More

    ಉನ್ನತ ಶಿಕ್ಷಣಕ್ಕೆ ಕಾಯಕಲ್ಪ: ನ್ಯಾಕ್ ವ್ಯಾಪ್ತಿಗೆ ಎಲ್ಲ ಶಿಕ್ಷಣ ಸಂಸ್ಥೆ; ಕ್ರಿಯಾ ಯೋಜನೆಗೆ ಗಡುವು

    ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಒಂಬತ್ತು ವಿಶ್ವವಿದ್ಯಾಲಯಗಳಿಗೆ ನ್ಯಾಕ್ ಮಾನ್ಯತೆಯೇ ಇಲ್ಲ, ಎನ್​ಐಆರ್​ಎಫ್(ನ್ಯಾಷನಲ್ ಇನ್​ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್ರ್ಕ್)ನಲ್ಲಿ ಸ್ಥಾನ ಪಡೆದಿರುವ ವಿವಿಗಳ ಸಂಖ್ಯೆ ಕೇವಲ ನಾಲ್ಕು, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪೈಕಿ ಬಹುತೇಕ ಸಂಸ್ಥೆಗಳು ನ್ಯಾಕ್ ಮಾನ್ಯತೆಗೆ ಅರ್ಜಿಯನ್ನೇ ಹಾಕಿಲ್ಲ, ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ! ಇದು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಹಾಲಿ ಚಿತ್ರಣ. ಇಂತಹ ಆತಂಕದ ಸ್ಥಿತಿಯಲ್ಲಿರುವ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಹೆಜ್ಜೆ ಇಟ್ಟಿರುವ ಸರ್ಕಾರ, ಮುಂದಿನ 2 ವರ್ಷದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನ್ಯಾಕ್ ವ್ಯಾಪ್ತಿಗೆ ಹಾಗೂ ಎಲ್ಲ ವಿಶ್ವವಿದ್ಯಾಲಯಗಳನ್ನು ಎನ್​ಐಆರ್​ಎಫ್​ನಲ್ಲಿ ಸ್ಥಾನ ಪಡೆಯುವಂತೆ ಮಾಡುವ ಪಣತೊಟ್ಟಿದೆ.

    ನೂತನ ಶಿಕ್ಷಣ ನೀತಿ ಸಮಗ್ರವಾಗಿ ಜಾರಿಯಾಗಬೇಕಾದರೆ ಶಿಕ್ಷಣ ಸಂಸ್ಥೆಗಳು ಸ್ಪರ್ಧೆಗೆ ಸಜ್ಜಾಗಬೇಕಾಗಿದೆ. ಆದ್ದರಿಂದ ನ್ಯಾಕ್ ಮಾನ್ಯತೆ ಮುಖ್ಯವಾಗುತ್ತದೆ. ನ್ಯಾಕ್ ಮಾನ್ಯತೆ ಸಿಗಬೇಕೆಂದರೆ ಶಿಕ್ಷಣದ ಗುಣಮಟ್ಟ, ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯವೂ ಅಗತ್ಯ.

    ಏನಾಗಿದೆ ಪರಿಸ್ಥಿತಿ?: ರಾಜ್ಯದ ಶಿಕ್ಷಣ ಸಂಸ್ಥೆಗಳು ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕೆಳಹಂತದಲ್ಲಿವೆ. ಆದ್ದರಿಂದಲೇ ನ್ಯಾಕ್​ನಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಎ ಗ್ರೇಡ್ ಮಾನ್ಯತೆ ಪಡೆಯುವಂತೆ ಮಾಡುವುದು, ಎನ್​ಐಆರ್​ಎಫ್​ನಲ್ಲಿ 100ರೊಳಗೆ ಸ್ಥಾನ ಪಡೆಯುವುದು, ಜರ್ನಲ್​ಗಳನ್ನು ಪ್ರಕಟಿಸಿದಾಗಲಷ್ಟೇ ನೂತನ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯ. ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಭೇಟಿ ನೀಡುತ್ತದೆ. ಅಲ್ಲಿನ ಸೌಲಭ್ಯಗಳ ಆಧಾರದಲ್ಲಿ ಮಾನ್ಯತೆ ನೀಡುತ್ತದೆ. ಕೇಂದ್ರ ಶಿಕ್ಷಣ ಇಲಾಖೆ ಈಗ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಎನ್​ಐಆರ್​ಎಫ್ ಎಂಬ ನಿಯಮ ತಂದಿದೆ. ಮೌಲ್ಯಾಂಕದ ಆಧಾರದಲ್ಲಿ ರ‍್ಯಾಂಕಿಂಗ್ ನೀಡುತ್ತದೆ.

    ಉನ್ನತ ಶಿಕ್ಷಣಕ್ಕೆ ಕಾಯಕಲ್ಪ: ನ್ಯಾಕ್ ವ್ಯಾಪ್ತಿಗೆ ಎಲ್ಲ ಶಿಕ್ಷಣ ಸಂಸ್ಥೆ; ಕ್ರಿಯಾ ಯೋಜನೆಗೆ ಗಡುವುಹಿಂದೇಟೇಕೆ?: ಬಹಳಷ್ಟು ಶಿಕ್ಷಣ ಸಂಸ್ಥೆಗಳು ನ್ಯಾಕ್ ಮುಂದೆ ಹೋಗುತ್ತಿಲ್ಲ. ಅಲ್ಲಿನ ರ‍್ಯಾಂಕಿಂಗ್ ಇಲ್ಲದೆ ಶಿಕ್ಷಣದ ಗುಣಮಟ್ಟ ಸುಧಾರಣೆ ಕಷ್ಟ. ಆದ್ದರಿಂದಲೇ ನ್ಯಾಕ್ ಮತ್ತು ಎನ್​ಐಆರ್​ಎಫ್​ನಲ್ಲಿ ಮಾನ್ಯತೆಯನ್ನು ಕಡ್ಡಾಯ ಮಾಡಲಾಗುತ್ತಿದೆ.

    ಕುಲಪತಿಗಳಿಗೆ ಜವಾಬ್ದಾರಿ: ಎಲ್ಲ 19 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಅವರು ವಿವಿ ಹಾಗೂ ಅದರಡಿಯ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಸುಧಾರಿಸಲಿದ್ದಾರೆಂಬ ಬಗ್ಗೆ ಕ್ರಿಯಾಯೋಜನೆ ರೂಪಿಸಿ 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶ ನೀಡಲಾಗಿದೆ.

    ಯಾವ ವಿವಿ ಬಾಕಿ?: ದಾವಣಗೆರೆ, ಮಂಗಳೂರು, ತುಮಕೂರು, ಶ್ರೀಕೃಷ್ಣದೇವರಾಯ, ಬೆಂಗಳೂರು ನಗರ, ಬೆಂಗಳೂರು ಉತ್ತರ, ಗುಲ್ಬರ್ಗಾ, ಕರ್ನಾಟಕ, ಮುಕ್ತ, ಕನ್ನಡ, ಸಂಗೀತ, ಸಂಸ್ಕೃತ , ಜಾನಪದ, ರಾಣಿಚೆನ್ನಮ್ಮ, ಮಹಿಳಾ ವಿವಿಗಳು ಎನ್​ಐಆರ್​ಎಫ್​ನಲ್ಲಿ ಸ್ಥಾನ ಪಡೆಯಬೇಕಾಗಿದೆ.

    3000 ಕೋಟಿ ರೂ. ಅಗತ್ಯ: ರಾಜ್ಯದ ಸರ್ಕಾರಿ ಕಾಲೇಜುಗಳನ್ನು ನ್ಯಾಕ್ ವ್ಯಾಪ್ತಿಗೆ ಒಳಪಡಿಸಲು ಹೆಚ್ಚುವರಿ ಕ್ಲಾಸ್ ರೂಂ, ರೆಸ್ಟ್ ರೂಂ ಹಾಗೂ ಇನ್ನಿತರ ಮೂಲಸೌಕರ್ಯಕ್ಕೆ 1300 ಕೋಟಿ ರೂ. ಅಗತ್ಯವಿದೆ. ಕಂಪ್ಯೂಟರ್, ಪ್ರಯೋಗಾಲಯ ಸೇರಿ ಉಪಕರಣಗಳಿಗೆ 450 ಕೋಟಿ ರೂ. ಸೇರಿ ಒಟ್ಟಾರೆ 3000 ಕೋಟಿ ರೂ. ಅಗತ್ಯವಿದೆ. 2 ವರ್ಷದಲ್ಲಿ ಈ ಅಂತರವನ್ನು ತುಂಬುವುದು ಸರ್ಕಾರದ ಉದ್ದೇಶವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಅಂದಾಜು 3000 ಕೋಟಿ ರೂ. ಬೇಕಾಗಬಹುದೆನ್ನಲಾಗಿದೆ.

    ಸರ್ಕಾರದ ಕ್ರಮವೇನು?

    • ಪ್ರತಿ ವಲಯದಲ್ಲಿಯೂ ಒಬ್ಬ ಸಂಯೋಜಕರ ನೇಮಕ
    • ಪ್ರತಿಯೊಬ್ಬರ ವ್ಯಾಪ್ತಿಗೆ 30 -40 ಕಾಲೇಜು ನೀಡಲಾಗಿದೆ
    • ಅವರು ನ್ಯಾಕ್ ವ್ಯಾಪ್ತಿಗೆ ಹೇಗೆ ಒಳಪಡಬೇಕೆಂಬ ಮಾಹಿತಿ ನೀಡಲಿದ್ದಾರೆ
    • ಪ್ರತಿ ಕಾಲೇಜಿಗೂ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ
    • ನ್ಯಾಕ್​ಗೆ ಅರ್ಜಿ ಹಾಕುವ ಮುನ್ನ ಪ್ರತ್ಯೇಕ ಪರಿಶೀಲನೆ ನಡೆಯಲಿದೆ
    • ಮೂಲಸೌಕರ್ಯ, ಹಣಕಾಸಿಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪ್ರಯತ್ನ ನಡೆಸುತ್ತಿದ್ದಾರೆ

    ಉನ್ನತ ಶಿಕ್ಷಣಕ್ಕೆ ಕಾಯಕಲ್ಪ: ನ್ಯಾಕ್ ವ್ಯಾಪ್ತಿಗೆ ಎಲ್ಲ ಶಿಕ್ಷಣ ಸಂಸ್ಥೆ; ಕ್ರಿಯಾ ಯೋಜನೆಗೆ ಗಡುವುಉದ್ದೇಶಗಳೇನು?

    • ವರ್ಷದಲ್ಲಿ ನ್ಯಾಕ್ ವ್ಯಾಪ್ತಿಗೆ ಶೇ. 30 ಶಿಕ್ಷಣ ಸಂಸ್ಥೆಗಳು ಒಳಪಡಬೇಕು
    • ಎಲ್ಲ ವಿವಿಗಳು ಎನ್​ಐಆರ್​ಎಫ್ ವ್ಯಾಪ್ತಿಗೆ ಒಳಪಡಬೇಕು
    • ನಿಧಾನವಾಗಿ ಲಿಸ್ಟ್​ನಲ್ಲಿ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು

    ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ನ್ಯಾಕ್ ಮುಂದೆ ಮಾನ್ಯತೆಗೆ ಅರ್ಜಿ ಹಾಕಲೇಬೇಕು. ಆಗ ಗುಣಮಟ್ಟದ ವೃದ್ಧಿಗೆ ಅನುಕೂಲವಾಗುತ್ತದೆ. ಎರಡು ವರ್ಷದಲ್ಲಿ ನಮ್ಮ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ನ್ಯಾಕ್ ಮಾನ್ಯತೆ ಇರುವಂತೆ ಹಾಗೂ ವಿಶ್ವವಿದ್ಯಾಲಯಗಳು ಎನ್​ಐಆರ್​ಎಫ್​ನಲ್ಲಿ ಸ್ಥಾನ ಪಡೆಯುವಂತೆ ಮಾಡಲಾಗುತ್ತದೆ.

    | ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ

    ತಾಂತ್ರಿಕ ಶಿಕ್ಷಣ ಸಂಸ್ಥೆ

    • ಹದಿನಾರು ಸರ್ಕಾರಿ ಕಾಲೇಜಿನಲ್ಲಿ ಒಂದಕ್ಕೂ ನ್ಯಾಕ್ ಮಾನ್ಯತೆ ಇಲ್ಲ
    • 11 ಅನುದಾನಿತ ಸಂಸ್ಥೆಗಳಲ್ಲಿ ಎರಡಕ್ಕೆ ಮಾನ್ಯತೆ ಇದೆ
    • 195 ಅನುದಾನ ರಹಿತದಲ್ಲಿ 48ಕ್ಕೆ ಮಾನ್ಯತೆ ಇದೆ

    ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ನ್ಯಾಕ್, ಎನ್​ಐಆರ್​ಎಫ್ ಮಾನ್ಯತೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಎಲ್ಲ ಕುಲಪತಿಗಳಿಗೂ ಕ್ರಿಯಾಯೋಜನೆ ರೂಪಿಸಲು ಡಿಸಿಎಂ ಸೂಚಿಸಿದ್ದಾರೆ.

    | ಪ್ರದೀಪ್ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts