More

    ಎಂದೆಂದಿಗೂ ಆನಂದ್‌ ಅಭಿಮಾನಿಯಾಗಿರುವೆ ಎಂದು ಸಹ-ಪ್ರಯಾಣಿಕ ಹೇಳಿದ್ದೇಕೆ?

    ಬೆಂಗಳೂರು: ಚೆಸ್ ದಿಗ್ಗಜ ವಿಶ್ವನಾಥನ್ 5 ಬಾರಿ ವಿಶ್ವಚಾಂಪಿಯನ್ ಪಟ್ಟವೇರಿದ ಸಾಧಕ. ಕರೊನಾ ಹಾವಳಿಯಿಂದಾಗಿ ಕಳೆದ 3 ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿದ್ದ ಅವರು ಕೊನೆಗೂ ಶನಿವಾರ ಚೆನ್ನೈನ ಮನೆಗೆ ಮರಳಿದ್ದಾರೆ. ಮೇ 30ರಂದು ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಜರ್ಮನಿಯಿಂದ ಅವರೊಂದಿಗೆ ಆಗಮಿಸಿದ್ದ ಅಭಿಮಾನಿಯೊಬ್ಬರು ಚದುರಂಗ ದಿಗ್ಗಜ ಆನಂದ್ ಅವರ ಸರಳತೆಗೆ ಮಾರುಹೋಗಿದ್ದಾರೆ. ಫೇಸ್‌ಬುಕ್ ಬರಹದ ಮೂಲಕ, ನಾನು ಇನ್ನು ಎಂದೆಂದಿಗೂ ಆನಂದ್ ಅಭಿಮಾನಿಯಾಗಿರುವೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಐಪಿಎಲ್ ತಂಡಗಳ ತವರಲ್ಲಿ ಕರೊನಾರ್ಭಟ!

    ಆನಂದ್ ಜತೆಗೆ ವಿಮಾನದ ಪಕ್ಕದ ಸೀಟ್‌ನಲ್ಲೇ ಕುಳಿತು ಜರ್ಮನಿಯಿಂದ ತವರಿಗೆ ಮರಳಿದ ವರುಣ್ ಅಯ್ಯರ್ ಎಂಬವರು ಚೆಸ್ ದಿಗ್ಗಜನ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ. 50 ವರ್ಷದ ಆನಂದ್ ಜತೆಗೆ ಬೆಂಗಳೂರಿನ ಹೋಟೆಲ್‌ನಲ್ಲಿ ಕ್ವಾರಂಟೈನ್ ವೇಳೆಯೂ ಪಕ್ಕದ ಕೋಣೆಯಲ್ಲೇ ಇದ್ದ ತಿರುನೆಲ್ವೆಲಿ ಮೂಲದ ವರುಣ್ ಅಯ್ಯರ್, ‘ಪದ್ಮವಿಭೂಷಣ ವಿಶಿ ಆನಂದ್, ಒಬ್ಬ ಜೀನಿಯಸ್, ಸ್ಫೂರ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಓರ್ವ ಸರಳ ವ್ಯಕ್ತಿ. ಪ್ರಯಾಣದ ವೇಳೆ ಅವರು ವಿಶೇಷ ಅನುಕೂಲ, ವ್ಯವಸ್ಥೆಯನ್ನು ಕೇಳಲಿಲ್ಲ. ವಿಮಾನ ನಿಲ್ದಾಣದಲ್ಲಿ ನಮ್ಮೊಂದಿಗೆ ಸಾಮಾನ್ಯರಂತೆ ಕ್ಯೂನಲ್ಲಿ ನಿಂತಿದ್ದರು. ಅವರಂಥ ಜಂಟಲ್‌ಮ್ಯಾನ್‌ಗೆ ಎಂದೆಂದಿಗೂ ಕಟ್ಟಾ ಅಭಿಮಾನಿಯಾಗಿರುವೆ’ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಆನಂದ್ ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಚೆನ್ನೈಗೆ ಮರಳುವ ಮುನ್ನ ಅವರೊಂದಿಗೆ ಕ್ಲಿಕ್ಕಿಸಿಕೊಂಡಿರುವ ‘ಸಾಮಾಜಿಕ ಅಂತರದ ಚಿತ್ರ’ವನ್ನೂ ವರುಣ್ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: 112 ದಿನಗಳ ಬಳಿಕ ಮನೆಗೆ ಮರಳಿದ ವಿಶ್ವನಾಥನ್​ ಆನಂದ್​

    ಕಳೆದ ಫೆಬ್ರವರಿಯಲ್ಲಿ ಬುಂಡೆಸ್‌ಲಿಗಾ ಚೆಸ್ ಲೀಗ್‌ನಲ್ಲಿ ಆಡುವ ಸಲುವಾಗಿ ಆನಂದ್ ಜರ್ಮನಿಗೆ ತೆರಳಿದ್ದರು. ಬಳಿಕ ಕರೊನಾ ಹಾವಳಿ ಶುರುವಾದ ಕಾರಣ ಅಲ್ಲೇ ಸ್ವಯಂ ಐಸೋಲೇಷನ್‌ನಲ್ಲಿದ್ದರು. ಈ ನಡುವೆ ಮಾರ್ಚ್‌ನಲ್ಲಿ ಭಾರತದಲ್ಲೂ ಲಾಕ್‌ಡೌನ್ ಘೋಷಣೆಯಾದ ಕಾರಣ ಅವರಿಗೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಈ ನಡುವೆ ಅವರು ವಿಶ್ವ ಚೆಸ್ ಕ್ಯಾಂಡಿಡೇಟ್ ಟೂರ್ನಿಯ ವೀಕ್ಷಕವಿವರಣೆಯನ್ನು ಆನ್‌ಲೈನ್ ಮೂಲಕ ನೀಡಿದ್ದರು. ಆದರೆ ಆ ಟೂರ್ನಿಯೂ ಕರೊನಾ ಭೀತಿಯಿಂದಾಗಿ ಮೊಟಕುಗೊಂಡಿತ್ತು. ಕಳೆದ ತಿಂಗಳು ಆನ್‌ಲೈನ್ ಮೂಲಕ ನಡೆದ ನೇಷನ್ಸ್ ಕಪ್ ಚೆಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದಲ್ಲದೆ ದೇಣಿಗೆ ಸಂಗ್ರಹಕ್ಕಾಗಿ ಅಭಿಮಾನಿಗಳ ಜತೆಗೆ ಆನ್‌ಲೈನ್ ಚೆಸ್ ಆಟವಾಡಿದ್ದರು.

    ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts