More

    ಕಲಘಟಗಿ ಪಪಂಗೆ ಅಧ್ಯಕ್ಷೆ ಅನಸೂಯಾ, ಉಪಾಧ್ಯಕ್ಷೆ ಯಲ್ಲವ್ವ

    ಕಲಘಟಗಿ: ನಿರೀಕ್ಷೆಯಂತೆಯೇ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಗದ್ದುಗೆ ಬಿಜೆಪಿ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಅನಸೂಯಾ ಹೆಬ್ಬಳ್ಳಿಮಠ, ಉಪಾಧ್ಯಕ್ಷರಾಗಿ ಯಲ್ಲವ್ವ ಶಿಗ್ಲಿ ಶುಕ್ರವಾರ ಆಯ್ಕೆಯಾದರು.

    ಪಪಂನ ಒಟ್ಟು 17 ಸದಸ್ಯರ ಬಲಾಬಲದಲ್ಲಿ ಬಿಜೆಪಿ 9, ಕಾಂಗ್ರೆಸ್- 3, ಜೆಡಿಎಸ್-2 ಹಾಗೂ ಪಕ್ಷೇತರ-3 ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಅನಸೂಯಾ ಹೆಬ್ಬಳ್ಳಿಮಠ, ಜೆಡಿಎಸ್ ಸದಸ್ಯೆ ಶಕುಂತಲಾ ಬೋಳಾರ ನಾಮಪತ್ರ ಸಲ್ಲಿಸಿದ್ದರು. ಎಲ್ಲ 17 ಸದಸ್ಯರು, ಶಾಸಕ ಸಿ.ಎಂ. ನಿಂಬಣ್ಣವರ ಮತದಾನ ಮಾಡಿದರು.

    ಕಾಂಗ್ರೆಸ್​ನ 3, ಜೆಡಿಎಸ್​ನ 2 ಸೇರಿ 5 ಮತಗಳನ್ನು ಶಕುಂತಲಾ ಬೋಳಾರ ಪಡೆದರೆ, ಬಿಜೆಪಿಯ 9, ಪಕ್ಷೇತರ 3, ಶಾಸಕರ ಮತ ಸೇರಿ 13 ಮತಗಳನ್ನು ಅನಸೂಯಾ ಹೆಬ್ಬಳ್ಳಿಮಠ ಪಡೆದು 8 ಮತಗಳ ಅಂತರದಿಂದ ವಿಜಯದ ಮಾಲೆ ಧರಿಸಿದರು. ಎಸ್.ಸಿ. ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಯಲ್ಲವ್ವ ಶಿಗ್ಲಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾದ ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರು ಪಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಘೊಷಿಸಿದರು. ಶಾಸಕ ಸಿ.ಎಂ. ನಿಂಬಣ್ಣವರ, ಸಿಪಿಐ ವಿಜಯ ಬಿರಾದಾರ, ಭಾಗ್ಯಶ್ರೀ ಹುಗ್ಗಿ, ವೆಂಕಟೇಶ ನಾಗನೂರ, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ನಾಗರಾಜ ಪಾಟೀಲ, ಸುರೇಶ ಕವಟಗಿ, ಪ್ರಕಾಶ ಛಲವಾದಿ, ಮಂಜುನಾಥ ಕುಂಬಾರ ಇದ್ದರು.

    ಕಲಘಟಗಿ ಪಟ್ಟಣದ ಅಭಿವೃದ್ಧಿಗೆ ಸಹಕಾರಿ

    ಕಲಘಟಗಿ: ಪಪಂ ದಶಕದಿಂದ ಕೈ ತೆಕ್ಕೆಯಲ್ಲಿದ್ದ ಕಾರಣ ಕಲಘಟಗಿ ಪಟ್ಟಣದ ಅಭಿವೃದ್ಧಿ ಗಗನ ಕುಸುಮವಾಗಿತ್ತು. ಈಗ ಪಪಂ ಅಧಿಕಾರ ಬಿಜೆಪಿಗೆ ದೊರೆತಿದೆ. ಪಟ್ಟಣದಾದ್ಯಂತ ಮೂಲಸೌಕರ್ಯಗಳನ್ನು ಕಲ್ಪಿಸಲು ನೂತನ ಆಡಳಿತ ಮಂಡಳಿ ಕಂಕಣಬದ್ಧವಾಗಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ರಾಜಕೀಯ ಕುತಂತ್ರದಿಂದ ಅಧಿಕಾರದ ಗದ್ದುಗೆ ಏರಲು ಹಿಂಬಾಗಿಲಿನಿಂದ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಿಜೆಪಿ, ಪಕ್ಷೇತರ ಸದಸ್ಯರ ಒಮ್ಮತದ ನಿರ್ಣಯದಿಂದ ಪಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು ಎಂದರು. ಬಸವರಾಜ ಕುಂದಗೋಳಮಠ, ಬಸವರಾಜ ಶೆರೇವಾಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts