More

    ಆರೋಪ, ಪ್ರತ್ಯಾರೋಪದ ಜತೆ ತಂತ್ರಗಾರಿಕೆ

    ಶಿರಾ: ಕ್ಷೇತ್ರದಲ್ಲಿ ಉಪಸಮರದ ಕಾವು ಹೆಚ್ಚಾಗ ತೊಡಗಿದೆ. ಮೂರು ಪಕ್ಷಗಳು ಆರೋಪ, ಪ್ರತ್ಯಾರೋಪದ ಜತೆಗೆ ಚುನಾವಣಾ ತಂತ್ರಗಾರಿಕೆಯನ್ನು ಮುಂದುವರಿಸಿವೆ. ಜಾತಿ ಓಲೈಕೆ ಬಿಡಿ ಎಂದು ಬಿಜೆಪಿ ವಿರುದ್ಧ ಜಯಚಂದ್ರ ಗುಡುಗಿದರೆ, ಬೈಎಲೆಕ್ಷನ್ ಉಸ್ತುವಾರಿ ಹೊತ್ತಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಣ್ಣಪುಟ್ಟ ಸಮುದಾಯಗಳ ಜತೆ ಸಭೆ ನಡೆಸಿ ಮತ ಕ್ರೋಡೀಕರಣ ಮುಂದುವರಿಸಿದರು. ಇನ್ನು ಜೆಡಿಎಸ್ ಪ್ರಚಾರಕ್ಕೆ ದೊಡ್ಡಗೌಡರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ವೇಗೋತ್ಕರ್ಷ ನೀಡಿದರು. ಜಾತಿ ರಾಜಕೀಯ ಬಿಡಿ: ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರು ಜಾತಿ ರಾಜಕೀಯ ಬಿಟ್ಟು ಬದ್ಧತೆಯಿಂದ ಆಡಳಿತ ನಡೆಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ ಹೊರಹಾಕಿದರು.

    ಕಳ್ಳಂಬೆಳ್ಳದ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಿಎಂ ಪುತ್ರ ಸೇರಿ ಹಲವು ನಾಯಕರು ಶಿರಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ಇಲ್ಲಿ ನಡೆದಿರುವ ಅಭಿವೃದ್ಧಿ ಗಮನಿಸಿ ರಾಜ್ಯವ್ಯಾಪಿ ಮೂಲಸೌಲಭ್ಯ ಒದಗಿಸಿದರೆ ಕಲ್ಯಾಣ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣವಾಗುವುದರಲ್ಲಿ ಅನುಮಾನ ಇಲ್ಲ ಎಂದು ಟಾಂಗ್ ನೀಡಿದರು.

    ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಿತು. ಕಾಡುಗೊಲ್ಲ, ವೈಶ್ಯ ಸೇರಿ ಹಲವು ಜಾತಿಗಳ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಇದನ್ನು ಗಮನಿಸಿ ಅವರನ್ನು ಪಟ್ಟಿಯಲ್ಲಿ ಸೇರಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಕೇವಲ ಜಾತಿ ಸಮೀಕ್ಷೆ ಮಾಡಿಲ್ಲ, ಬದಲಿಗೆ ಜಾತಿಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಪ್ರದಾಯಿಕ ಸಮೀಕ್ಷೆ ಮಾಡಲು ಕಾಂತರಾಜು ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ಸಲ್ಲಿಸಿದ್ದು ಹಿಂದುಳಿದ ವರ್ಗಗಳನ್ನು ಓಲೈಸುವುದನ್ನು ಬಿಟ್ಟು ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ವಾಗ್ದಾಳಿ ನಡೆಸಿದರು.
    ಎಪಿಎಂಸಿ ಸದಸ್ಯ ಕಲ್ಲಶೆಟ್ಟಿಹಳ್ಳಿ ರುದ್ರೇಶ್ ನೇತೃತ್ವದಲ್ಲಿ ವಿವಿಧ ಪಕ್ಷಗಳ 500 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.

    ಜಿಪಂ ಸದಸ್ಯ ಬೊಮ್ಮಣ್ಣ, ಮುಖಂಡ ಎಂ.ಆರ್.ಪರ್ವತಪ್ಪ, ಮನುಪಾಟಿಲ್, ಹನುಮಂತಯ್ಯ, ಕಲಾವಿದ ರಾಜಣ್ಣ, ಅರೇಹಳ್ಳಿ ರಮೇಶ್, ಬಾಲೇನಹಳ್ಳಿ ಪ್ರಕಾಶ್, ಹಾರೋಗೆರೆ ಮಹೇಶ್, ಕಾಳೇನಹಳ್ಳಿ ರಾಜು, ಯಲದಬಾಗಿ ನವೀನ್, ಆರ್.ಕೆ.ಮಧು ಇತರರು ಇದ್ದರು.

    ಕಾಡುಗೊಲ್ಲ ಮಂಡಳಿಗೆ ಮಾನ್ಯತೆ ಇಲ್ಲ: ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ ಒಳ್ಳೆಯದು. ಆದರೆ ನಿಗಮ ಸ್ಥಾಪನೆಗೆ ಮುನ್ನ ವಿಧಾನಸಭೆಯಲ್ಲಿ ಚರ್ಚೆ ಆಗಬೇಕು. ಸಚಿವ ಸಂಪುಟದ ಒಪ್ಪಿಗೆ ಹಾಗೂ ಹಣಕಾಸು ಸಮಿತಿ ಅನುಮೋದನೆ ನೀಡಬೇಕು. ಇವುಗಳ ಅನುಮೋದನೆ ಇಲ್ಲದೇ ಹೋದರೆ ನಿಗಮಕ್ಕೆ ಮಾನ್ಯತೆ ಇರುವುದಿಲ್ಲ. ಸಿಎಂ ಯಡಿಯೂರಪ್ಪ ಅವರು ಕಾಡುಗೊಲ್ಲರ ಮತಕ್ಕಾಗಿ ಮನವಿ ಪತ್ರಕ್ಕೆ ಷರಾ ಬರೆದು ಸಹಿ ಮಾಡಿದ್ದಾರೆ ಅಷ್ಟೆ. ನಿಗಮಕ್ಕೆ ಬಜೆಟ್‌ನಲ್ಲಿ ಹಣ ಮೀಸಲು ಇಟ್ಟಿಲ್ಲ. ನಿಗಮ ಕೇವಲ ಕಾಗದದ ತುಂಡಿನಲ್ಲಿ ಇದೆ ಎಂದು ಜಯಚಂದ್ರ ಹರಿಹಾಯ್ದರು.

    ಸಣ್ಣಪುಟ್ಟ ಸಮುದಾಯದ ಜತೆ ವಿಜಯೇಂದ್ರ: ಬಿ.ವೈ.ವಿಜಯೇಂದ್ರ ಪ್ರಚಾರ ಸಭೆಗಳಲ್ಲಿ ಭಾನುವಾರ ಭಾಗವಹಿಸದೆ ತಂತ್ರಗಾರಿಕೆಯನ್ನು ಸ್ವಲ್ಪ ಬದಲಿಸಿ ಕೊಂಡಿದ್ದರು. ಬಲಿಜ, ಕಾಡುಗೊಲ್ಲರು, ಈಡಿಗ ಸಮುದಾಯದವರ ಜತೆ ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿ, ನಿಮ್ಮ ಸಮಾಜಗಳ ಆಶೀರ್ವಾದ ನಮ್ಮ ಮೇಲಿರಲಿ. ಸರ್ಕಾರ ನಿಮ್ಮೊಂದಿ ಗಿರಲಿದೆ ಎಂಬ ಭರವಸೆ ನೀಡಿದರು. ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಸೇರಿ ಹಲವು ಮುಖಂಡರಿದ್ದರು. ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ, ಮುಖಂಡ ಎಸ್.ಆರ್.ಗೌಡ ಗಡಿಭಾಗಗಳಲ್ಲಿ ಮಿಂಚಿನ ಪ್ರಚಾರ ನಡೆಸಿದರು. ವಿಜಯೇಂದ್ರ ಶಿಕಾರಿಪುರಕ್ಕೆ ತೆರಳಿದ್ದು ಸೋಮವಾರ ಸಂಜೆ ಕ್ಷೇತ್ರಕ್ಕೆ ಮರಳಲಿದ್ದಾರೆ.

    87 ಕೋಟಿ ರೂ., ಸಾಲಮನ್ನಾ ಮರೆತಿಲ್ಲ: ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರು ಶಿರಾ ತಾಲೂಕಿನ ರೈತರ 87 ಕೋಟಿ ರೂ., ಮೊತ್ತದ ಸಾಲ ಮನ್ನಾ ಮಾಡಿರುವುದನ್ನು ಮತದಾರರು ಮರೆಯುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

    ಲಕ್ಕನಹಳ್ಳಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಸತ್ಯನಾರಾಯಣ ಅವರು ಶಾಸಕರಾಗಿದ್ದಾಗ ಭೂರಹಿತ ಸಾವಿರಾರು ರೈತರಿಗೆ ಸಾಗುವಳಿ ಮಾಡಲು ಗೋಮಾಳ ಮಂಜೂರು ಮಾಡಿದ್ದಾರೆ. ಜನಪರ ಕೆಲಸವನ್ನು ಮುಂದುವರಿಸಲು ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಆಶೀರ್ವದಿಸಬೇಕು ಎಂದರು. ಪಕ್ಷದಿಂದ ವಿಮುಖರಾಗಿರುವ ಮುಖಂಡರನ್ನು ಭೇಟಿ ಮಾಡಿ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರುತ್ತೇನೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಅನುಕಂಪವನ್ನು ಮತವಾಗಿ ಪರಿವರ್ತನೆ ಮಾಡುವ ಜವಾಬ್ದಾರಿಯನ್ನು ವರಿಷ್ಠರು ನನಗೆ ನೀಡಿದ್ದಾರೆ ಎಂದರು.

    ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ಷಾಂತರ ಮಂದಿಯ ಉದ್ಯೋಗ ಕಸಿದುಕೊಂಡಿದ್ದಾರೆ. ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವನ್ನು ಉಪ ಚುನಾವಣೆಯಲ್ಲಿ ಹಂಚಿ ಮತಗಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಹಣ ಪಡೆಯಿರಿ. ಆದರೆ ಮತ ಮಾತ್ರ ಈ ಮಣ್ಣಿನ ಸ್ವಾಭಿಮಾನಿ ಮಹಿಳೆಗೆ ಇರಲಿ ಎಂದು ಶಾಸಕ ಗೌರಿಶಂಕರ್ ಹೇಳಿದರು. ಜಿಪಂ ಸದಸ್ಯ ಎಸ್.ರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಸತ್ಯಪ್ರಕಾಶ್, ಜಿಪಂ ಮಾಜಿ ಸದಸ್ಯ ಸಿ.ಆರ್.ಉಮೇಶ್, ಟಿ.ಡಿ.ಮಲ್ಲೇಶ್, ಲಿಂಗದಹಳ್ಳಿ ಚೇತನ್ ಕುಮಾರ್, ಜೆಡಿಎಸ್ ತನುಜ್‌ಗೌಡ, ದೊಡ್ಡಬಾಣಗೆರೆ ಸಣ್ಣೀರಪ್ಪ, ಪಿ.ಆರ್.ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts