More

    ಗುರುವಿನಲ್ಲಿ ಇರಬೇಕಾದುದು ನಂಬಿಕೆಯೋ? ವಿಶ್ವಾಸವೋ?

    ಗುರುವಿನಲ್ಲಿ ಇರಬೇಕಾದುದು ನಂಬಿಕೆಯೋ? ವಿಶ್ವಾಸವೋ?ನಿಮ್ಮ ಅನುಭವದಲ್ಲಿ ಇಲ್ಲದಿರುವುದನ್ನು ನಿಮಗೆ ವೈಚಾರಿಕವಾಗಿ ತಿಳಿಸುವುದು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಅನುಭವದ ಒಂದು ಆಯಾಮದಿಂದ ಇನ್ನೊಂದು ಆಯಾಮದತ್ತ ನಡೆಸಲು ಹೆಚ್ಚಿನ ತೀವ್ರತೆ ಮತ್ತು ಚೈತನ್ಯ ಹೊಂದಿರುವ ಸಾಧನದ ಅಗತ್ಯವಿದೆ. ಆ ಸಾಧನವನ್ನೇ ನಾವು ‘ಗುರು’ ಎಂದು ಕರೆಯುತ್ತೇವೆ.

    ನಂಬಿಕೆ ಹುಟ್ಟುವುದು ನಿರೀಕ್ಷೆಗಳಿಂದ. ‘ನಾನು ನಿಮ್ಮನ್ನು ನಂಬುತ್ತೇನೆ’ ಎಂದಾಗ, ನಾನು ನಿಮ್ಮ ಸರಿ- ತಪ್ಪು ಅಭಿಪ್ರಾಯಗಳ ಪ್ರಕಾರವೇ ನಡೆದುಕೊಳ್ಳುತ್ತೇನೆ ಅನ್ನುವ ಭರವಸೆ ನಿಮಗಿರುತ್ತದೆ. ಒಂದು ವೇಳೆ ನಾನು ನಿಮ್ಮ ಸರಿ-ತಪ್ಪುಗಳನ್ನು ಬಿಟ್ಟು ಬೇರೆಯದೇ ರೀತಿಯಲ್ಲಿ ನಡೆದುಕೊಂಡರೆ, ‘ನಾನು ನಿಮ್ಮನ್ನು ನಂಬಿದೆ; ಆದರೆ, ನೀವು ಹೀಗೆ ಮಾಡಿದಿರಿ’ ಎಂದು ಆಕ್ಷೇಪಿಸುತ್ತೀರಿ ಅಲ್ಲವೆ?

    ನಿಮ್ಮ ಗುರುಗಳು ನಿಮ್ಮ ನಿರೀಕ್ಷೆಗಳ ಪರಿಧಿಯಲ್ಲಿಯೇ ಇದ್ದಾರೆಂದರೆ, ನೀವು ಅಂತಹವರ ಹತ್ತಿರ ಕೂಡ ಸುಳಿಯದೆ ಇರುವುದೇ ಒಳ್ಳೆಯದು, ಏಕೆಂದರೆ ಅಂತಹವರಿಂದ ನಿಮಗೆ ಯಾವುದೇ ಉಪಯೋಗವಾಗುವುದಿಲ್ಲ. ಅವರು ನಿಮ್ಮನ್ನು ಸಂತೈಸಬಹುದು, ಹಾಯಾಗಿರಿಸಬಹುದು. ಆದರೆ, ಇದು ಒಂದು ಸಂಕೋಲೆಯಾಗಿಬಿಡುತ್ತದೆ. ಅವರು ನಿಮಗೆ ಪರಮಾರ್ಥದ ದಾರಿಯಾಗುವುದಿಲ್ಲ. ವಿಶ್ವಾಸ ಪೂರ್ತಿ ಬೇರೆಯದು. ವಿಶ್ವಾಸ

    ನಿಮ್ಮಲ್ಲಿನ ಒಂದು ಗುಣ. ಅದು ಹೊರಗಿನ ಯಾವುದಕ್ಕೂ ಒಳಪಟ್ಟಿರುವುದಿಲ್ಲ, ಅದು ನಿಮ್ಮಲ್ಲಿದೆ ಅಷ್ಟೇ. ನೀವು ‘ನನಗೆ ವಿಶ್ವಾಸವಿದೆ’ ಎಂದರೆ, ಅದರ ಅರ್ಥ, ‘ನೀನು ಏನಾದರೂ ಮಾಡು, ಆದರೆ ನನಗೆ ನಿಮ್ಮಲ್ಲಿ ವಿಶ್ವಾಸವಿದೆ’ ಎಂದು. ಅದು ನಿಮ್ಮ ಇತಿಮಿತಿಗಳ ಚೌಕಟ್ಟಿನಲ್ಲಿರುವುದಿಲ್ಲ.

    ನಾನು ಯಾವತ್ತೂ ‘ನನ್ನಲ್ಲಿ ವಿಶ್ವಾಸವಿಡಿ’ ಎನ್ನುವುದಿಲ್ಲ. ನಾನು ‘ವಿಶ್ವಾಸ’ ಎನ್ನುವ ಪದವನ್ನು ಏಕೆ ಬಳಸುವುದಿಲ್ಲ ಎಂದರೆ ಅದು ಬಹಳ ಭ್ರಷ್ಟಗೊಂಡಿದೆ. ಯಾರಾದರೂ ವಿಶ್ವಾಸದ ಬಗ್ಗೆ ಮಾತನಾಡಿದರೆ, ಅದು ನಿಮ್ಮನ್ನು ನಿಮ್ಮ ಇಷ್ಟಾನಿಷ್ಟಗಳು ಮತ್ತು ಸಂಕುಚಿತತೆಯಿಂದ ಮೇಲೇರಿಸಲು.

    ‘ನೀವು ಏನು ಬೇಕಾದರೂ ಮಾಡಿ, ನಿಮ್ಮಲ್ಲಿ ನನಗೆ ವಿಶ್ವಾಸವಿದೆ’. ನೀವು ಗುರುಗಳ ಸಾನ್ನಿಧ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕೆಂದರೆ, ಆ ಸಾನ್ನಿಧ್ಯವು ನಿಮ್ಮನ್ನು ಕರಗಿಸಲು, ನಿಮ್ಮನ್ನು ಒಂದು ರೀತಿಯಲ್ಲಿ ಧ್ವಂಸಮಾಡಲು ಅವಕಾಶ ಕೊಡಲು ಸಿದ್ಧರಿರಬೇಕು. ಕನಿಷ್ಠ ಗುರುಗಳ ಜೊತೆ ಇರುವ ಆ ಕೆಲವೇ ಕ್ಷಣಗಳಲ್ಲಾದರೂ ನೀವು ನೀವಾಗಿರಬಾರದು. ನಿಮ್ಮನ್ನು ನೀವು ಏನೆಂದು ಪರಿಗಣಿಸಿದ್ದೀರೋ, ಅದು ಅವರ ಸಮಕ್ಷಮದಲ್ಲಿ ಇರಬಾರದು.

    ಗೋಡೆಗಳನ್ನು ಕೆಡವಿ: ಜನರು ವಿಶ್ವಾಸದ ಬಗ್ಗೆ ಮಾತನಾಡಿದರೆ, ಅವರ ಉದ್ದೇಶ, ತಮ್ಮೊಳಗೆ ಬೇರೆಯವರು ಪ್ರವೇಶಿಸಲು ಅನುಮತಿ ಕೊಡುವುದು ಎಂದು. ನಿಮ್ಮೊಳಗೆ ಇನ್ನೊಬ್ಬರು ಬರಬೇಕೆಂದರೆ, ನೀವು ನಿಮ್ಮನ್ನು ತೆರೆದುಕೊಳ್ಳಬೇಕು. ಒಮ್ಮೆ ನಿಮ್ಮೊಳಗೆ ಅವರು ಪ್ರವೇಶಿಸಿದರೆ, ನೀವು ಎಲ್ಲಾ ಮಾರ್ಪಾಡುಗಳಿಗೂ ತಯಾರು ಎಂದರ್ಥ. ಈಗ ನಿಮ್ಮ ಸುತ್ತ ಏಕೆ ಗೋಡೆ ಕಟ್ಟಿಕೊಂಡಿದ್ದೀರಿ ಎಂದರೆ, ಯಾವತ್ತೋ ಒಮ್ಮೆ ನಿಮ್ಮನ್ನು ತೆರೆದುಕೊಂಡಾಗ, ಯಾರೋ ನಿಮ್ಮ ನಿರೀಕ್ಷೆಗಳಿಗಿಂತ ವ್ಯತಿರಿಕ್ತವಾದುದನ್ನು ಮಾಡಿದರು. ಅದಕ್ಕೆ ಹೆದರಿಕೊಂಡು, ಗೋಡೆ ಕಟ್ಟಿಕೊಂಡುಬಿಟ್ಟಿದ್ದೀರಿ. ಈಗ, ನೀವು ‘ನನಗೆ ನಿಮ್ಮಲ್ಲಿ ವಿಶ್ವಾಸವಿದೆ’ ಎಂದರೆ, ಆ ಗೋಡೆಯನ್ನು ಕೆಡವಲು ತಯಾರಾಗಿದ್ದೀರಿ ಎಂದರ್ಥ. ಅಂದರೆ ಆ ವ್ಯಕ್ತಿ ನಿಮ್ಮ ನಿರೀಕ್ಷೆಗಳ ಚೌಕಟ್ಟಿನಲ್ಲಿ ಇರಬೇಕಾದ ಅಗತ್ಯವಿಲ್ಲ. ಆದ್ದರಿಂದ ಮುಖ್ಯ ಅಂಶವೇನೆಂದರೆ, ಗುರುಗಳ ಸಾನ್ನಿಧ್ಯ, ಅವರ ಗುಣ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಇನ್ನೊಂದು- ನಿಮಗೆ ಏನಾಗುತ್ತದೆ ಎಂಬುದರ ಬಗ್ಗೆ ಚಿಂತಿಸದೇ ಇರುವ ಒಂದು ಸನ್ನಿವೇಶವನ್ನು ನೀವು ಸೃಷ್ಟಿಸಿದರೆ,ಅದೇ ಒಂದು ಪರಿವರ್ತನೆ.

    ನಾನು ಜನರ ಜೊತೆಗೆ ಇರುವ ಸಮಯ ಬಹಳ ಸೀಮಿತವಾದುದು. ಆದ್ದರಿಂದಲೇ ನನ್ನನ್ನು ಒಂದು ಸನ್ನಿಧಿಯಾಗಿ ಎಲ್ಲರಿಗೂ ಲಭ್ಯವಾಗಿಸುತ್ತಿದ್ದೇನೆ, ವ್ಯಕ್ತಿಯಾಗಲ್ಲ. ಒಬ್ಬ ವ್ಯಕ್ತಿಯಾಗಿ ನಾನು ನಿಮ್ಮ ನಿರೀಕ್ಷೆಗಳ ಚೌಕಟ್ಟಿನಲ್ಲಿ ನಾನಾ ರೀತಿಗಳಲ್ಲಿ ಒಂದು ನಿರ್ದಿಷ್ಟ ಮುಖವನ್ನು ಹೊಂದಿದ್ದೇನೆ. ನನ್ನ ಭೌತಿಕ ವ್ಯಕ್ತಿತ್ವವನ್ನೇ ಒಂದು ಸಾಧನವಾಗಿ ಬಳಸಬೇಕೆಂದುಕೊಂಡರೆ, ಆಗ ಇನ್ನೂ ಹೆಚ್ಚಿನ ವಿಶ್ವಾಸ ಮತ್ತು ಹೆಚ್ಚಿನ ಸಮಯವೂ ಬೇಕಾಗಬಹುದು. ನನ್ನೊಂದಿಗೆ ಬಹಳಷ್ಟು ಸಮಯದಿಂದ ಇರುವವರಿಗೆ ಕಠಿಣ ವ್ಯಕ್ತಿಯಾಗಿ ತೋರುತ್ತೇನೆ, ಆದರೆ ನಿಮ್ಮೊಂದಿಗೆ ನಾನು ಆ ರೀತಿಯಿಲ್ಲ.

    ಪ್ರಜ್ಞಾಪೂರ್ವಕ ನಿರ್ವಣ: ಈ ಕ್ಷಣ, ನೀವು ಯಾವ ನಿಮ್ಮ ವ್ಯಕ್ತಿತ್ವವನ್ನು ‘ನಾನು’ ಎನ್ನುತ್ತಿದ್ದೀರೋ ಅದು ನೀವು ಎದುರಿಸುತ್ತಿರುವ ಪರಿಸ್ಥಿತಿಗಳನ್ನು ಅವಲಂಬಿಸಿಕೊಂಡು ಉಂಟಾದ ಒಂದು ಆಕಸ್ಮಿಕ ಎನ್ನಬಹುದು. ಜೀವನದ ಹೊಡೆತಗಳಿಂದ ವ್ಯಕ್ತಿತ್ವವು ನಿರಂತರವಾಗಿ ವಿಕಸನಗೊಳ್ಳುತ್ತದೆ. ಜೀವನವು ಯಾವ ರೀತಿ ಹೊಡೆತ ನೀಡುತ್ತದೆಯೋ ನೀವು ಆ ರೀತಿಯಲ್ಲಿ ರೂಪುಗೊಳ್ಳುತ್ತಾ ಹೋಗುತ್ತೀರಿ. ವ್ಯಕ್ತಿತ್ವವು ನಿರಂತರವಾಗಿ ಹೊರಗಿನ ಪರಿಸ್ಥಿತಿಗಳ ಪ್ರಭಾವದಿಂದಲೇ ನಿರ್ವಣವಾಗುತ್ತದೆ. ನೀವು ಗುರುವೆಂದು ಕರೆಯುವವರು ಒಬ್ಬ ವ್ಯಕ್ತಿಯಲ್ಲ. ಜ್ಞಾನೋದಯ ಪಡೆದವರು. ಅಂದರೆ, ತಮ್ಮ ವ್ಯಕ್ತಿತ್ವವನ್ನು ಮೀರಿ ಹೋದ ನಂತರ, ತಾವು ಹೊಂದಲು ಇಚ್ಛಿಸುವ ಪಾತ್ರದ ಅಗತ್ಯಕ್ಕೆ ತಕ್ಕಂತೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಾಮರ್ಥ್ಯವಿರುವವರು.

    ಒಂದು ಸೀಮಿತ ರೀತಿಯಲ್ಲಿ ನೀವು ಕೂಡ ವ್ಯಕ್ತಿತ್ವವನ್ನು ನಿಮ್ಮ ಚಟುವಟಿಕೆಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತೀರಿ. ಎಲ್ಲಾ ಮಿತಿಗಳನ್ನು ಮೀರಿರುವ ಚೇತನವುಳ್ಳವರು ಅದನ್ನು ಬಹಳ ಆಳವಾದ ರೀತಿಯಲ್ಲಿ ಮಾಡುತ್ತಾರೆ. ಅವರು ಜೀವನದ ಎಲ್ಲಾ ಅಂಶಗಳನ್ನೂ ತಾವು ಹೊಂದಲು ಇಚ್ಛಿಸಿರುವ ಪಾತ್ರಗಳಿಗೆ ತಕ್ಕಂತೆ ನಿರ್ವಿುಸಿಕೊಳ್ಳುತ್ತಾರೆ. ಅದು ಒಂದು ಪ್ರಜ್ಞಾಪೂರ್ವಕ ನಿರ್ವಣ. ಅದೊಂದು ಪ್ರಜ್ಞಾಪೂರ್ವಕ ನಿರ್ವಣವಾಗಿದ್ದಾಗ ಸಾಧನವಾಗುತ್ತದೆಯೇ ಹೊರತು ಬಂಧನವಾಗುವುದಿಲ್ಲ. ಅದನ್ನು ಯಾವಾಗ ಬೇಕಾದರೂ ಕಳಚಬಹುದು. ಈಗಲೂ ಕೂಡ ನಾನು ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ವ್ಯಕ್ತಿಯಾಗಿ ಕೆಲಸ ಮಾಡುತ್ತೇನೆ. ನೀವು ನನ್ನನ್ನು ಬೇರೆ ಸನ್ನಿವೇಶಗಳಲ್ಲಿ ನೋಡಿದಾಗ ಆಶ್ಚರ್ಯವಾಗಬಹುದು. ಏಕೆಂದರೆ ನಿಮಗೆ ನನ್ನನ್ನು ಒಂದು ರೀತಿಯ ವ್ಯಕ್ತಿಯನ್ನಾಗಿ ನೋಡುತ್ತಾ ಅಭ್ಯಾಸವಾಗಿರುತ್ತದೆ. ನನ್ನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೋಡಿದರೆ, ನಿಮಗೆ ಅದನ್ನು ಒಪ್ಪಿಕೊಳ್ಳಲು ಆಗದೇ ಇರಬಹುದು.

    ಗುರು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿರುತ್ತಾರೆ ಎಂದರೆ, ಜನರಿಗೆ ಅವರನ್ನು ಆದರಿಸಬೇಕೋ, ಧಿಕ್ಕರಿಸಬೇಕೋ ತೋಚುವುದಿಲ್ಲ. ಒಂದು ಕ್ಷಣ ನಿಮಗೆ ‘ಹೌದು, ನನಗೆ ನಿಜವಾಗಿಯೂ ಇವರಲ್ಲಿ ಆದರವಿದೆ’ ಎನಿಸುತ್ತದೆ. ಆದರೆ ಮರುಕ್ಷಣವೇ ನಿಮಗೆ ಅವರ ಬಗ್ಗೆ ಬೇರೆ ಭಾವನೆ ಮೂಡಬಹುದು. ಮತ್ತು ಈ ಎರಡೂ ಭಾವನೆಗಳು ಒಂದು ಎಲ್ಲೆಯನ್ನು ದಾಟುವುದಿಲ್ಲ. ಈ ಎಲ್ಲೆಗಳ ನಡುವೆ ನೀವು ಯಾವಾಗಲೂ ಹೊಡೆತ ತಿನ್ನುತ್ತಿರುತ್ತೀರಿ, ಕಾಲಕ್ರಮೇಣ ನಿಮಗೆ ಇವರು ಒಬ್ಬ ವ್ಯಕ್ತಿಯಲ್ಲ ಎಂಬ ಅರಿವಾಗುತ್ತದೆ. ನಿಮಗನಿಸುತ್ತದೆ – ಇವರು ಖಂಡಿತ ಮನುಷ್ಯನಲ್ಲ. ಒಂದೋ ಸೈತಾನನಿರಬೇಕು, ಇಲ್ಲವೇ ದೈವವಿರಬೇಕು!

    ನಿಮ್ಮ ಅನುಭವದಲ್ಲಿ ಇಲ್ಲದಿರುವುದನ್ನು ನಿಮಗೆ ವೈಚಾರಿಕವಾಗಿ ತಿಳಿಸುವುದು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಅನುಭವದ ಒಂದು ಆಯಾಮದಿಂದ ಇನ್ನೊಂದು ಆಯಾಮದತ್ತ ನಡೆಸಲು ಹೆಚ್ಚಿನ ತೀವ್ರತೆ ಮತ್ತು ಚೈತನ್ಯ ಹೊಂದಿರುವ ಸಾಧನದ ಅಗತ್ಯವಿದೆ. ಆ ಸಾಧನವನ್ನೇ ನಾವು ‘ಗುರು’ ಎಂದು ಕರೆಯುತ್ತೇವೆ. ಗುರು-ಶಿಷ್ಯರ ಬಾಂಧವ್ಯ ಇರುವುದು ಪ್ರಾಣಶಕ್ತಿಯ ತಳಹದಿಯ ಮೇಲೆ. ಯಾರೂ ನಿಮ್ಮನ್ನು ತಲುಪಲಾಗದಂತಹ ಆಯಾಮದಲ್ಲಿ ಗುರು ನಿಮ್ಮನ್ನು ರ್ಸ³ಸುತ್ತಾರೆ. ಚೈತನ್ಯವು ಆಜ್ಞಾಚಕ್ರವನ್ನು ತಲುಪಲು ಹಲವಾರು ಮಾರ್ಗಗಳಿವೆ. ಆದರೆ ಆಜ್ಞಾದಿಂದ ಸಹಸ್ರಾರದ ಕಡೆಗೆ ಯಾವುದೇ ಒಂದು ನಿಶ್ಚಿತವಾದ ಮಾರ್ಗವಿಲ್ಲ. ಇದು ಒಂದು ಜಿಗಿತ ಅಷ್ಟೇ. ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಬಾಂಧವ್ಯವನ್ನು ಬಹಳ ಪವಿತ್ರ ಎಂದು ಪರಿಗಣಿಸುತ್ತೇವೆ. ಈ ಜಿಗಿತ ಮಾಡಬೇಕೆಂದರೆ, ನಿಮಗೆ ಗಾಢವಾದ ವಿಶ್ವಾಸವಿರಬೇಕು – ಇಲ್ಲವಾದಲ್ಲಿ ಅಸಾಧ್ಯ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts