More

    ಕುರು ಪುಣ್ಯಂ ಅಹೋರಾತ್ರಂ ಸ್ಮರ ನಿತ್ಯಂ ಅನಿತ್ಯತಾಂ

    ಕುರು ಪುಣ್ಯಂ ಅಹೋರಾತ್ರಂ ಸ್ಮರ ನಿತ್ಯಂ ಅನಿತ್ಯತಾಂದೈನಂದಿನ ಕಾರ್ಯಗಳನ್ನು ಭಕ್ತಿ-ಶ್ರದ್ಧೆಗಳಿಂದ ಮಾಡಿ ಎಲ್ಲವನ್ನೂ ಸಂಪೂರ್ಣ ಶರಣಾಗತಿಯಿಂದ ಪರಮಾತ್ಮನಿಗೆ ಸಮರ್ಪಿಸಿದಾಗ, ವ್ಯಕ್ತಿಯು ಸ್ವಾರ್ಥಮೂಲವಾದ ಕರ್ತೃತ್ವ ಭಾವದಿಂದ ಎಳ್ಳಷ್ಟೂ ಕಳಂಕಿತನಾಗದೆ ಪರಮಾತ್ಮನ ಹಸ್ತದಲ್ಲಿ ಒಂದು ಉಪಕರಣವಾಗುತ್ತಾನೆ. ಅಂತಹ ವ್ಯಕ್ತಿಯನ್ನು ಕರ್ಮವಾಗಲೀ, ಕರ್ಮಫಲವಾಗಲೀ ಬಂಧಿಸುವುದಿಲ್ಲ, ಬಾಧಿಸುವುದಿಲ್ಲ.

    ಮಹಾಜ್ಞಾನಿ ಆಚಾರ್ಯ ಚಾಣಕ್ಯರ ಪ್ರಕಾರ ಜೀವನದ ಪರಮಗುರಿಯಾದ ಮೋಕ್ಷ ಸಾಧನೆಗೆ ನಾಲ್ಕು ಮೆಟ್ಟಿಲುಗಳಿದ್ದು, ಮೊದಲೆರಡನ್ನು ಮೊದಲ ಭಾಗದಲ್ಲಿ ವಿವರಿಸಲಾಗಿದೆ. ಹಗಲಿರುಳೂ ಉತ್ತಮ ಪುಣ್ಯಕಾರ್ಯಗಳಲ್ಲಿ ನಿರತನಾಗುವುದು ಹಾಗೂ ಜೀವನದಲ್ಲಿ ಯಾವುದು ಶಾಶ್ವತ, ಯಾವುದು ಅಶಾಶ್ವತವೆಂಬುದರ ಬಗ್ಗೆ ಮನನ ಮಾಡುವುದು ಉಳಿದೆರಡು ಮೆಟ್ಟಿಲುಗಳಾಗಿವೆ. ಇನ್ನು ಮೂರನೆಯ ಹೆಜ್ಜೆ: ಕುರು ಪುಣ್ಯಂ ಅಹೋರಾತ್ರಂ.

    ಹಗಲಿರುಳೂ ಉತ್ತಮ ಪುಣ್ಯಕಾರ್ಯಗಳಲ್ಲಿ ನಿರತನಾಗುವುದು ಮೋಕ್ಷಸಾಧನೆಯಲ್ಲಿ ಮೂರನೆಯ ಮತ್ತು ನಿರ್ಣಾಯಕ ಸೋಪಾನವಾಗಿದೆ. ಸತ್ಸಂಗವು ವ್ಯಕ್ತಿಯನ್ನು ಸದಾ ನಿಸ್ವಾರ್ಥಸೇವೆಯ ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಬೇಕು. ಎಲ್ಲರಿಗೂ ಸೇವೆ ಮಾಡುತ್ತಾ ಹೋದಂತೆ ಸಾಧಕನಿಗೆ ಎಲ್ಲರಲ್ಲಿಯೂ ಪರಮಾತ್ಮನನ್ನೇ ಕಾಣುವ ಅಂತರ್ದೃಷ್ಟಿ ಬೆಳೆಯುತ್ತದೆ. ಏಕೆಂದರೆ ನಿಸ್ವಾರ್ಥ ಕರ್ಮಗಳು ಸಾಧಕನಲ್ಲಿ ಚಿತ್ತಶುದ್ಧಿಯನ್ನುಂಟು ಮಾಡಿ ಅವನ ಸ್ವಾರ್ಥವನ್ನು ನಾಶಮಾಡುತ್ತವೆ. ಎಲ್ಲರಲ್ಲಿಯೂ ಇರುವ ದೈವತ್ವವನ್ನು ನೋಡಲು ನಮಗೆ ಅಡ್ಡಿಯಾಗುವುದೇ ಸ್ವಾರ್ಥಭಾವನೆ. ಅದು ನಮ್ಮ ವಿವೇಕವನ್ನು ಮಸುಕು ಮಾಡಿ ಬೇರೆಯವರ ಹಿತವನ್ನು ಕಡೆಗಣಿಸುವಂತೆ ಮಾಡುತ್ತದೆ. ಹಾಗಿರುವಾಗ ನಾವು ಇತರರಲ್ಲಿರುವ ಪರಮಾತ್ಮನನ್ನು ಕಾಣಲು ಹೇಗೆ ಸಾಧ್ಯ? ನಮ್ಮನ್ನು ನಾವು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಾಗ, ನಮ್ಮ ಮನಸ್ಸು ಪರಿಶುದ್ಧವಾಗುತ್ತದೆ. ಶುದ್ಧವಾದ ಗಾಜಿನ ಕಿಟಕಿಯ ಮೂಲಕ ಕೊಠಡಿಯ ಒಳಗೂ ಹೊರಗೂ ಎಲ್ಲವನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವಂತೆಯೇ, ಪರಿಶುದ್ಧವಾದ ಮನಸ್ಸಿನಿಂದ ನಮ್ಮ ಒಳಗೂ ಹೊರಗೂ ಎಲ್ಲೆಡೆ ವ್ಯಾಪಿಸಿರುವ ದಿವ್ಯತೆಯ ಸ್ಪುಟವಾದ ಅನುಭವವು ಅಂತರಂಗಕ್ಕೆ ಸಾಧ್ಯವಾಗುತ್ತದೆ.

    ಆದಿಶಂಕರರು, ‘ಚಿತ್ತಸ್ಯ ಶುದ್ಧಯೇ ಕಮಃ’- ಕರ್ಮಗಳ ಆಚರಣೆಯು ಚಿತ್ತಶುದ್ಧಿಗಾಗಿ ಎಂದು ಹೇಳಿದ್ದಾರೆ. ನಿಸ್ವಾರ್ಥ ಬದುಕೇ ಚಿತ್ತಶುದ್ಧಿಯ ಲಕ್ಷಣ. ಕುಟುಂಬ ನಿರ್ವಹಣೆ ಸಲುವಾಗಿ ಹಗಲಿರುಳೂ ಕಷ್ಟಪಡುವ ಒಬ್ಬ ಗೃಹಸ್ಥನಿಗೆ ನಿಸ್ವಾರ್ಥವಾಗಿ ಕೆಲಸ ಮಾಡುವುದು ಅಸಾಧ್ಯವೆಂದೇ ತೋರಬಹುದು. ಆದರೆ, ನಮ್ಮ ಧರ್ಮಗ್ರಂಥಗಳು ಸಾರುವಂತೆ, ಕರ್ತೃತ್ವ ಭಾವದಿಂದ ಮುಕ್ತನಾಗಿರುವುದೇ ನಿಜವಾದ ನಿಸ್ವಾರ್ಥತೆ. ಕರ್ತೃತ್ವ ಭಾವನೆಯಿಲ್ಲದಿರುವಾಗ ಭ್ರೋಕೃ್ತ್ವ ಭಾವನೆಯೂ ಇರುವುದಿಲ್ಲ. ತನ್ನ ಎಲ್ಲಾ ದೈನಂದಿನ ಕಾರ್ಯಗಳನ್ನು ಭಕ್ತಿ-ಶ್ರದ್ಧೆಗಳಿಂದ ಮಾಡಿ ಎಲ್ಲವನ್ನೂ ಸಂಪೂರ್ಣ ಶರಣಾಗತಿಯಿಂದ ಪರಮಾತ್ಮನಿಗೆ ಸಮರ್ಪಿಸಿದಾಗ, ವ್ಯಕ್ತಿಯು ಸ್ವಾರ್ಥಮೂಲವಾದ ಕರ್ತೃತ್ವ ಭಾವದಿಂದ ಎಳ್ಳಷ್ಟೂ ಕಳಂಕಿತನಾಗದೆ ಪರಮಾತ್ಮನ ಹಸ್ತದಲ್ಲಿ ಒಂದು ಉಪಕರಣವಾಗುತ್ತಾನೆ. ಅಂತಹ ವ್ಯಕ್ತಿಯನ್ನು ಕರ್ಮವಾಗಲೀ, ಕರ್ಮಫಲವಾಗಲೀ ಬಂಧಿಸುವುದಿಲ್ಲ, ಬಾಧಿಸುವುದಿಲ್ಲ.

    ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಕರ್ಮದ ರಹಸ್ಯವನ್ನು ಸರಳವಾಗಿ ಬೋಧಿಸಿದ್ದಾನೆ. ‘ನಿಮಿತ್ತಮಾತ್ರಂ ಭವ ಸವ್ಯಸಾಚಿನ್’- ‘ಓ ಅರ್ಜುನ! ನೀನು ನನ್ನ ನಿಮಿತ್ತಮಾತ್ರನಾಗು’ ಎಂದು ಆದೇಶಿಸುತ್ತಾನೆ. ಕರ್ವಚರಣೆಯು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಅದು ಲೋಕಕಲ್ಯಾಣಕ್ಕಾಗಿ. ಹೀಗೆ ಕರ್ಮಗಳನ್ನು ಆಚರಿಸಿದ ರಾಜರ್ಷಿ ಜನಕ ಮತ್ತು ಇತರ ಅನೇಕ ಮಹಾಪುರುಷರಂತೆ ನೀನೂ ಮಾಡಬಹುದೆಂದು ಅರ್ಜುನನನ್ನು ಹುರಿದುಂಬಿಸುತ್ತಾನೆ.

    ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ

    ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತಮರ್ಹಸಿ

    (ಭಗವದ್ಗೀತೆ, ಮೂರನೇ ಅಧ್ಯಾಯ, ಇಪ್ಪತ್ತನೆಯ ಶ್ಲೋಕ)

    ‘ತಮ್ಮ ನಿಗದಿತ ಕರ್ತವ್ಯಗಳನ್ನು ಲೋಕ ಕಲ್ಯಾಣಕ್ಕಾಗಿ ನಿರ್ವಹಿಸುವ ಮೂಲಕ, ರಾಜ ಜನಕ ಮತ್ತು ಇತರರು ಪರಿಪೂರ್ಣತೆಯನ್ನು ಸಾಧಿಸಿದರು. ನೀನೂ ಇತರರ ಕಲ್ಯಾಣಕ್ಕಾಗಿ ನಿನ್ನ ಕರ್ತವ್ಯಗಳನ್ನು ನಿರ್ವಹಿಸಬೇಕು.’

    ಸರ್ವರಿಗೂ ಸಹಾಯ ಮಾಡುವ ಮತ್ತು ಯಾರನ್ನೂ ನೋಯಿಸದ ಕಾರ್ಯಗಳು ಪುಣ್ಯಕರ್ಮಗಳೆಂದೆನಿಸುತ್ತವೆ. ಹದಿನೆಂಟು ಪುರಾಣಗಳನ್ನು ರಚಿಸಿದ ವೇದವ್ಯಾಸ ಮಹರ್ಷಿಗಳು ಇದನ್ನೇ ಬಹಳ ಸರಳವಾಗಿ ತಿಳಿಸಿದ್ದಾರೆ:

    ಅಷ್ಟಾದಶಪುರಾಣೇಷು ವ್ಯಾಸಸ್ಯ ವಚನದ್ವಯಂ

    ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ

    ‘ಹದಿನೆಂಟು ಪುರಾಣಗಳ ಸಾರವನ್ನು ಎರಡೇ ಮಾತಿನಲ್ಲಿ ವ್ಯಾಸರು ಹೇಳಿದ್ದಾರೆ. ಪರೋಪಕಾರವೇ ಪುಣ್ಯ. ಪರಪೀಡನೆಯೇ ಪಾಪ.’

    ಹೀಗೆ, ಸದಾ ಸರ್ವರಿಗೂ ಉಪಕಾರವಾಗುವಂತೆ ಜೀವಿಸುವುದೇ ಮೋಕ್ಷಸಾಧನೆಯ ಮೂರನೆಯ ಮೆಟ್ಟಿಲು.

    ನಾಲ್ಕನೆಯ ಹೆಜ್ಜೆ: ಸ್ಮರ ನಿತ್ಯಂ ಅನಿತ್ಯತಾಂ

    ಜೀವನದಲ್ಲಿ ಯಾವುದು ಶಾಶ್ವತ, ಯಾವುದು ಅಶಾಶ್ವತವೆಂಬುದರ ಬಗ್ಗೆ ಮನನ ಮಾಡುವುದೇ ಮೋಕ್ಷಸಾಧನೆಯ ನಾಲ್ಕನೆಯ ಮತ್ತು ಅಂತಿಮ ಸೋಪಾನ. ಇಂದ್ರಿಯಗೋಚರವಾದ ಈ ಜಗತ್ತು ನಮಗೆ ಎಷ್ಟೇ ಸತ್ಯವೆಂದು ಕಂಡರೂ, ಅದನ್ನು ನಮ್ಮ ಧರ್ಮಗ್ರಂಥಗಳು ಮಿಥ್ಯೆಯೆಂದೇ ಭಾವಿಸುತ್ತವೆ. ಏಕೆಂದರೆ, ಹೇಗೆ ಒಬ್ಬ ವ್ಯಕ್ತಿಯ ನೆರಳು ಅವನನ್ನು ಅವಲಂಬಿಸಿದೆಯೋ, ಹಾಗೆಯೇ ಪ್ರಪಂಚದ ಅಸ್ತಿತ್ವವು ಪರಮಾತ್ಮನ ಬುನಾದಿಯ ಮೇಲೆ ಅವಲಂಬಿತವಾಗಿದೆ. ಇದಕ್ಕೆ ನಿದರ್ಶನವಾಗಿ ಹಗ್ಗ ಮತ್ತು ಹಾವಿನ ದೃಷ್ಟಾಂತವನ್ನು ನಮ್ಮ ಧರ್ಮಗ್ರಂಥಗಳು ನೀಡುತ್ತವೆ. ಯಾರಾದರೂ ಕತ್ತಲಲ್ಲಿ ಹಗ್ಗವನ್ನು ಕಂಡಾಗ ಅದನ್ನು ಹಾವೆಂದು ಭಾವಿಸಿ ಭಯಪಡುತ್ತಾರೆ. ಆದರೆ, ಅದರ ಮೇಲೆ ಬೆಳಕು ಬಿದ್ದಕೂಡಲೇ ಸತ್ಯದರ್ಶನವಾಗಿ ಭಯವು ಮಾಯವಾಗುತ್ತದೆ. ಅದ್ವೈತ ತತ್ತ್ವದ ಪ್ರತಿಪಾದಕರಾದ ಆದಿ ಶಂಕರರು ಘೊಷಿಸಿರುವಂತೆ,

    ಶ್ಲೋಕಾರ್ಧೆನ ಪ್ರವಕ್ಷ್ಯಾಮಿ ಯತ್ ಉಕ್ತಂ ಗ್ರಂಥಕೋಟಿಭಿಃ

    ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ

    ‘ಕೋಟಿ ಗ್ರಂಥಗಳಲ್ಲಿ ಸಾರಿರುವ ಸತ್ಯವನ್ನು ನಾನು ಅರ್ಧಶ್ಲೋಕದಲ್ಲಿ ಹೇಳುತ್ತೇನೆ. ಬ್ರಹ್ಮವೇ ಸತ್ಯ; ಜಗತ್ತು ಮಿಥ್ಯೆ. ಜೀವನು ಪರಬ್ರಹ್ಮನಲ್ಲದೆ ಬೇರೆಯಲ್ಲ’

    ಇಂದ್ರಿಯಗಳು ಮತ್ತು ಮನಸ್ಸಿನ ಮೂಲಕ ಅನುಭವಕ್ಕೆ ಬರುವ ಈ ಜಗತ್ತನ್ನು ವೇದಾಂತವು ಸ್ವಪ್ನವೆಂದು ಪರಿಗಣಿಸುತ್ತದೆ. ಜಗತ್ತಿನಲ್ಲಿ ಏನೇ ಸಂಭವಿಸಿದರೂ ಅದು ಕನಸಿನ ಘಟನೆಯಂತೆ. ಏಕೆಂದರೆ, ಕನಸುಗಾರನಿಲ್ಲದೆ ಕನಸಿಗೆ ಅಸ್ತಿತ್ವವಿಲ್ಲ. ಅಂತೆಯೇ, ಪರಮಾತ್ಮನಿಲ್ಲದೆ ಈ ಜಗತ್ತಿಗೂ ಅಸ್ತಿತ್ವವಿಲ್ಲ. ಆದರೆ, ಕನಸುಗಾರನು ಸ್ವಪ್ನವಿಲ್ಲದೆಯೂ ಹೇಗೆ ಅಸ್ತಿತ್ವದಲ್ಲಿರಬಲ್ಲನೋ, ಹಾಗೆಯೇ ಪರಮಾತ್ಮನಿಗೆ ಪ್ರಪಂಚಕ್ಕೂ ಹೊರತಾದ ಅಸ್ತಿತ್ವವಿದೆ. ಕನಸುಗಾರನ ಮೇಲಿನ ಸ್ವಪ್ನದ ಅವಲಂಬನೆಯಂತೆ, ಭಗವಂತನ ಮೇಲಿನ ಜಗತ್ತಿನ ಅವಲಂಬನೆಯು ಸದಾ ಬದಲಾಗುವ ಜಗತ್ತನ್ನು ಅಶಾಶ್ವತವನ್ನಾಗಿಯೂ, ಎಂದೂ ಬದಲಾಗದ ಪರಮಾತ್ಮನನ್ನು ಶಾಶ್ವತನನ್ನಾಗಿಯೂ ಮಾಡುತ್ತದೆ. ಆದ್ದರಿಂದ ಪರಮಾತ್ಮನೇ ಸತ್ಯ ಹಾಗೂ ಜಗತ್ತು ಮಿಥ್ಯೆ. ಈ ಸತ್ಯದರ್ಶನವೇ ಆತ್ಮಸಾಕ್ಷಾತ್ಕಾರ ಅಥವಾ ಮೋಕ್ಷ. ಇದನ್ನು ಧ್ಯಾನಿಸುವುದೇ ಮೋಕ್ಷಸಾಧನೆಯ ಅಂತಿಮ ಸೋಪಾನ.

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts