More

    ನಮ್ಮ ನೆಮ್ಮದಿಗೆ ಭಂಗವಿಲ್ಲ… ಮುಂಬೈ ಸರೋವರದಲ್ಲಿ ಹಾರಾಡುತಿವೆ ಹೂವುಗಳು!


    ಮುಂಬೈ: ಲಾಕ್‌ಡೌನ್‌ ಇರಲಿ, ಬಿಡಲಿ ನಮ್ಮ ನೆಮ್ಮದಿಗಂತೂ ಭಂಗವಿಲ್ಲ, ನೀವೆಲ್ಲಾ ಭಯಪಟ್ಟು ಮನೆಯೊಳಕ್ಕೆ ಅವಿತುಕೊಂಡಿದ್ದೀರಿ. ನಮಗಂತೂ ಯಾವ ಭಯವೂ ಇಲ್ಲ, ನೀವೆಲ್ಲಾ ಮನೆಯೊಳಕ್ಕೆ ಇರುವ ಕಾರಣ, ನಮ್ಮ ಅತಂಕ ಇನ್ನೂ ದೂರ.. ದೂರ…

    ಹೀಗೆಂದು ಕುಣಿದು, ಕುಪ್ಪಳಿತ್ತ, ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿವೆ ಫ್ಲೆಮಿಂಗೋಗಳು. ನವಿ ಮುಂಬೈನ ಸರೋವರದ ತುಂಬೆಲ್ಲಾ ಈಗ ನಸುಗೆಂಪು ಬಣ್ಣದ ವಿಹಂಗಮ ನೋಟ. ಸರೋವರದ ನೀರೇ ಕಾಣಿಸದಷ್ಟು ರೀತಿಯಲ್ಲಿ ಸಾವಿರಾರು ಫ್ಲೆಮಿಂಗೋಗಳು ಬೇರೆ ಬೇರೆ ಕಡೆಗಳಿಂದ ವಲಸೆ ಬಂದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಸರೋವರದಲ್ಲಿ ಬಿಟ್ಟಿರುವ ಹೂವುಗಳ ರೀತಿಯಲ್ಲಿ ಇವು ಗೋಚರಿಸುತ್ತಿವೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರ ಸಂಚಾರವೂ ವಿರಳವಾಗಿರುವ ಕಾರಣ, ಮನುಷ್ಯರ ಆತಂಕವೂ ಇಲ್ಲದೇ ಸ್ವಚ್ಛಂದವಾಗಿ ಅವು ಹಾರಾಡುತ್ತಿವೆ.

    ಪ್ರತಿವರ್ಷವೂ ಈ ಸಮಯದಲ್ಲಿ ಫ್ಲೆಮಿಂಗೋಗಳು ನವಿಮುಂಬೈ ಅರಸಿ ಬರುತ್ತವೆ. ಆದ್ದರಿಂದ ಇವುಗಳ ಆಟ,ಹಾರಾಟ ನೋಡಿ ಆನಂದಿಸಲು ಜನರ ಮಹಾಪೂರವೇ ಹರಿದು ಬರುತ್ತದೆ. ಆದರೆ ಈ ಬಾರಿ ಜನದಟ್ಟಣೆ ಇಲ್ಲಿ ಇಲ್ಲ. ರಸ್ತೆಗಳಲ್ಲಿ ಜನರು, ವಾಹನಗಳ ಓಡಾಟವೆಲ್ಲ ಕಡಿಮೆ ಇದ್ದುದರಿಂದ, ಈ ಬಾರಿ ಇವುಗಳ ಸಂಖ್ಯೆ ಅಧಿಕವಾಗಿದೆ ಎನ್ನುತ್ತಾರೆ ಪಕ್ಷಿ ತಜ್ಞರು.

    ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ಹೆಚ್ಚು ಫ್ಲೆಮಿಂಗೋಗಳು ವಲಸೆ ಬಂದಿವೆ. ಕಳೆದ ಬಾರಿ 1.2 ಲಕ್ಷದಷ್ಟು ಹಕ್ಕಿಗಳು ವಲಸೆ ಬಂದಿದ್ದು, ಈ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಫ್ಲೆಮಿಂಗೋಗಳು ವಲಸೆ ಬಂದಿವೆ ಎಂದು ತಿಳಿಸಿದೆ.

    ಈ ಹಕ್ಕಿಗಳ ವಿಹಾರವನ್ನು ಪ್ರಫುಲ್ ಪಟೇಲ್ ಎನ್ನುವವರು ವೀಡಿಯೋ ಮಾಡಿದ್ದು, ಅದನ್ನು ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಬಾಲಿವುಡ್‌ ತಾರೆಯರಾದ ಟ್ವಿಂಕಲ್ ಖನ್ನಾ, ದಿಯಾ ಮಿರ್ಜಾ, ರವೀನಾ ಟಂಡನ್ ಸೇರಿದಂತೆ ಅನೇಕ ಮಂದಿ ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಈ ವೀಡಿಯೋ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts