More

    ಕೇರಳ ಸಂಚಾರಿಗಳ ಮೇಲೆ ನಿಗಾ

    ಮಂಗಳೂರು: ಜಿಲ್ಲೆಯಲ್ಲಿ ಪ್ರಸ್ತುತ ಪತ್ತೆಯಾಗುತ್ತಿರುವ ಶೇ.50ರಷ್ಟು ಕೋವಿಡ್ ಪ್ರಕರಣಗಳಿಗೆ ಕೇರಳವೇ ಮೂಲ. ಪ್ರಕರಣ ಕಡಿಮೆ ಮಾಡಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
    ಸೋಮವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದರು.
    ದ.ಕ ಜಿಲ್ಲೆ ಜತೆ ಕೇರಳ ಗಡಿ ಹಂಚಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಅನ್‌ಲಾಕ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಕರೊನಾ ಪ್ರಕರಣ ಕಡಿಮೆ ಮಾಡಬೇಕಿದೆ. ಇದು ಪ್ರಾಯೋಗಿಕವಾಗಿ ಕಷ್ಟವಾದರೂ, ಸವಾಲಾಗಿ ಸ್ವೀಕರಿಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ನಿತ್ಯ ಸಂಚಾರಿಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎಂದರು.

    ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಸೂಚನೆ: ಜಿಲ್ಲೆಯ ಇಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಪದವಿ ಕಾಲೇಜುಗಳಲ್ಲಿ ಕಾಸರಗೋಡು ಸಹಿತ ಕೇರಳದ 6-8 ಸಾವಿರ ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನೂ ಕಡ್ಡಾಯವಾಗಿ ಅಭಿಯಾನ ರೀತಿ ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಅಗತ್ಯವಿದ್ದರೆ ಮಾತ್ರ ಊರಿಗೆ ತೆರಳಲು ಅನುಮತಿ. ಹೋದರೆ, ಬರುವಾಗ ಆರ್‌ಟಿಪಿಸಿಆರ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡುವಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದು ಎಂದು ಡಿಸಿ ತಿಳಿಸಿದರು.

    15 ದಿನಕ್ಕೊಮ್ಮೆ ಟೆಸ್ಟ್: ಕಾಸರಗೋಡು-ಮಂಗಳೂರು ನಿತ್ಯ ಪ್ರಯಾಣಿಕರಿಗೆ 15 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ. ಬಸ್‌ಗಳಲ್ಲೇ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಡಿಸಿ ತಿಳಿಸಿದರು. ಲಾಕ್‌ಡೌನ್ ಸಂದರ್ಭ 1500 ಮಂದಿ ನಿತ್ಯ ಸಂಚಾರದ ಪಾಸ್ ಪಡೆದಿದ್ದರು. ಅವರನ್ನು ಪತ್ತೆ ಹಚ್ಚಿ 500 ಮಂದಿಗೆ ಓರ್ವ ಅಧಿಕಾರಿ ನಿಯೋಜಿಸಿ, ಅವರು ಕೆಲಸ ಮಾಡುವ ಸ್ಥಳದಲ್ಲಿರುವ ಇತರ ಉದ್ಯೋಗಿಗಳ ಸಹಿತ ಎಲ್ಲರನ್ನೂ 15 ದಿನಕ್ಕೊಮ್ಮೆ ಪರೀಕ್ಷೆಗೆ ಒಳಪಡಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

    ದಾಳಿ ನಡೆಸಿ ದಂಡ: ಕೆಲಸದ ಸ್ಥಳವೂ ಸೇರಿದಂತೆ ಎಲ್ಲೆಡೆ ಮಾಸ್ಕ್ ಧರಿಸುವುದು ಕಡ್ಡಾಯ. ಪೊಲೀಸರು, ಕಂದಾಯ ಇಲಾಖೆ, ಮನಪಾ ಅಧಿಕಾರಿಗಳ ತಂಡ ರಚಿಸಿ ಕೆಲ ಸಂಸ್ಥೆ, ಕಚೇರಿ, ಮಳಿಗೆಗಳಿಗೆ ದಾಳಿ ನಡೆಸಲಾಗುವುದು. ಮಾಸ್ಕ್ ಉಲ್ಲಂಘನೆ ಕಂಡು ಬಂದಲ್ಲಿ ದಂಡದ ಜತೆಗೆ ಉದ್ದಿಮೆ ಪರವಾನಗಿ ರದ್ದು ಮಾಡುವ ಚಿಂತನೆಯಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಉಳ್ಳಾಲ ನರ್ಸಿಂಗ್ ಕಾಲೇಜು ಪ್ರಕರಣ ಸಂಬಂಧ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರ ಉತ್ತರ ನೋಡಿ, ಒಂದು ವೇಳೆ ಉದ್ದೇಶಪೂರ್ವಕ ನಿರ್ಲಕ್ಷೃ ವಹಿಸಿರುವುದು ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
    ಡಾ.ರಾಜೇಂದ್ರ ಕೆ.ವಿ ದ.ಕ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts