More

    ಮತ್ತೆ ಶುರುವಾಯ್ತು ಅಕ್ರಮ ಮರಳು ದಂಧೆ

    ರಾಣೆಬೆನ್ನೂರ: ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ತುಂಗಭದ್ರಾ ನದಿ ಪಾತ್ರದಲ್ಲಿ ನೀರು ಹರಿವು ತಗ್ಗಿದೆ. ಇದರ ಬೆನ್ನಲ್ಲೇ ನದಿಯ ಒಡಲು ಬಗೆದು ಅಕ್ರಮವಾಗಿ ಮರಳು ಸಾಗಿಸುವ ದಂಧೆ ತೀವ್ರ ಸ್ವರೂಪ ಪಡೆದುಕೊಂಡಿದೆ.

    ಇದಕ್ಕೆ ಸಾಕ್ಷಿಯೆಂಬಂತೆ ತಾಲೂಕಿನ ಕುಮಾರಪಟ್ಟಣ ಬಳಿಯ ನಲವಾಗಿಲ ಗ್ರಾಮದ ಮಾರುತಿ ಎರಗುಂಟಿ ಎಂಬವರಿಗೆ ಸೇರಿದ ಒಂದು ಟಿಪ್ಪರ್ ವಾಹನ ಹಾಗೂ ಇತರ ಎರಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಮೂರು ಲಾರಿಗಳಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಹರ ಠಾಣೆ ಪೊಲೀಸರು ನಗರದ ಪಿ.ಬಿ. ರಸ್ತೆಯ ಎನ್​ವಿ ಹೋಟೆಲ್ ಬಳಿ ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಲಾರಿ ವಶಪಡಿಸಿಕೊಳ್ಳುತ್ತಿದ್ದಂತೆ ಚಾಲಕ ನಾಪತ್ತೆಯಾಗಿದ್ದಾನೆ. ಮರಳು ತುಂಬಿಕೊಂಡು ಬಂದಿರುವ ಟಿಪ್ಪರ್​ಗೆ ಯಾವುದೇ ಪಾಸ್ ಹಾಗೂ ಪರ್ವಿುಟ್ ಇರಲಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುವಂತೆ ಶಹರ ಠಾಣೆ ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿತ್ತು. ಹೀಗಾಗಿ ಮರಳು ತೆಗೆಯಲು ಯಾರೂ ಬರುವುದಿಲ್ಲ ಎಂದು ಅಧಿಕಾರಿಗಳು ಅಕ್ರಮ ಮರಳು ಸಾಗಾಟಗಾರರ ಮೇಲೆ ಯಾವುದೇ ನಿಗಾ ಇಟ್ಟಿರಲಿಲ್ಲ. ಆದರೆ, ಇದನ್ನೇ ವರದಾನವಾಗಿಸಿಕೊಂಡ ಅಕ್ರಮ ದಂಧೆಕೋರರು ತಾಲೂಕಿನ ನಲವಾಗಿಲ, ಐರಣಿ, ಬೇಲೂರು, ಉದಗಟ್ಟಿ, ಹರನಗಿರಿ, ಕೋಣನತಂಬಗಿ ಸೇರಿ ಇತರ ಗ್ರಾಮಗಳ ಬಳಿ ತುಂಗಭದ್ರಾ ನದಿಪಾತ್ರದಿಂದ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ.

    ಆದ್ದರಿಂದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಅಕ್ರಮ ಮರಳು ದಂಧೆ ತಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದಿದ್ದೇವೆ. ಇನ್ಮುಂದೆ ಬೀಟ್ ಸಿಬ್ಬಂದಿಗೆ ತಿಳಿಸಿ ಹೆಚ್ಚಿನ ಗಸ್ತಿಗೆ ಸೂಚಿಸಲಾಗುವುದು. ಅಕ್ರಮವಾಗಿ ಮರಳು ಸಾಗಾಟ ಕಂಡು ಬಂದರೆ, ಜನತೆ ಕೂಡ ನೇರವಾಗಿ ನಮಗೆ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ.

    | ಟಿ.ವಿ. ಸುರೇಶ, ಡಿವೈಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts