More

    ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್; ನೀಗೀತೇ ಭಾರತದ 21 ವರ್ಷಗಳ ಪ್ರಶಸ್ತಿ ಬರ?

    ಬರ್ಮಿಂಗ್‌ಹ್ಯಾಂ: ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಪಿವಿ ಸಿಂಧು, ಭರ್ಜರಿ ಫಾರ್ಮ್‌ನಲ್ಲಿರುವ ಯುವ ಆಟಗಾರ ಲಕ್ಷ್ಯ ಸೇನ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ರಜತ ವಿಜೇತ ಕಿಡಂಬಿ ಶ್ರೀಕಾಂತ್ ಅವರು ಬುಧವಾರದಿಂದ ನಡೆಯಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 21 ವರ್ಷಗಳ ಪ್ರಶಸ್ತಿ ಬರ ನೀಗಿಸಲು ಸಜ್ಜಾಗಿದ್ದಾರೆ.

    ಇದುವರೆಗೆ ಕೇವಲ ಇಬ್ಬರು ಭಾರತೀಯರು ಈ ಪ್ರತಿಷ್ಠಿತ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 1980ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಈ ಸಾಧನೆ ಮಾಡಿದ್ದರು. ಅನಂತರದಲ್ಲಿ ಪಿವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಶ್ರೀಕಾಂತ್ ಭಾರತದ ಪ್ರಶಸ್ತಿ ಬರ ನೀಗಿಸಲು ಪ್ರಯತ್ನಿಸಿದ್ದರೂ ಯಶಸ್ಸು ಕಂಡಿರಲಿಲ್ಲ. 2015ರಲ್ಲಿ ಸೈನಾ ನೆಹ್ವಾಲ್ ಫೈನಲ್‌ಗೇರಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದೇ ಕಳೆದ 21 ವರ್ಷಗಳಲ್ಲಿ ಭಾರತೀಯರು ಪ್ರಶಸ್ತಿ ಸನಿಹ ಬಂದ ಕ್ಷಣವಾಗಿತ್ತು. ಈ ಅವಧಿಯಲ್ಲಿ ಭಾರತೀಯ ಷಟ್ಲರ್‌ಗಳಿಗೆ ಒಲಿಂಪಿಕ್ಸ್ ಪದಕ, ವಿಶ್ವ ಚಾಂಪಿಯನ್‌ಷಿಪ್, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕಗಳು ಒಲಿದಿದ್ದರೂ, ಈ ಪ್ರಶಸ್ತಿ ಮಾತ್ರ ಇನ್ನೂ ಕೈಗೆಟುಕದೆ ಕಾಡುತ್ತಲೇ ಇದೆ.

    ಸಿಂಧು ಈ ಬಾರಿ 6ನೇ ಶ್ರೇಯಾಂಕದೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದರೆ, 20 ವರ್ಷದ ಲಕ್ಷ್ಯ ಸೇನ್ ಶ್ರೇಯಾಂಕ ರಹಿತರಾಗಿದ್ದರೂ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಕಳೆದ 6 ತಿಂಗಳಲ್ಲಿ ಲಕ್ಷ್ಯ ಉತ್ತಮ ಲಯದಲ್ಲಿರುವುದು ಇದಕ್ಕೆ ಕಾರಣವಾಗಿದೆ. ಇತ್ತೀಚೆಗೆ ವಿಶ್ವ ಚಾಂಪಿಯನ್‌ಷಿಪ್ ಕಂಚು, ಇಂಡಿಯಾ ಓಪನ್ ಪ್ರಶಸ್ತಿ ಮತ್ತು ಜರ್ಮನ್ ಓಪನ್ ರನ್ನರ್‌ಅಪ್ ಸ್ಥಾನ ಒಲಿಸಿಕೊಂಡಿದ್ದರು. ಮೊದಲ ಸುತ್ತಿನಲ್ಲಿ ದೇಶಬಾಂಧವ ಸೌರಭ್ ವರ್ಮ ಅವರ ಸವಾಲನ್ನು ಲಕ್ಷ್ಯ ಎದುರಿಸಲಿದ್ದಾರೆ.

    ಮಾಜಿ ವಿಶ್ವ ನಂ. 1 ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಕಂಟಪೊನ್ ವಾಂಗ್‌ಚರೊಯಿನ್ ಅವರನ್ನು ಎದುರಿಸಲಿದ್ದಾರೆ. ಬಿ. ಸಾಯ್ ಪ್ರಣೀತ್, ಸಮೀರ್ ವರ್ಮ, ಎಚ್‌ಎಸ್ ಪ್ರಣಯ್ ಪುರುಷರ ಸಿಂಗಲ್ಸ್ ಕಣದಲ್ಲಿರುವ ಇತರ ಭಾರತೀಯ. ಪುರುಷರ ಡಬಲ್ಸ್‌ನಲ್ಲಿ ಇಂಡಿಯಾ ಓಪನ್ ಚಾಂಪಿಯನ್ಸ್ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಧ್ರುವ ಕಪಿಲ-ಎಂಆರ್ ಅರ್ಜುನ್ ಮತ್ತು ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿರೆಡ್ಡಿ ಕೂಡ ಕಣದಲ್ಲಿದ್ದಾರೆ.

    ಸಿಂಧುಗೆ ವಾಂಗ್ ಸವಾಲು
    ಕಳೆದ ವಾರ ಜರ್ಮನ್ ಓಪನ್‌ನಲ್ಲಿ ತಮಗಿಂತ ಕೆಳ ಶ್ರೇಯಾಂಕಿತ ಚೀನಾದ ಜಂಗ್ ಯಿ ಮಾನ್ ವಿರುದ್ಧ 2ನೇ ಸುತ್ತಿನಲ್ಲೇ ಆಘಾತ ಎದುರಿಸಿದ್ದ ಸಿಂಧು, ಈ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲಿ ಚೀನಾದ ಮತ್ತೋರ್ವ ಆಟಗಾರ್ತಿ ವಾಂಗ್ ಝಿ ಯಿ ಸವಾಲು ಎದುರಾಗಲಿದೆ. 2019ರ ವಿಶ್ವ ಚಾಂಪಿಯನ್ ಸಿಂಧುಗೆ ಕ್ವಾರ್ಟರ್​ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಸವಾಲು ಎದುರಾಗುವ ಸಾಧ್ಯತೆಗಳಿವೆ. 2ನೇ ಸುತ್ತಿನಲ್ಲಿ ಜಪಾನ್‌ನ ಸಯಕ ತಕಹಶಿ ಸವಾಲು ಎದುರಾಗಬಹುದು. ಅನುಭವಿ ಸೈನಾ ನೆಹ್ವಾಲ್‌ಗೆ ಮೊದಲ ಸುತ್ತಿನಲ್ಲಿ ವಿಶ್ವ ನಂ. 10 ಥಾಯ್ಲೆಂಡ್‌ನ ಪೊರ್ನಪವೀ ಚೊಚುವಾಂಗ್ ಅವರಿಂದ ಕಠಿಣ ಸವಾಲು ಎದುರಾಗಲಿದೆ.

    ರ‌್ಯಾಂಕಿಂಗ್‌ನಲ್ಲಿ ಲಕ್ಷ್ಯಗೆ ಬಡ್ತಿ
    ಭಾರತದ ರೈಸಿಂಗ್ ಷಟ್ಲರ್ ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ರ‌್ಯಾಂಕಿಂಗ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. ಕೆ. ಶ್ರೀಕಾಂತ್ 12 ಮತ್ತು ಸಾಯಿ ಪ್ರಣೀತ್ 19ನೇ ಸ್ಥಾನಕ್ಕಿಳಿದಿದ್ದಾರೆ. ಮಹಿಳಾ ವಿಭಾಗದಲ್ಲಿ ಪಿವಿ ಸಿಂಧು 7ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

    ಐಪಿಎಲ್ ಆರಂಭಕ್ಕೂ ಮೊದಲೇ ಹೊಸ ಮೈಲಿಗಲ್ಲು ನೆಟ್ಟ ಚೆನ್ನೈ ಸೂಪರ್‌ಕಿಂಗ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts