More

    ಇಂಗ್ಲೆಂಡ್ ಪಿಚ್ ಕಿವೀಸ್‌ಗೆ ಲಾಭದಾಯಕ ಎಂಬ ವಾದವನ್ನು ಒಪ್ಪದ ಕೊಹ್ಲಿ

    ಮುಂಬೈ: ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಎದುರಾಳಿ ನ್ಯೂಜಿಲೆಂಡ್ ಜತೆಗೆ ನಮ್ಮ ತಂಡಕ್ಕೂ ಸಮಾನ ಅವಕಾಶಗಳಿವೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು. ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾರಣ ಅಲ್ಲಿನ ಪಿಚ್ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ಸೂಕ್ತವಾದುದು ಎಂಬ ವಾದವನ್ನು ಒಪ್ಪಿಕೊಳ್ಳದ ಕೊಹ್ಲಿ, ಅತ್ಯುತ್ತಮವಾದ ಟೆಸ್ಟ್ ಕ್ರಿಕೆಟ್ ಆಡಿದ ತಂಡಕ್ಕೆ ಗೆಲುವು ಒಲಿಯಲಿದೆ ಎಂದು ವಾದಿಸಿದರು.

    ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಮತ್ತು ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಲಂಡನ್ ವಿಮಾನ ಏರುವ ಮುನ್ನ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ಇಂಗ್ಲೆಂಡ್ ವಾತಾವರಣ ಕಿವೀಸ್ ತಂಡಕ್ಕೆ ಯಾವ ರೀತಿ ಇರುತ್ತದೋ ನಮಗೂ ಅದೇ ರೀತಿ ಇರುತ್ತದೆ. ಆಸ್ಟ್ರೇಲಿಯಾದ ವಾತಾವರಣ ಆಸೀಸ್ ತಂಡಕ್ಕೆ ಲಾಭದಾಯಕವಾಗಬೇಕಿತ್ತು. ಆದರೆ ನಾವು ಅಲ್ಲಿ ಕಳೆದ ಎರಡೂ ಪ್ರವಾಸಗಳಲ್ಲಿ ಸರಣಿ ಜಯಿಸಿದ್ದೇವೆ. ಕಿವೀಸ್ ತಂಡವೇ ಮೇಲುಗೈ ಸಾಧಿಸಲಿದೆ ಎಂದು ಭಾವಿಸಿದರೆ ನಾವು ಈಗ ವಿಮಾನ ಏರುವ ಅಗತ್ಯವೇ ಇರುವುದಿಲ್ಲ. ಸಮಾನ ಅವಕಾಶ ಹೊಂದಿದ್ದೇವೆ ಎಂಬ ಭರವಸೆಯೊಂದಿಗೆ ನಾವೀಗ ವಿಮಾನ ಏರಲಿದ್ದೇವೆ. ಪ್ರತಿ ಅವಧಿಯಿಂದ ಅವಧಿಗೆ ಉತ್ತಮ ನಿರ್ವಹಣೆ ತೋರಿದ ತಂಡ ಅಂತಿಮವಾಗಿ ಟೆಸ್ಟ್ ಪಂದ್ಯವನ್ನು ಗೆಲ್ಲಲಿದೆ’ ಎಂದು ಹೇಳಿದರು. ಭಾರತದಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿರುವ ಭಾರತ ತಂಡ, ಇಂಗ್ಲೆಂಡ್‌ನಲ್ಲೂ ಮೊದಲ 10 ದಿನ ಕ್ವಾರಂಟೈನ್‌ನಲ್ಲಿರಲಿದೆ. ಆದರೆ 3 ದಿನಗಳ ಹಾರ್ಡ್ ಕ್ವಾರಂಟೈನ್ ಬಳಿಕ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ ಲಭಿಸಲಿದೆ.

    ಡಬ್ಲ್ಯುಟಿಸಿ ಫೈನಲ್‌ಗೆ ಮುನ್ನ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಆಡಿ ಸಿದ್ಧತೆ ನಡೆಸಲಿದ್ದರೆ, ಭಾರತ ತಂಡ ಹೆಚ್ಚಿನ ಸಿದ್ಧತೆ ಇಲ್ಲದೆ ಕಣಕ್ಕಿಳಿಯಲಿದೆ. ಆದರೆ ಭಾರತಕ್ಕಿದು ಹಿನ್ನಡೆಯಾಗದು ಎಂದು ಅಭಿಪ್ರಾಯಪಟ್ಟ ಕೊಹ್ಲಿ, ‘ಸರಿಯಾಗಿ ವೇಳಾಪಟ್ಟಿ ರೂಪುಗೊಳ್ಳದ ಕಾರಣ ಹಿಂದೆಯೂ ನಾವು ಕೇವಲ 3 ದಿನ ಮುನ್ನ ಪ್ರವಾಸಕ್ಕೆ ತೆರಳಿ ಆಡಿದ್ದೇವೆ. ಇಂಗ್ಲೆಂಡ್‌ನಲ್ಲಿ ನಾವು ಇದೇ ಮೊದಲ ಬಾರಿ ಆಡುತ್ತಿಲ್ಲ. ಅಲ್ಲಿನ ವಾತಾವರಣ ನಮಗೂ ಗೊತ್ತಿದೆ. ಪಂದ್ಯಕ್ಕೆ ಮುನ್ನ 4 ಅವಧಿಗಳ ಅಭ್ಯಾಸ ಲಭಿಸಿದರೆ ಅದೇ ಸಾಕಾಗುತ್ತದೆ. ಭಾರತ ಅಥವಾ ಭಾರತ ಎ ಪರ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರೇ ತಂಡದಲ್ಲಿದ್ದಾರೆ’ ಎಂದರು.

    2 ತಂಡಗಳ ಆಟ ಸಾಮಾನ್ಯವಾಗಬಹುದು!
    ವಿರಾಟ್ ಕೊಹ್ಲಿ ಬಳಗ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರೆ, ಭಾರತದ ಇನ್ನೊಂದು ತಂಡ ಜುಲೈನಲ್ಲಿ ಶ್ರೀಲಂಕಾಕ್ಕೆ ವಿಮಾನ ಏರುವ ನಿರೀಕ್ಷೆ ಇದೆ. ಕರೊನಾ ಕಾಲದ ಕ್ವಾರಂಟೈನ್ ನಿಯಮಗಳಿಂದಾಗಿ ಈ ರೀತಿ ಭಾರತದ 2 ತಂಡಗಳು ರಚನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ರೀತಿ 2 ತಂಡಗಳು ಏಕಕಾಲದಲ್ಲಿ ಆಡುವುದು ಸಾಮಾನ್ಯವಾಗಬಹುದು ಎಂದು ಕೊಹ್ಲಿ ಮತ್ತು ರವಿಶಾಸ್ತ್ರಿ ಹೇಳಿದರು. ಕಾರ್ಯದೊತ್ತಡ ತಪ್ಪಿಸಲು ಮಾತ್ರವಲ್ಲದೆ ಬಯೋಬಬಲ್‌ನಲ್ಲಿನ ಮಾನಸಿಕ ಆರೋಗ್ಯಕ್ಕಾಗಿಯೂ ಈ ರೀತಿ 2 ತಂಡಗಳ ರಚನೆ ಅಗತ್ಯವಾಗಬಹುದು ಎಂದರು.

    ಬೆಸ್ಟ್ ಆಫ್​ ತ್ರಿ ಫೈನಲ್ ಇರಬೇಕು
    ಮುಂದಿನ ವರ್ಷಗಳಲ್ಲಿ ಡಬ್ಲ್ಯುಟಿಸಿಯಲ್ಲಿ ಬೆಸ್ಟ್ ಆಫ್​ ತ್ರಿ ಫೈನಲ್ ಪಂದ್ಯಗಳನ್ನು ಆಡಿಸಬೇಕೆಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟರು. ಈ ಮುನ್ನ ದಿಗ್ಗಜ ಕಪಿಲ್ ದೇವ್ ಕೂಡ ಇಂಥದ್ದೇ ವಾದ ಮಂಡಿಸಿದ್ದರು. ‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಸುದೀರ್ಘ ಕಾಲದವರೆಗೆ ಸಾಗಬೇಕಾದರೆ ಬೆಸ್ಟ್ ಆಫ್​ ತ್ರಿ ಫೈನಲ್ ಇರುವುದು ಉತ್ತಮ. ಎರಡೂವರೆ ವರ್ಷಗಳ ಶ್ರಮದ ಬಳಿಕ ಒಲಿಯುವ ಫೈನಲ್‌ನಲ್ಲಿ 3 ಪಂದ್ಯಗಳಿದ್ದರೆ ಉತ್ತಮ’ ಎಂದು ರವಿಶಾಸ್ತ್ರಿ ಹೇಳಿದರು. ಡಬ್ಲ್ಯುಟಿಸಿ ಫೈನಲ್‌ಗೆ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇದು ಅತ್ಯಂತ ಕಠಿಣ ಕ್ರಿಕೆಟ್ ಪ್ರಕಾರದ ಫೈನಲ್. 2 ವರ್ಷಗಳ ಕಾಲ ವಿಶ್ವದ ವಿವಿಧ ಸ್ಥಳಗಳಲ್ಲಿ ಆಡಿದ ಬಳಿಕ ಒಲಿಯುವಂಥದ್ದು ಎಂದು ರವಿಶಾಸ್ತ್ರಿ ವಿವರಿಸಿದರು.

    ಸರ್ ಏನಾದ್ರೂ ಹೇಳ್ಕಳಿ, ಆರ್‌ಸಿಬಿಗೆ ಕಪ್ ಕೊಡ್ಸಿ; ಮೊಟ್ಟೆ ವಿವಾದದಿಂದ ಕೊಹ್ಲಿ ಮತ್ತೆ ಟ್ರೋಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts