More

    ಮದ್ಯದಂಗಡಿ ತೆರೆಯಲು ಕರೊನಾ ಅಡ್ಡಿ

    ದಾವಣಗೆರೆ: ಭಾನುವಾರ ಒಂದೇ ದಿನ 21 ಕರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ಮದ್ಯ ಮಾರಾಟ ಇರಲಿಲ್ಲ. ಆದರೆ ಇತರ ತಾಲೂಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯ ಮಾರಾಟ ನಡೆಯಿತು. ಬಹುತೇಕ ಅಂಗಡಿಗಳ ಮುಂದೆ ಬ್ಯಾರಿಕೇಡ್ ಕಟ್ಟಲಾಗಿತ್ತು. ಕೆಲವು ಅಂಗಡಿಗಳ ಮುಂದೆ ಬಾಕ್ಸ್ ಆಕಾರದಲ್ಲಿ ಗುರುತು ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಒಬ್ಬೊಬ್ಬರಿಗೆ ಇಂತಿಷ್ಟು ಮದ್ಯ ಎಂಬ ಮಿತಿ ಇದ್ದುದರಿಂದ ಒಂದು ಅಂಗಡಿಯಲ್ಲಿ ಖರೀದಿಸಿದವರು ಇನ್ನೊಂದು ಅಂಗಡಿಗೂ ಹೋಗಿ ಇನ್ನಷ್ಟು ಖರೀದಿಸಿ ದಾಸ್ತಾನು ಮಾಡುವುದು ಕೆಲವು ಕಡೆ ಕಂಡುಬಂದಿತು.

    ಜಗಳೂರು ಪಟ್ಟಣದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಜನರು ಮದ್ಯದಂಗಡಿಗಳ ಮುಂದೆ ಸೇರಿದ್ದರು. ಸುಮಾರು 500 ಮೀ.ನಷ್ಟು ದೂರದ ವರೆಗೆ ಜನರು ಸಾಲುಗಟ್ಟಿದ್ದರು. ಬೇಡಿಕೆ ಇದ್ದುದರಿಂದ ಅಂಗಡಿಯವರು 10-20 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರು.

    ಮಲೇಬೆನ್ನೂರಿನ ಅಂಗಡಿಗಳಲ್ಲಿ ಸುತ್ತಲಿನ ಹಳ್ಳಿಗಳ ಜನ ಬಂದು ಖರೀದಿಸಿದರು. ಹೊನ್ನಾಳಿಯಲ್ಲಿ ಬಿಸಿಲು ಇದ್ದುದರಿಂದ ಕೆಲವು ಅಂಗಡಿಗಳ ಮುಂದೆ ಶಾಮಿಯಾನ ಹಾಕಲಾಗಿತ್ತು.

    ಚನ್ನಗಿರಿಯಲ್ಲಿ ಬೆಳಗ್ಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿ ಅಂಗಡಿಯ ಬಾಗಿಲು ತೆರೆಯಲಾಯಿತು. ಮಧ್ಯಾಹ್ನದ ವೇಳೆಗೆ ಸ್ಟಾಕ್ ಖಾಲಿಯಾಗಿದ್ದು ಕಂಡುಬಂದಿತು. ಅಂಗಡಿಗಳ ಮುಂದೆ ಕೆಲವರು ಕುಡಿದು ಬಿದ್ದಿದ್ದರು.

    ಅಂತರ ಕಾಪಾಡದವರಿಗೆ ಲಾಠಿ ರುಚಿ: ಹರಿಹರದ ಗಾಂಧಿ ಮೈದಾನ ಎದುರಿನ ಅಂಗಡಿ ಮುಂದೆ ಪರಸ್ಪರ ಅಂತರ ಕಾಪಾಡದೇ ಇದ್ದಾಗ ಪೊಲೀಸರು ಲಾಠಿ ರುಚಿ ತೋರಿಸಿದರು. ಚನ್ನಗಿರಿಯಲ್ಲೂ ಅಂತರ ಕಾಪಾಡಲಿಲ್ಲ.

    ಮದ್ಯ ಖರೀದಿಸಿದ ಮಾನಿನಿಯರು: ಜಿಲ್ಲೆಯ ಜಗಳೂರು, ಚನ್ನಗಿರಿ, ಮಲೇಬೆನ್ನೂರು ಮುಂತಾದ ಕಡೆ ಪುರುಷರ ಜತೆಗೆ ಮಹಿಳೆಯರೂ ಸಾಲಿನಲ್ಲಿ ನಿಂತಿದ್ದು ಗಮನ ಸೆಳೆಯಿತು. ಅವರಲ್ಲಿ ವೃದ್ಧೆಯರು, ಮಧ್ಯ ವಯಸ್ಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts