More

    ಐಪಿಎಲ್​ ತಂಡಗಳಿಗೆ ಈ ಬೀಸ್ಟ್​ ಅಂದ್ರೆ ಭಯ! RCBಯ ಈ ಬಿರುಗಾಳಿಯನ್ನು ತಡೆಯುವವರು ಯಾರು?

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ 17ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್​ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೆಣಸಾಡಲಿವೆ. ಕ್ರೀಡಾಭಿಮಾನಿಗಳು ಕೂಡ ಮೆಗಾ ಟೂರ್ನಮೆಂಟ್​ಗಾಗಿ ಕಾದು ಕುಳಿತಿದ್ದಾರೆ.

    ಒಮ್ಮೆಯೂ ಕಪ್ ಗೆಲ್ಲದ ಆರ್​ಸಿಬಿ, ಡೆಲ್ಲಿ, ಪಂಜಾಬ್ ಮತ್ತು ಲಕ್ನೋ ತಂಡಗಳು ಮೊದಲ ಬಾರಿಗೆ ಕಪ್​ಗೆ ಮುತ್ತಿಕ್ಕಲು ಹಾತೊರೆಯುತ್ತಿವೆ. ಮತ್ತೊಂದೆಡೆ ಮುಂಬೈ, ರಾಜಸ್ಥಾನ, ಗುಜರಾತ್, ಎಸ್‌ಆರ್‌ಎಚ್, ಕೆಕೆಆರ್ ಹಾಗೂ ಸಿಎಸ್​ಕೆ ಕೂಡ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಣಕ್ಕೆ ಇಳಿಯುತ್ತಿವೆ. ಪ್ರತಿಯೊಂದು ತಂಡವೂ ನಿರ್ದಿಷ್ಟ ಗುರಿ ಮತ್ತು ಯೋಜನೆಯೊಂದಿಗೆ ಮೈದಾನಕ್ಕೆ ಇಳಿಯಲಿವೆ. ಈಗಾಗಲೇ ಎಲ್ಲ ತಂಡಗಳ ಆಟಗಾರರು ಅಭ್ಯಾಸದಲ್ಲಿ ತೊಡಗಿವೆ. ಎಲ್ಲ 10 ತಂಡಗಳ ಪೈಕಿ 9 ತಂಡಗಳು ಈ ಒಬ್ಬ ಆಟಗಾರನಿಗೆ ಮಾತ್ರ ಹೆದರುತ್ತವೆ. ಈ ಆಟಗಾರರನನ್ನು ಕಟ್ಟಿಹಾಕಲು ವಿಶೇಷ ರಣತಂತ್ರದೊಂದಿಗೆ ಕಣಕ್ಕೆ ಇಳಿಯಲಿವೆ. ಹಾಗದರೆ, ಆ ಆಟಗಾರ ಯಾರು? ಈ ಆಟಗಾರನನ್ನು ಕಂಡರೆ ಇತರೆ ತಂಡಗಳನ್ನು ಹೆದರುವುದೇಕೆ? ಎಂಬ ಪ್ರಶ್ನೆಗೆ ಈಗ ಉತ್ತರ ತಿಳಿಯೋಣ.

    ಐಪಿಎಲ್‌ನ ಹತ್ತು ತಂಡಗಳಲ್ಲಿ ಚೆನ್ನೈ, ಮುಂಬೈ, ಆರ್‌ಸಿಬಿ ಮತ್ತು ಕೆಕೆಆರ್‌ಗಳನ್ನು ದೊಡ್ಡ ತಂಡಗಳೆಂದು ಪರಿಗಣಿಸಲಾಗಿದೆ. ಆ ತಂಡಗಳ ಗೆಲುವಿನ ಸಂಭ್ರಮವೂ ಕೂಡ ದೊಡ್ಡದಾಗಿಯೇ ಇರುತ್ತದೆ. ಚೆನ್ನೈ ವಿರುದ್ಧದ ಪಂದ್ಯ ಎಂದರೆ ಕೆಲವು ತಂಡಗಳು ಧೋನಿ, ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್‌ಗಾಗಿ ವಿಶೇಷ ರಣತಂತ್ರಗಳೊಂದಿಗೆ ಕಣಕ್ಕೆ ಇಳಿಯುತ್ತವೆ. ಅಲ್ಲದೆ ಮುಂಬೈ ವಿರುದ್ಧ ಪಂದ್ಯ ನಡೆದರೆ ಕೆಲ ತಂಡಗಳು ರೋಹಿತ್ ಹಾಗೂ ಸೂರ್ಯಕುಮಾರ್ ಕಟ್ಟಿಹಾಕಲು ಯೋಜನೆ ರೂಪಿಸುತ್ತವೆ.

    ಆರ್‌ಸಿಬಿ ವಿಚಾರಕ್ಕೆ ಬಂದರೆ, ವಿರಾಟ್ ಕೊಹ್ಲಿ ಎಲ್ಲರಿಗೂ ಸಾಮಾನ್ಯ ಗುರಿ ಎಂಬುದು ಅನೇಕರಿಗೆ ತಿಳಿದಿದೆ. ಆದರೆ, ಅದು ಕಳೆದ ಸೀಸಸ್​ವರೆಗೆ ಮಾತ್ರ. ಐಪಿಎಲ್ 2024ರಲ್ಲಿ ಆರ್‌ಸಿಬಿ ವಿರುದ್ಧದ ಮ್ಯಾಚ್ ಅಂದರೆ ಎಲ್ಲ ತಂಡಗಳು ಒಬ್ಬರನ್ನು ಮಾತ್ರ ಟಾರ್ಗೆಟ್ ಮಾಡುತ್ತವೆ. ಆ ಒಬ್ಬ ಯಾರೆಂದರೆ ಗ್ಲೇನ್​​ ಮ್ಯಾಕ್ಸ್‌ವೆಲ್. ಮ್ಯಾಡ್​ ಮ್ಯಾಕ್ಸಿ ಎಂದೇ ಗುರುತಿಸಿಕೊಂಡಿರುವ ಮ್ಯಾಕ್ಸ್​ವೆಲ್,​ ಕ್ರೀಸ್​ನಲ್ಲಿ ಇದ್ದರೆ ಯಾರೇ ಬೌಲರ್​ ಆಗಿರಲಿ ಕೊಂಚ ಭಯ ಇದ್ದೇ ಇರುತ್ತದೆ. ಮ್ಯಾಕ್ಸಿಯ ವಿನಾಶಕಾರಿ ಆಟವನ್ನು ಗಮನಿಸಿರುವ ಐಪಿಎಲ್ ತಂಡಗಳೆಲ್ಲ ಆತನಿಗಾಗಿಯೇ ವಿಶೇಷ ಸ್ಕೆಚ್ ಹಾಕಿಕೊಂಡು ಕಣಕ್ಕೆ ಇಳಿಯಲೇಬೇಕು ಎಂದು ಫಿಕ್ಸ್ ಆಗಿವೆ.

    ಮ್ಯಾಕ್ಸಿಯನ್ನು ವಜ್ರಾಯುಧವಾಗಿ ಬಳಸಿಕೊಳ್ಳಲು ಆರ್‌ಸಿಬಿ ಚಿಂತನೆ ನಡೆಸುತ್ತಿದ್ದರೆ, ಉಳಿದ ತಂಡಗಳು ಈತನ ದಾಳಿಯಿಂದ ಪಾರಾಗಲು ನಾನಾ ಪ್ಲಾನ್‌ ಮಾಡುತ್ತಿವೆ. ಹಾಗಾದರೆ ಮ್ಯಾಕ್ಸ್‌ವೆಲ್ ಕಂಡರೆ ಏಕೆ ಹೆದರುತ್ತಾರೆ? ಏಕೆಂದರೆ, ಕೇವಲ ಐದು ಓವರ್ ಗಳಲ್ಲಿ ಪಂದ್ಯದ ಸ್ವರೂಪವನ್ನೇ ಬದಲಿಸುವ ಸಾಮರ್ಥ್ಯ ಮ್ಯಾಕ್ಸಿಗಿದೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಮ್ಯಾಕ್ಸಿ ಆರ್ಭಟಕ್ಕೆ ಇಡೀ ಜಗತ್ತೇ ತಲೆಬಾಗಿದ್ದನ್ನು ಮರೆಯುವಂತಿಲ್ಲ.

    ಆಫ್ಘಾನ್​ ನೀಡಿದ 292 ರನ್​ಗಳ ಗುರಿ ಬೆನ್ನತ್ತಿದ ಆಸಿಸ್​ ಪಡೆ 91 ರನ್​​ಗಳಿಗೆ 7 ವಿಕೆಟ್ ಕಳೆದುಕೊಂಡು ಬಹುತೇಕ ಸೋಲಿನ ದವಡೆಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕಾಲು ನೋವಿದ್ದರೂ ಏಕಾಂಗಿಯಾಗಿ ಹೋರಾಡಿದ ಮ್ಯಾಕ್ಸಿ, ತಮ್ಮ ಬ್ಯಾಟ್​ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದರು. ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್​ ನೆರವಿನಿಂದ 200 ರನ್​ಗಳ ದ್ವಿಶತಕದೊಂದಿಗೆ ಆಸಿಸ್​ ಗೆಲುವಿಗೆ ಕಾರಣರಾದರು. ಒಂದು ವೇಳೆ ಆ ಪಂದ್ಯದಲ್ಲಿ ಆಸೀಸ್ ಸೋತಿದ್ದರೆ ವಿಶ್ವಕಪ್ ಭಾರತದ ಪಾಲಾಗುತ್ತಿತ್ತು ಎಂಬ ಭಾವನೆಯೂ ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಇಂದಿಗೂ ಇದೆ.

    ವಿಶ್ವಕಪ್​ ಬಳಿಕ ಮ್ಯಾಕ್ಸಿ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್​) ನಲ್ಲೂ ತಮ್ಮ ಸಾಮರ್ಥ್ಯ ತೋರಿದರು. ಸೀಮಿತ ಶೈಲಿಯಿಲ್ಲದೆ ಒಂದು ಚೆಂಡನ್ನು ಹತ್ತು ಬಗೆಯಲ್ಲಿ ಆಡುವ ಪ್ರತಿಭೆ ಮ್ಯಾಕ್ಸಿ ಅವರಲ್ಲಿದೆ. ಆದ್ದರಿಂದಲೇ ಅವರನ್ನು ಔಟ್ ಮಾಡುವುದು ಎದುರಾಳಿ ಬೌಲರ್‌ಗಳಿಗೆ ಅಷ್ಟು ಸುಲಭವಲ್ಲ. ಅನೇಕ ಬಾರಿ ಮ್ಯಾಕ್ಸಿ ತನ್ನ ತಪ್ಪುಗಳಿಂದ ಔಟಾಗಿದ್ದಾರೆ. ಹಸಿದ ಸಿಂಹ ಬೇಟೆಯಾಡಿದಂತೆ ಎದುರಾಳಿ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸುವ ಮ್ಯಾಕ್ಸಿ ರನ್​ಗಳ ಮಳೆಯನ್ನೇ ಹರಿಸುತ್ತಾರೆ.

    ಮಾರ್ಚ್​ 22ರಂದು ಉದ್ಘಾಟನಾ ಪಂದ್ಯ ಚೆನ್ನೈನ ಪಿ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಬ್ಯಾಟಿಂಗ್‌ಗೆ ಅತ್ಯಂತ ಕಷ್ಟಕರವಾದ ಪಿಚ್ ಇದಾಗಿದೆ. ಆದರೆ, ಮ್ಯಾಕ್ಸಿ ಎಂತಹ ಪಿಚ್​ನಲ್ಲೂ ಮೊದಲ ಎಸೆತದಿಂದಲೇ ಆರ್ಭಟಿಸುವಂತಹ ಹಠಮಾರಿ. ವಿಶ್ವಕಪ್‌ನಿಂದ ಮ್ಯಾಕ್ಸಿ ಅವರ ಫಾರ್ಮ್ ಅನ್ನು ಗಮನಿಸಿದರೆ, ಈ ಬಾರಿಯ ಐಪಿಎಲ್‌ನಲ್ಲಿ ಅವರ ಯಶಸ್ಸನ್ನು ನೀವು ನೋಡಬಹುದು. ಆದ್ದರಿಂದಲೇ ಎಲ್ಲ ತಂಡಗಳು ಮ್ಯಾಕ್ಸ್‌ವೆಲ್‌ಗೆ ಮಾತ್ರ ಹೆದರುತ್ತವೆ. ಹೀಗಾಗಿ ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಹೇಗೆ ಆಡಬಹುದು ಎಂದು ನೀವು ಯೋಚಿಸುತ್ತೀರಿ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ವಿಡಿಯೋ ಕಾಲ್​ನಲ್ಲಿ ಕೊಹ್ಲಿ ಹೇಳಿದ್ದೇನು? RCB ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ ಸ್ಮೃತಿ ಮಂದಾನ ಉತ್ತರ!

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts