More

    ನಿಷೇಧವಿದ್ದರೂ ಮದ್ಯ ಮಾರಿದ ಯುವಕನ ಬಂಧನ

    ಬೆಳಗಾವಿ: ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ, ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಯುವಕ ಇದೀಗ ಜೈಲು ಪಾಲಾಗಿದ್ದಾನೆ.

    ತಾಲೂಕಿನ ಅತ್ತಿವಾಡ ಗ್ರಾಮದ ಸಂಭಾಜಿ ಭರಮಾ ಪಾಟೀಲ (21) ಬಂಧಿತ ಯುವಕ. ಆತನಿಗೆ ಅಕ್ರಮ ಮಾರಾಟಕ್ಕಾಗಿ ಮದ್ಯ ಪೂರೈಸಿದ್ದ ಆರೋಪದಡಿ ಜಾಧವ ನಗರದಲ್ಲಿರುವ ವೈನ್‌ಶಾಪ್ ಮಾಲೀಕ, ನಗರದ ಚವ್ಹಾಟ ಗಲ್ಲಿಯ ಮುರಳೀಧರ ಬಾಬುರಾವ್ ಜಾಧವ ಎಂಬುವರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಟೆಟ್ರಾ ಪ್ಯಾಕ್ ವಶ: ಶನಿವಾರ ಬಕ್ರೀದ್ ಹಬ್ಬದ ನಿಮಿತ್ತ ಮದ್ಯ ಮಾರಾಟ ನಿಷೇಧಿಸಿದ್ದ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ, ಹಾಡಹಗಲೇ ವೃಂದಾವನ ದಾಬಾ ಬಳಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದನು. ಖಚಿತ ಮಾಹಿತಿ ಪಡೆದ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ, ಯುವಕ ಸಂಭಾಜಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿಯಿದ್ದ ಅಂದಾಜು 27,100 ರೂ. ಮೌಲ್ಯದ ವಿವಿಧ ಕಂಪನಿಯ ಮದ್ಯದ ಟೆಟ್ರಾ ಪ್ಯಾಕ್ ವಶಪಡಿಸಿಕೊಂಡಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ವೈನ್‌ಶಾಪ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಠಾಣಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ: ಕೆಲ ತಿಂಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಅತ್ತಿವಾಡ ಮತ್ತು ಬೆಕ್ಕಿನಕೇರಿ ಸೇರಿ ಇತರ ಗ್ರಾಮಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಧಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಅಲ್ಲದೆ, ಇನ್ನಿತರ ಅಕ್ರಮ ಚಟುವಟಿಕೆಗಳೂ ನಡೆಯುತ್ತಿವೆ. ಆದರೆ, ಕಾಕತಿ ಠಾಣೆ ಪೊಲೀಸರು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಠಾಣಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಣ್ಣೆದುರೇ ಅಕ್ರಮ ನಡೆದರೂ ಕ್ರಮ ಕೈಗೊಳ್ಳದೇ ಕೈ ಚೆಲ್ಲಿ ಕುಳಿತಿರುತ್ತಿದ್ದ ಕಾಕತಿ ಪೊಲೀಸರ ವರ್ತನೆಯಿಂದ ಬೇಸತ್ತ ಸಾರ್ವಜನಿಕರು, ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದರು. ಇದರಿಂದ ಎಚ್ಚೆತ್ತ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯಮಾರಾಟದಲ್ಲಿ ತೊಡಗಿದ್ದ ಯುವಕನನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts