More

    ವಾಟೆಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ

    ಆಲೂರು: ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ವಾಟೆಹೊಳೆ ಜಲಾಶಯದಿಂದ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘಟನೆ, ಕಬ್ಬು ಬೆಳೆಗಾರರ ಒಕ್ಕೂಟ ಶನಿವಾರ ಪಟ್ಟಣದ ಜಲಾಶಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

    ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ.ಧರ್ಮರಾಜ್ ಅವರ ನೇತೃತ್ವದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗೂ ವಾಟೆಹೊಳೆ ಜಲಾಶಯ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನಲ್ಲಿ ಜನ-ಜಾನುವಾರು, ಪ್ರಾಣಿ ಹಾಗೂ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕಬ್ಬು, ತೆಂಗು, ಅಡಕೆ, ಬಾಳೆ ಇತರ ಬೆಳೆಗಳು ಒಣಗುತ್ತಿವೆ. ವಾಟೆಹೊಳೆ ಜಲಾಶಯದಲ್ಲಿ ನೀರಿದ್ದರೂ ಕೂಡ ನಾಲೆಗಳಿಗೆ ನೀರು ಹರಿಸದೆ ಸಚಿವ ರಾಜಣ್ಣ ಅವರು ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಧರ್ಮರಾಜ್ ಮಾತನಾಡಿ, ಉಸ್ತುವಾರಿ ಸಚಿವ ರಾಜಣ್ಣ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿ ಕೊಂಡು ವಾಟೆಹೊಳೆ ಜಲಾಶಯದಿಂದ ತುಮಕೂರಿಗೆ ನೀರು ಹರಿಸಿದ್ದಾರೆ. ತಾಲೂಕಿನ ಜನರಿಗೆ ನೀರು ಕೊಡದ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ. ಬೆಳೆಗಳು ಬಿಸಿಲಿಗೆ ಒಣಗುತ್ತಿದೆ. ಕೂಡಲೇ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

    ವಾಟೆಹೊಳೆ ಜಲಾಶಯದ ಸಹಾಯಕ ಇಂಜಿನಿಯರ್ ಧರ್ಮರಾಜ್ ಮಾತನಾಡಿ, ಈಗಾಗಲೇ ಮಾ.11ರಿಂದ ಮಾ. 28ರವರೆಗೆ ಜಲಾಶಯದಿಂದ ನೀರು ಹರಿಸಲಾಗಿದೆ. ನಾಲೆಯು ಸುಮಾರು 36 ಕಿ.ಮೀ. ವಿಸ್ತೀರ್ಣ ಹೊಂದಿದ್ದು, 25 ಕಿ.ಮೀ.ವರೆಗೂ ಚಾನಲ್ನಲ್ಲಿ ನೀರು ಹರಿಸಲಾಗಿದೆ. ಉಳಿದ 11 ಕಿ.ಮೀ.ಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಕಾರಣ ನಾಲೆ ದುರಸ್ತಿ ಕಾರ್ಯ ಆಗಬೇಕಿದೆ. ಈಗಾಗಲೇ ದುರಸ್ತಿ ಕಾರ್ಯ ಕುರಿತು ಮೇಲಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದ ಅವರು, ಜಲಾಶಯದಲ್ಲಿ ಶೇ. 40 ರಷ್ಟು ನೀರಿತ್ತು. ಆ ಪೈಕಿ ಶೇ. 15ರಷ್ಟು ಹರಿಸಿದ್ದು, ಉಳಿಕೆ ಶೇ. 25 ರಷ್ಟು ನೀರನ್ನು ಕುಡಿಯುವ ನೀರಿನ ಬಳಕೆಗೆಂದೇ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ವೀರೇಶ್, ಮುಖಂಡರಾದ ಯೋಗೇಶ್, ಜಯಣ್ಣ, ಪಟೇಲ್, ವೀರೇಶ್, ಯುವ ಮುಖಂಡರಾದ ಸತೀಶ್, ಹುಲ್ಲಳ್ಳಿ ಮಹೇಶ್, ಹೊಳೆ ಬೆಳ್ಳೂರುಗುರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಗನಯ್ಯ, ದಲಿತ ಮುಖಂಡ ಗೇಕರವಳ್ಳಿ ಬಸವರಾಜ್, ಕೆರೆಹಳ್ಳಿ ಕೆ.ಕೆ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts