More

    ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ

    ಮುಂಡರಗಿ: ತಾಲೂಕಾಡಳಿತ ಹೊಸದಾಗಿ ಬಂದಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆದು ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು. ಕೋವಿಡ್ ಕುರಿತು ತಾಪಂ ಸಾಮರ್ಥ್ಯ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ತಹಸೀಲ್ದಾರ್ ಆಶಪ್ಪ ಪೂಜಾರಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಹಿರೇವಡ್ಡಟ್ಟಿ ಮುರಾರ್ಜಿ ವಸತಿ ಶಾಲೆ, ಕಲಕೇರಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ, ಮುಂಡರಗಿ ಬಿಸಿಎಂ ವಸತಿ ನಿಲಯಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
    ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ರಾಜೇಶ ಮಾತನಾಡಿ, ಎರಡನೇ ಅಲೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ತಾಲೂಕಿನಲ್ಲಿ 912 ಪ್ರಕರಣಗಳಿದ್ದು, 250 ಕೇಸ್​ಗಳು ಪಟ್ಟಣದ್ದಾದರೆ 662 ಕೇಸ್​ಗಳು ಗ್ರಾಮೀಣ ಪ್ರದೇಶಗಳದ್ದಾಗಿವೆ. 425 ಕೇಸ್​ಗಳು ಸಕ್ರಿಯವಾಗಿದ್ದು, 400 ಜನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಸೋಂಕಿತರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಜನ ಖಾಸಗಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 2ನೇ ಅಲೆ ಪ್ರಾರಂಭವಾದಾಗಿನಿಂದ 6 ಜನರು ಮೃತಪಟ್ಟಿದ್ದಾರೆ. ಕರೊನಾ ಸೇನಾನಿಗಳಿಗೆ ವ್ಯಾಕ್ಸಿನ್ ಹಾಕುವ ಕಾರ್ಯ ಜನವರಿಯಿಂದ ಪ್ರಾರಂಭಿಸಲಾಗಿದೆ. ನಂತರದಲ್ಲಿ 65 ವರ್ಷ ಮೇಲ್ಪಟ್ಟವರು ಮೊದಲನೇ ಲಸಿಕೆ ಪಡೆದಿದ್ದು, ಎರಡನೇ ಹಂತದ ಲಸಿಕೆಯನ್ನು ಇದೀಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
    ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ ಮಾತನಾಡಿ, ತಾಲೂಕಾಸ್ಪತ್ರೆಯಲ್ಲಿ 50 ಡೋಸ್ ಕೋವ್ಯಾಕ್ಸಿನ್, 50 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಮಾತ್ರ ಇದೆ. ವೆಂಟಿಲೇಟರ್ ಚಿಕಿತ್ಸೆ ಬೇಕಾದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಬೇಕಿದೆ. ಸದ್ಯಕ್ಕೆ ಆಕ್ಸಿಜನ್ ಸಿಲಿಂಡ್​ರ್ಗಳ ಕೊರತೆಯಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಕೊರತೆಯಾಗಲಿದೆ ಎಂದು ಹೇಳಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಎರಡನೇ ಅಲೆಯಲ್ಲಿ ಸಾವು-ನೋವು ಹೆಚ್ಚಾಗುತ್ತಿದೆ. ವೆಂಟಿಲೇಟರ್​ಗಳನ್ನು ಬಳಕೆ ಮಾಡಿ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಬೇಕಾಗಿದ್ದು, ಅದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಕೋವಿಡ್ ಆರೈಕೆ ಕೇಂದ್ರದಲ್ಲಿರುವವರಿಗೆ ಅಧಿಕಾರಿಗಳು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚಿಸಿದರು. ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಅಧಿಕಾರಿಗಳು ಕರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮನೆಯಿಂದ ಹೊರಗೆ ಬಾರದಂತೆ ಹಾಗೂ ಸೋಂಕಿತರು ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆದುಕೊಳ್ಳಲು ತಿಳಿ ಹೇಳಬೇಕು. ಗ್ರಾಮೀಣ ಭಾಗದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ ಹೆಚ್ಚು ತೊಂದರೆಯಾಗಲಿದೆ. ಆದ್ದರಿಂದ ಹೆಚ್ಚು ಜಾಗ್ರತೆ ವಹಿಸುವುದು ಅವಶ್ಯವಿದೆ ಎಂದರು.
    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉದಯಕುಮಾರ ಯಲಿವಾಳ, ಬಿಇಒ ರಾಮಕೃಷ್ಣ ಸದಲಗಿ, ಸಿಡಿಪಿಒ ಲಲಿತಾ ಅಳವಂಡಿ ತಾಪಂ ಯೋಜನಾ ನಿರ್ದೇಶಕ ಎಂ.ಎಸ್. ಕೊರ್ಲಹಳ್ಳಿ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts