More

    ಬೆಟಗೇರಿಯಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಸಂಭ್ರಮ

    ಅಳವಂಡಿ: ಬೆಟಗೇರಿ ಗ್ರಾಮದಲ್ಲಿ ನಾಲ್ಕು ದಿನಗಳ ಶ್ರೀ ದುರ್ಗಾದೇವಿ ಜಾತ್ರೆಗೆ ಚಾಲನೆ ದೊರೆತಿದ್ದು, ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

    ಸೋಮವಾರ ಕಂಕಣಧಾರಣೆ, ಲಘು ರಥೋತ್ಸವ ಜರುಗಿದರೆ, ಮಂಗಳವಾರ ಪಾಯಸ ಹಾಗೂ ಅಗ್ನಿಹಾಯುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮಾ.15ರಂದು ಕೊಪ್ಪಳದ ಅಭಿನವ ಗವಿಶ್ರೀಗಳು, ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ.

    ಬಳಿಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗಲಿದೆ. ಮಾ.16ರಂದು ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ, ರಕ್ತದಾನ ಶಿಬಿರ, ಅನ್ನ ಸಂತರ್ಪಣೆ, ಭಕ್ತಿ ಹಿತಚಿಂತನಾ ಸಭೆ ಹಾಗೂ ಡಾ.ಜೀವನಸಾಬ್ ಬಿನ್ನಾಳ ಹಾಗೂ ತಂಡದಿಂದ ಜಾನಪದ ವೈಭವ, ನಂತ ಬಯಲಾಟ ಪ್ರದರ್ಶನಗೊಳ್ಳಲಿದೆ.

    ದವಸ-ಧಾನ್ಯ ಸಂಗ್ರಹ: ಪ್ರತಿ ವರ್ಷ ಶ್ರೀ ಆದಿಶಕ್ತಿ ದುರ್ಗಾದೇವಿ ಜಾತ್ರೆ ಮಹಾಶಿವರಾತ್ರಿಯ ಜಾಗರಣೆ ದಿನ ರಥದ ಗಾಲಿಗಳನ್ನು ಹೊರ ಹಾಕುವ ಮುಖಾಂತರ ಆರಂಭವಾಗಲಿದೆ. ಗ್ರಾಮಕ್ಕೆ ದೇವತೆಯನ್ನು ಹೊತ್ತುತರುವ ಗೊರವರ ಮನೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಪ್ರತಿ ಮನೆಗೂ ದೇವಿಯ ಉತ್ಸವ ಮೂರ್ತಿಯೊಂದಿಗೆ ಡೊಳ್ಳು, ಭಜನೆ ಹಾಗೂ ಸೋಬಾನ ಪದ ಹಾಡುವ ಮುಖಾಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ. ಈ ವೇಳೆ ಗ್ರಾಮಸ್ಥರು ದೇವಿಗೆ ಹಣ ಹಾಗೂ ದವಸ ಧಾನ್ಯ ದೇಣಿಗೆ ನೀಡುತ್ತಾರೆ. ಇದರಲ್ಲೇ ಜಾತ್ರೆ ಮಾಡಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ: ದುರ್ಗಾದೇವಿ ಗ್ರಾಮದಲ್ಲಿ ನೆಲೆಸಲು ಐತಿಹಾಸಿಕ ಹಿನ್ನೆಲೆ ಇದೆ. ಬೆಟಗೇರಿಯಲ್ಲಿ ಮಾರಕ ಕಾಯಿಲೆಯಿಂದ ಸಾವು-ನೋವು ಸಂಭವಿಸುತ್ತಿರುತ್ತವೆ. ಒಂದು ರಾತ್ರಿ ಗೊರವರನ ಕನಸಿನಲ್ಲಿ ಬಂದ ದೇವತೆ, ಗ್ರಾಮದಲ್ಲಿರುವ ಶ್ರೀ ಮೈಲಾರಲಿಂಗನ ದೇವಸ್ಥಾನದ ಎದುರಿನಲ್ಲಿ ಬೇವಿನ ಸಸಿ ಹುಟ್ಟಿರುತ್ತದೆ. ಅದರಲ್ಲಿ ನಾನು ನೆಲೆಸುತ್ತೇನೆ. ಗಜೇಂದ್ರಗಡದಲ್ಲಿ ನೆಲೆಸಿರುವ ನನ್ನನ್ನು ಕರೆತನ್ನಿ ಎಂದು ಹೇಳುತ್ತಾಳೆ. ಹೀಗಾಗಿ ಇಂದಿಗೂ ಗಡೇದ ದುರ್ಗಮ್ಮ ಎಂದು ಕರೆಯುವುದುಂಟು.

    ಬೆಟಗೇರಿ ಗ್ರಾಮದ ಆರಾಧ್ಯ ದೈವ ಶ್ರೀದುರ್ಗಾದೇವಿ ಜಾತ್ರೆ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಭಕ್ತರ ಇಷ್ಟಾರ್ಥ ಪೂರೈಸುವ ಶ್ರೀದೇವಿ ಜಾತ್ರೆ ನಾಲ್ಕು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ.
    | ವೀರೇಶ ಸಜ್ಜನ, ಗ್ರಾಮಸ್ಥ, ಬೆಟಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts