More

    ಅಕ್ಕಿಆಲೂರ ಉತ್ಸವ ಇಂದಿನಿಂದ

    ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ

    ಲಿಂಗೈಕ್ಯ ಹಾನಗಲ್ಲ ಕುಮಾರ ಸ್ವಾಮೀಜಿ, ಲಿಂ. ಚನ್ನವೀರ ಸ್ವಾಮೀಜಿ ಮತ್ತು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಆಚರಿಸುವ ಅಕ್ಕಿಆಲೂರ ಉತ್ಸವ ಫೆ. 11ರಿಂದ 15ರವರೆಗೆ ಜರುಗಲಿದೆ.

    ನಿರಂತರ 5 ದಿನಗಳ ಕಾಲ ಪಟ್ಟಣದಲ್ಲಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮಾರಂಭಗಳು ಜರುಗಲಿವೆ. ಫೆ. 11ರಂದು ಬೆಳಗ್ಗೆ 11 ಗಂಟೆಗೆ ಸ್ಥಳೀಯ ಚನ್ನವೀರೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ತಾಲೂಕು ಎಪಿಎಂಸಿ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದನಗಳ ಉತ್ಸವ ಏರ್ಪಡಿಸಲಾಗಿದೆ. ದೇಸಿ ತಳಿ, ಗೋರಕ್ಷಣೆ ಕುರಿತು ಜಾಗೃತಿ ಹಮ್ಮಿಕೊಳ್ಳಲಾಗಿದೆ. 12ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳಿಂದ ಷಟ್​ಸ್ಥಲ ಧ್ವಜಾರೋಹಣ ನೆರವೇರಲಿದೆ. ನಂತರ ಪಟ್ಟಣದ ಎಲ್ಲ ಸಂಘಟನೆಗಳ ಮಹಿಳೆಯರಿಂದ ಗ್ರಾಮ ದೇವಿಗೆ ಉಡಿ ತುಂಬುವ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ವಿರಕ್ತಮಠದಲ್ಲಿ ನಡೆಯಲಿರುವ ‘ಸಮಾಜಕ್ಕೆ ಮಠಗಳ ಕೊಡುಗೆ’ ಚಿಂತನ ಗೋಷ್ಠಿಯಲ್ಲಿ ಸವಣೂರ ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ, ನವಲಗುಂದ ಗವಿಮಠದ ಬವಸಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀ, ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಕಾರ್ಯನಿವಾರ್ಹಕ ಇಂಜಿನಿಯರ್ ಸಿ.ಆರ್. ಬಳ್ಳಾರಿ, ಎಡೆಯೂರ ಸಿದ್ಧಲಿಂಗೇಶ್ವರ ಪಾದಯಾತ್ರೆ ಮಂಡಳಿ ಸದಸ್ಯ ಷಣ್ಮುಖಪ್ಪ ಹಿರೇಮಠ ಪಾಲ್ಗೊಳ್ಳುವರು. ಕೆಎಎಸ್ ಅಧಿಕಾರಿ ಭುವನೇಶ್ವರಿ ಪಾಟೀಲ, ಶಿಕಾರಿಪುರ ಎಪಿಎಂಸಿ ಸದಸ್ಯ ಬಿ.ಎಸ್. ಸತೀಶ ಪಾಲ್ಗೊಳ್ಳುವರು.

    13ರಂದು ಬೆಳಗ್ಗೆ 6 ಗಂಟೆಗೆ ಸ್ಥಳೀಯ ವಿರಕ್ತಮಠದಿಂದ ನಾಡಿನ ಹತ್ತಾರು ಪೂಜ್ಯರ ಸಮ್ಮುಖದಲ್ಲಿ ಹಾನಗಲ್ಲ ಕುಮಾರ ಶಿವಯೋಗಿ ವಿರಕ್ತಮಠಕ್ಕೆ ‘ನಮ್ಮ ನಡಿಗೆ ಗುರುವಿನೆಡೆಗೆ’ ಪಾದಯಾತ್ರೆ ಜರುಗಲಿದೆ. ಸಂಜೆ 6 ಗಂಟೆಗೆ ಜರುಗಲಿರುವ ಧಮೋತ್ತೇಜಕ ಸಭೆಯಲ್ಲಿ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಆಶ್ರಮದ ಚನ್ನಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೇರೂರ ಗುಬ್ಬಿ ನಂಜುಂಡೇಶ್ವರಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಮೋಹನಕುಮಾರ ಪಾಲ್ಗೊಳ್ಳುವರು. ನಂತರ ಧಾರ್ವಿುಕ, ನಾಡಿನ ಕಲೆ ಸಾರುವ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ.

    14ರಂದು ಬೆಳಗ್ಗೆ 9 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ವೀರಭದ್ರಸ್ವಾಮಿ ಪುಷ್ಪ ರಥ ಹಾಗೂ ಗುಗ್ಗಳ ನಡೆಯಲಿದೆ. ಮಧ್ಯಾಹ್ನ 1ರಿಂದ ಮಹಾ ಪ್ರಸಾದ. ಸಂಜೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ಪಟ್ಟಣದ ರಥಬೀದಿಯಲ್ಲಿ ಸಾಗಲಿದೆ. 15 ರಂದು ಬೆಳಗ್ಗೆ 6 ಗಂಟೆಗೆ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಯ್ಯಾಚಾರ ದೀಕ್ಷೆ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 5.30ರಿಂದ ಕನ್ನಡ ನಾಡಿನ ಮಠ ಹಾಗೂ ನಮ್ಮ ಪರಂಪರೆ ಸಾರುವ ನಾಡಿನ ಅನೇಕ ಕಲಾತಂಡಗಳೊಂದಿಗೆ ಲಿಂ. ಕುಮಾರ ಸ್ವಾಮೀಜಿ ಮತ್ತು ಲಿಂ. ಚನ್ನವೀರ ಸ್ವಾಮೀಜಿಯವರ ಉತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts