More

    ಶ್ರೀ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರ- ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ

    ಗಂಗಾವತಿ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ದೇವಾಲಯ ಜೀರ್ಣೋದ್ಧಾರ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

    ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಕೈಗೆತ್ತಿಕೊಂಡ ಜೀರ್ಣೋದ್ಧಾರ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಹಂಪಿ ಮತ್ತು ಆನೆಗೊಂದಿ ಭಾಗದ ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿತ ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪಂಪಾಸರೋವರದ ಪುಷ್ಕರಣಿ ನವೀಕರಣಗೊಳಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಪರವಾನಗಿಯೊಂದಿಗೆ ವಿಜಯನಗರ ವಾಸ್ತು ಶೈಲಿಗೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲಾಗುವುದು. ಗರ್ಭಗುಡಿ, ಗೋಪುರ,ಆವರಣ ಪುನರ್ ನಿರ್ಮಿಸಲಾಗುವುದು. ಪರಂಪರೆ ಉಳಿಸುವ ನಿಟ್ಟಿನಲ್ಲಿ ಜನರ ನೆರವಿನೊಂದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು,ಮೂಲಸ್ವರೂಪ ಬದಲಿಸಲ್ಲ ಎಂದರು.

    ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಎರಡು ದಶಕಗಳ ಹಿಂದೆ ದೇವಾಲಯ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪ ಮಾಡಿದ್ದು, ಪುಣ್ಯದ ಕಾರ್ಯ ಕೂಡಿಬಂದಿದೆ. ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಗತ ವೈಭವ ಸೃಷ್ಟಿಸುವ ಸಂಕಲ್ಪ ಮಾಡಲಾಗಿದೆ ಎಂದರು.

    ಇದಕ್ಕೂ ಗಣ್ಯರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ್ದು, ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಮತ್ತು ಹೋಮಹವನದಲ್ಲಿ ಶ್ರೀರಾಮುಲು ಮತ್ತು ರೆಡ್ಡಿ ಜಂಟಿಯಾಗಿ ಕುಳಿತು ಪೂಜೆ ನೆರವೇರಿಸಿದರು. ನಿಗದಿತಕ್ಕಿಂತ 4 ಗಂಟೆ ತಡವಾಗಿ ಬಂದಿದ್ದರಿಂದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾದು ಸುಸ್ತಾಗಿದ್ದು, ಬಹುತೇಕರು ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.

    ದೇವಾಲಯ ಮುಖ್ಯಸ್ಥ ಬ್ರಹ್ಮಾನಂದಯ್ಯಸ್ವಾಮೀಜಿ, ಶಾಸಕರಾದ ಪರಣ್ಣಮುನವಳ್ಳಿ, ಸೋಮಶೇಖರರೆಡ್ಡಿ, ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಸಂತೋಷ ಕೆಲೋಜಿ, ಮನೋಹರಗೌಡ ಹೇರೂರು, ಎಚ್.ಸಿ.ಯಾದವ್, ಗೌರೀಶ ಬಾಗೋಡಿ, ಅಮರಜ್ಯೋತಿ ವೆಂಕಟೇಶ ಇತರರಿದ್ದರು.

    ಆನೆಗೊಂದಿ ಭಾಗದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಸಚಿವ ಬಿ.ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನರೆಡ್ಡಿ ನಿರ್ಧಾರ ಸೂಕ್ತವಾಗಿದ್ದು, ಈ ಭಾಗದ ಜನರ ಭಾಗ್ಯವಾಗಿದೆ.
    | ಪರಣ್ಣಮುನವಳ್ಳಿ ಶಾಸಕ ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts