲಿರುವ ಗವರ್ನರ್ ವಜುಭಾಯಿ ವಾಲಾ ಅವರ ಸ್ವಾಗತಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಸಜ್ಜಾಗಿದ್ದು, ಸೂಕ್ತ ಬಂದೋಬಸ್ತ್ ಆಯೋಜಿಸಲಾಗಿದೆ.

    ರಾಜಧಾನಿಯಿಂದ 11.30ಕ್ಕೆ ಆನೆಗೊಂದಿ ಉತ್ಸವದ ಜಾಗದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಗವರ್ನರ್ ಆಗಮಿಸಲಿದ್ದು, ಜಿಲ್ಲಾಡಳಿತದಿಂದ ಗಾರ್ಡ್ ಆ್ ಆನರ್ ನಂತರ ರಸ್ತೆ ಮೂಲಕ ಅಂಜನಾದ್ರಿ ಬೆಟ್ಟಕ್ಕೆ ತೆರಳಲಿದ್ದಾರೆ. ಹೆಲಿಪ್ಯಾಡ್ ಸ್ಥಳದಲ್ಲಿ ತಾತ್ಕಾಲಿಕವಾಗಿ ಗ್ರೀನ್ ರೂಂ, ಮೊಬೈಲ್ ಟಾಯ್ಲೆಟ್, ವಾಷ್ ರೂಂ ಮತ್ತು ರೆಸ್ಟ್ ರೂಂ ನಿರ್ಮಿಸಲಾಗಿದೆ. 12 ಗಂಟೆಗೆ ಬೆಟ್ಟದ ಪಾದಗಟ್ಟೆ ಬಳಿ ತೆರಳಿ ಶಿಲಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಂದು ಗಂಟೆ ಬೆಟ್ಟದ ಬಳಿ ಇರಲಿದ್ದಾರೆ. 1.15 ನಿಮಿಷಕ್ಕೆ ಹೆಲಿಪ್ಯಾಡ್ ಮೂಲಕ ರಾಜಧಾನಿಗೆ ತೆರಳಲಿದ್ದಾರೆ.

    ಈಗಾಗಲೇ ಭದ್ರತೆ ಸಿಬ್ಬಂದಿ ರಸ್ತೆ ಮೂಲಕ ರಿಹರ್ಸಲ್ ನಡೆಸಿದ್ದು, ಝಡ್ ಪ್ಲಸ್ ಸೆಕ್ಯೂರಿಟಿ ಹಿನ್ನೆಲೆಯಲ್ಲಿ ದೇವಾಲಯದ ಬಳಿ 11 ಗಂಟೆ ನಂತರ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಹೆಲಿಪ್ಯಾಡ್ ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ, ಲೋಕೋಪಯೋಗಿ ಇಲಾಖೆ ಎಇಇ ಸುರೇಶ ಐಲಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

    ಈ ಹಿಂದೆ ನಾನಾ ವಿವಾದದಿಂದ ಮಹಾಂತ ವಿದ್ಯಾದಾಸ ಅವರನ್ನು ಬೆಟ್ಟದಿಂದ ಹೊರ ಹಾಕಲಾಗಿತ್ತು. ಆದರೆ, ಜ.10ರ ಭಾನುವಾರ ಶಿಲಾಪೂಜೆ ಕಾರ್ಯಕ್ರಮವು ಮಹಾಂತ ವಿದ್ಯಾದಾಸ ನೇತೃತ್ವದಲ್ಲಿ ಆಯೋಜಿಸಿರುವುದು ಬಿಜೆಪಿ ಮುಖಂಡರು ಮುಜಗರಕ್ಕೊಳಪಡುವಂತಾಗಿದೆ. ದೇವಾಲಯವನ್ನು ತಮ್ಮ ಸುಪರ್ದಿಗೆ ನೀಡುವಂತೆ ಕೋರ್ಟ್ ಮೆಟ್ಟಿಲು ಹತ್ತಿದ್ದ ಮಹಾಂತ ವಿದ್ಯಾದಾಸ ಬಾಬಾಗೆ ಸದ್ಯಕ್ಕೆ ಪೂಜೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ. ಬಾಬಾ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪಾಲ್ಗೊಳ್ಳುತ್ತಿರುವುದು ಜಿಲ್ಲಾಡಳಿತಕ್ಕೂ ಇರಸುಮುರಸಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದಾರೆ.

    ವಿವಾದಿತ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಗೊತ್ತಾಗಿದ್ದು, ಆಹ್ವಾನ ಪತ್ರಿಕೆಯೂ ತಲುಪಿದೆ. ಕಾರ್ಯಕ್ರಮ ಪೂರ್ವ ನಿಗದಿ ಹಿನ್ನೆಲೆಯಲ್ಲಿ ವ್ಯವಸ್ಥೆಗೆ ಮುಂದಾಗಿದ್ದೇವೆ.
    | ಎಂ.ರೇಣುಕಾ, ತಹಸೀಲ್ದಾರ್, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts