More

    ಪಾವಗಡದಲ್ಲಿ ಆಂಧ್ರ ಶೈಲಿ ರಾಜಕಾರಣ ; ಕುಡಿಯುವ ನೀರಿನ ಬವಣೆ ನೀಗಿಲ್ಲ ; ಗಡಿಭಾಗದಲ್ಲಿ ಗರಿಗೆದರಿದ ರಾಜಕೀಯ

    ಪಾವಗಡ: ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾವಗಡ ತಾಲೂಕಿನಲ್ಲಿ ಈಗ ಎಲ್ಲೆಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಪಾವಗಡದಲ್ಲಿ ಆಂಧ್ರ ಶೈಲಿಯ ರಾಜಕಾರಣದ ಪ್ರಭಾವ ಕಾಣಬಹುದು. ಗಡಿಭಾಗದ ಹಳ್ಳಿಗಳು ಸಮಸ್ಯೆಗಳನ್ನೇ ಹೊದ್ದುಕೊಂಡಿದ್ದರೂ ಕ್ಷೇತ್ರದಲ್ಲಿ ಚುನಾವಣಾ ರಾಜಕಾರಣ ವಿಭಿನ್ನವಾಗಿದೆ.

    ವಿಶ್ವ ಭೂಪಟದಲ್ಲಿ ಪಾವಗಡಕ್ಕೆ ‘ಸೋಲಾರ್ ಪಾರ್ಕ್’ ಸ್ಥಾನ ದೊರಕಿಸಿಕೊಟ್ಟಿದೆಯಾದರೂ ಈ ಜನರ ಶುದ್ಧ ನೀರಿನ ಹಂಬಲ ಹಾಗೇ ಇದೆ. ಪ್ರತಿ ಚುನಾವಣೆಯಲ್ಲಿ ಮತದಾರ ಜನಪ್ರತಿನಿಧಿಗಳಿಗೆ ‘ನೀರು’ ಕುಡಿಸುತ್ತಾನಾದರೂ ಗೆದ್ದು ಹೋಗುವ ಪ್ರತಿನಿಧಿಗಳು ಜನರ ಕುಡಿಯುವ ನೀರಿನ ಬವಣೆ ನೀಗಿಸಿಲ್ಲ. ಪಾವಗಡ ತಾಲೂಕಿನ 34 ಗ್ರಾಪಂಗಳ ಪೈಕಿ ವೈ.ಎನ್.ಹೊಸಕೋಟೆ ಹೊರತುಪಡಿಸಿ ಉಳಿದ 33 ಗ್ರಾಪಂಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಸ್ಥಳೀಯ ಚುನಾವಣೆಯಾಗಿದ್ದರಿಂದ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಾಗಲಿದ್ದು, 526 ಗ್ರಾಪಂ ಸ್ಥಾನಗಳಿಗೆ ತೀವ್ರ ಪೈಪೋಟಿ ಇದೆ.

    ಗರಿಗೆದರಿದ ರಾಜಕೀಯ ಚಟುವಟಿಕೆ: ಕಾಂಗ್ರೆಸ್, ಜೆಡಿಎಸ್ ಅಲ್ಲದೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಬಲಿಷ್ಠಗೊಳಿಸಲು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮೂರು ಪ್ರಮುಖ ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳನ್ನಾಗಿ ಪಕ್ಷ ನಿಷ್ಠ ಕಾರ್ಯಕರ್ತರನ್ನು ಆಯ್ಕೆ ಮಾಡುವ ಕಸರತ್ತು ನಡೆಸಿವೆ. ಆದರೆ, ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು ಸಾಮಾನ್ಯವಾಗಿದೆ.
    ಕಳೆದ ಬಾರಿ 33 ಗ್ರಾಪಂಗಳ ಪೈಕಿ ಜೆಡಿಎಸ್, ಕಾಂಗ್ರೆಸ್ ಬೆಂಬಲಿತರು ಸಮಬಲವಾಗಿ ಆಯ್ಕೆಯಾಗಿದ್ದರು. ನಾಗಲಮಡಿಕೆ, ರಂಗಸಮುದ್ರ ಗ್ರಾಪಂನಲ್ಲಿ ತಲಾ 1 ಸ್ಥಾನ ಹಾಗೂ ಕನ್ನಮೇಡಿ ಗ್ರಾಪಂನಲ್ಲಿ 3 ಸ್ಥಾನಗಳು ಸೇರಿ ಬಿಜೆಪಿ ಒಟ್ಟು 5 ಸ್ಥಾನಗಳನ್ನು ಗೆದ್ದಿತ್ತು. ಇದುವರೆಗೆ ಹಳ್ಳಿಗಳಲ್ಲಿ ಬಿಜೆಪಿ ಶಕ್ತಿಹೀನವಾಗಿದ್ದು ಶಿರಾ ಉಪಸಮರ ಚುನಾವಣೆ ಬಳಿಕ ಸಾಕಷ್ಟು ಚೇತರಿಸಿಕೊಂಡಂತೆ ಕಾಣುತ್ತಿದೆ. ಜತೆಗೆ ಪಕ್ಷದ ಸರ್ಕಾರ ಇರುವುದರಿಂದ ಪಕ್ಷ ಬಲವರ್ಧನೆಗೆ ಗ್ರಾಪಂ ಚುನಾವಣೆಯನ್ನು ಮುಖಂಡರು ಬಳಸಿಕೊಳ್ಳುತ್ತಿದ್ದಾರೆ.

    ಜೆಡಿಎಸ್ ಹೋರಾಟ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲನ್ನೊಪ್ಪಿಕೊಂಡಿದ್ದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಲು ಗ್ರಾಪಂ ಚುನಾವಣೆಯನ್ನು ಪರಿಗಣಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಕೂಡ ಇದೇ ತಾಲೂಕಿನವರಾಗಿದ್ದು ಗ್ರಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಹಳ್ಳಿಗಳಿಗೆ ಭೇಟಿ ನೀಡಿ ಪಕ್ಷದ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

    ಕಾಂಗ್ರೆಸ್‌ಗೆ ತಾಲೂಕಿನಲ್ಲಿ ಅಪ್ಪ-ಮಕ್ಕಳೇ ಹೈಕಮಾಂಡ್ ಇದ್ದಂತೆ. ಹಾಲಿ ಶಾಸಕ, ಮಾಜಿ ಸಚಿವ ವೆಂಕಟರವಣಪ್ಪ ಹಾಗೂ ಅವರ ಪುತ್ರ ಜಿಪಂ ಸದಸ್ಯ ಎಚ್.ವಿ.ವೆಂಕಟೇಶ್ ಅವರು ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ಹೆಚ್ಚು ಗ್ರಾಪಂಗಳನ್ನು ವಶಪಡಿಸಿಕೊಳ್ಳಲು ರಣತ್ರಂತ್ರ ಹೆಣೆದಿದ್ದಾರೆ. ಆಯ್ಕೆಯಲ್ಲಿ ಗೊಂದಲಕ್ಕೆ ಆಸ್ಪದ ಕೊಡದೆ ಎಚ್ಚರಿಕೆ ಹೆಜ್ಜೆ ಇಡುವ ಮೂಲಕ ವೇದಿಕೆ ಸಿದ್ಧಪಡಿಸಿದ್ದಲ್ಲದೆ, ತಾವೇ ಹಳ್ಳಿಹಳ್ಳಿಗೆ ತೆರಳಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ವೆಂಕಟರವಣಪ್ಪ ಮಾಡುತ್ತಿದ್ದಾರೆ.

    ಬಿಜೆಪಿಯಲ್ಲಿ ಉತ್ಸಾಹ: ಇನ್ನು ಶಿರಾ ಉಪಸಮರದ ಗೆಲುವು ನೆಲೆಯೇ ಇಲ್ಲದ ಪಾವಗಡ ತಾಲೂಕಿನಲ್ಲೂ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದೆ. ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವುದರೊಂದಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸಲು ಸಂಘ ಪರಿವಾರದ ತಂತ್ರ ರಚಿಸಿದೆ. ಪಕ್ಷದ ತಾಲೂಕು ಘಟಕದ ಅಧ್ಯಕ್ಷ ರವಿಶಂಕರ್‌ನಾಯ್ಕ ನೇತೃತ್ವದಲ್ಲಿ ಪಕ್ಷದ ಮುಖಂಡರು ಸಂಘಟನೆಯಲ್ಲಿ ತೊಡಗಿದ್ದು, ಪ್ರತಿ ಗ್ರಾಮಪಂಚಾಯಿತಿಗೊಬ್ಬರಂತೆ ಮುಖಂಡರ ಮೂಲಕ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸಿದೆ.

    ಜೆಡಿಎಸ್ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕಾರ್ಯಕರ್ತರಲ್ಲಿ ಗುಂಪುಗಾರಿಕೆಗೆ ಆಸ್ಪದ ಕೊಡದೆ ಹೆಚ್ಚು ಗ್ರಾಪಂಗಳನ್ನು ಗೆಲ್ಲಲು ಆಕಾಂಕ್ಷಿಗಳ ಜತೆ ಕೂತು ಚರ್ಚಿಸಿದ್ದೇವೆ. ನನ್ನ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಹೆಚ್ಚು ಸ್ಥಾನ ಗೆಲ್ಲಲಾಗುವುದು.
    ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ ಮಾಜಿ ಶಾಸಕ

    ಗ್ರಾಪಂ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿತರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಗುರಿ. ಹೆಚ್ಚು ಗ್ರಾಪಂಗಳನ್ನು ವಶಕ್ಕೆ ತೆಗೆದುಕೊಂಡು ಪಕ್ಷದ ಬಲವರ್ಧನೆ ಜತೆಗೆ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಪೂರಕವಾಗಿ ವಾತಾವರಣ ಸೃಷ್ಟಿಸಲಾಗುವುದು.
    ವೆಂಕಟರವಣಪ್ಪ ಕಾಂಗ್ರೆಸ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts