More

    ನಿರುದ್ಯೋಗಿಗಳ ಬಾಳಿಗೆ ಉದ್ಯೋಗ ಮೇಳ ಆಶಾಕಿರಣ

    ಆಲೂರು: ಉದ್ಯೋಗ ಮೇಳಗಳು ವಿದ್ಯಾವಂತರ ಹಾಗೂ ನಿರುದ್ಯೋಗಿಗಳ ಬಾಳಿಗೆ ಆಶಾಕಿರಣಗಳಿದ್ದಂತೆ. ಇದರಿಂದ ಹಲವಾರು ಕುಟುಂಬಗಳು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಇಂತಹ ಉದ್ಯೋಗ ಮೇಳದ ಅವಶ್ಯಕತೆ ಇತ್ತು. ನೂರಾರು ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲಿದ್ದು, ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗೆ ದಾರಿ ತೋರಿದಂತಾಗುತ್ತದೆ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಶಾಸಕ ಸಿಮೆಂಟ್ ಮಂಜು ಅವರು ತಾಲೂಕಿನಲ್ಲಿ ಉದ್ಯೋಗ ಮೇಳವನ್ನು ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಗ್ರಾಮೀಣ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದಂತಾಗಿದೆ. ಅವರ ಬದುಕು ಹಸನಾಗಲು ನೆರವಾದ ತೃಪ್ತಿಯೂ ಸಿಗುತ್ತದೆ. ಅಲ್ಲದೆ ಮತ್ತಷ್ಟು ಕಂಪನಿಗಳು ಆಲೂರು ತಾಲೂಕಿನ ಕಡೆಗೆ ಗಮನಹರಿಸುವಂತೆ ರಾಜ್ಯ ಹಾಗೂ ಕೇಂದ್ರ ಕೈಗಾರಿಕಾ ಗೃಹ ಮಂತ್ರಿ ಜತೆ ಕ್ಷೇತ್ರದ ಶಾಸಕರು ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಶಾಸಕರು ಪಣತೊಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

    ಹಿಮಂತ್ ಸಿಂಕ್ ಕಂಪನಿಯ ಜನರಲ್ ಮ್ಯಾನೇಜರ್ ಗುರುಪ್ರಸಾದ್ ಮಾತನಾಡಿ, ಉದ್ಯೋಗ ಆಧಾರಿತ ಶಿಕ್ಷಣ ಪದ್ಧತಿ ಅಗತ್ಯವಿದೆ. ಇಂಜಿನಿಯರಿಂಗ್, ಡಿಪ್ಲೊಮಾ ಮಾಡಿದವರಿಗೆ ಮಾತ್ರವೇ ಉದ್ಯೋಗ ಮೇಳಗಳು ಎಂಬ ಭಾವನೆ ಇದೆ. ಆದರೆ ನಮ್ಮಲ್ಲಿ 7 ಮತ್ತು 8ನೇ ತರಗತಿ ಮುಗಿಸಿದ ಮಹಿಳೆಯರಿಗೂ ಉದ್ಯೋಗ ನೀಡುವ ಮೂಲಕ ಉತ್ತಮ ಜೀವನ ನಡೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ನಮಗೆ 18 ರಿಂದ 35 ವಯೋಮಾನದ 400 ಮಹಿಳಾ ಕೆಲಸಗಾರರ ಅವಶ್ಯಕತೆ ಇದ್ದು, ಉತ್ತಮ ವೇತನದ ಜತೆಗೆ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುವುದು. ಆಸಕ್ತರು ನಮ್ಮ ಕಂಪನಿ ಸಂಪರ್ಕಿಸಬಹುದು ಎಂದು ತಿಳಿಸಿದರು.

    ತಾಲೂಕಿನ ಮಡಬಲು ಹಾಗೂ ಅಬ್ಬನ ಗ್ರಾಮ ಪಂಚಾಯಿತಿ ಮತ್ತು ತಾಲೂಕಿನ ವಿವಿಧ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿವಿಧ ಬಗೆಯ ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರೆಯಲಾಗಿತ್ತು. ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ತಾಪಂ ಇಒ ಎಚ್.ಡಿ.ಗಿರೀಶ್, ಆಲೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಂಗಾಧರ್ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts