More

    24 ಡಿಗ್ರಿ ಸೆಲ್ಶಿಯಸ್ ಡಿಫಾಲ್ಟ್ ತಾಪಮಾನ: ಏರ್​ಕಂಡೀಷನ್ ಹೊಸ ನಿಯಮ

    ಇನ್ನೇನು ಬೇಸಿಗೆ ಕಾಲಿಡಲು ಕೆಲವೇ ದಿನಗಳು ಬಾಕಿ ಇವೆ. ಬೇಸಿಗೆ ಶುರುವಾಗುತ್ತಿದ್ದಂತೆಯೇ ಎ.ಸಿ. (ಏರ್​ಕಂಡೀಷನರ್) ಖರೀದಿಸುವವರ ಸಂಖ್ಯೆ ದಿಡೀರ್ ಏರುತ್ತದೆ. ಆದರೆ ಈ ಬಾರಿ ಎ.ಸಿ. ಖರೀದಿಸುವವರು ಅದರಲ್ಲಿ ಟೆಂಪರೇಚರ್ ಸೆಟ್ಟಿಂಗ್ 24 ಡಿಗ್ರಿ

    ಸೆಲ್ಷಿಯಸ್​ಗೆ ಡಿಫಾಲ್ಟ್ ಆಗಿದೆಯೋ ಇಲ್ಲವೋ ಅಂತ ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲ ರೂಂ ಎ.ಸಿ.ಗಳಿಗೂ ಇಂಥದೊಂದು ಡಿಫಾಲ್ಟ್ ಸೆಟ್ ಮಾಡುವುದನ್ನು ಬ್ಯೂರೊ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ಈ ವರ್ಷದಿಂದ ಕಡ್ಡಾಯಗೊಳಿಸಿದೆ.

    ಈ ನಿಯಮ ಜಾರಿಗೆ ಬಂದ ಬಳಿಕವೂ, ಎ.ಸಿ. ಆನ್ ಮಾಡಿದ ನಂತರ ಮೊದಲಿನಂತೆ ಟೆಂಪರೇಚರ್ ಹೆಚ್ಚು-ಕಡಿಮೆ ಮಾಡಲು ಸಾಧ್ಯವಿರುತ್ತದೆ. ಆದರೆ ಭಾರತದಲ್ಲಿ ಎ.ಸಿ. ಆನ್ ಮಾಡಿದ ಬಳಿಕ ಡಿಫಾಲ್ಟ್​ನಲ್ಲೇ ರನ್ ಮಾಡುವವರ ಸಂಖ್ಯೆ ಹೆಚ್ಚಂತೆ. 24 ಡಿಗ್ರಿ ಸೆಲ್ಷಿಯಸ್​ಗೆ ಫ್ಯಾಕ್ಟರಿಯಲ್ಲೇ ಡಿಫಾಲ್ಟ್ ಸೆಟ್ ಮಾಡುವುದರಿಂದ ಸಾಕಷ್ಟು ಇಂಧನ ಉಳಿಸಬಹುದು ಎಂಬುದು ಬಿಇಇ ಚಿಂತನೆ.

    ಬಿಇಇಯಿಂದ 1 ಸ್ಟಾರ್​ನಿಂದ 5 ಸ್ಟಾರ್​ವರೆಗೆ ರೇಟಿಂಗ್ ಪಡೆದಿರುವ ಎಲ್ಲ ಕಂಪನಿಗಳ ಎಲ್ಲ ಬ್ರ್ಯಾಂಡ್​ಗಳ ರೂಂ ಎ.ಸಿ.ಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಇದು ಈಗಾಗಲೇ 2020ರ ಜನವರಿ 1ರಿಂದ ಜಾರಿಗೆ ಬಂದಿದೆ.

    ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇಂಧನ ಉಳಿಸುವ ಕಾರ್ಯಕ್ಕೆ ಈ ಹೊಸ ನಿಯಮ ಪೂರಕವಾಗಿದೆ. ರೂಂ ಟೆಂಪರೇಚರನ್ನು 1 ಡಿ.ಸೆ.ನಷ್ಟು ಏರಿಸುವುದರಿಂದ ಶೇಕಡ 6ರಷ್ಟು ವಿದ್ಯುತ್ ಉಳಿಸಬಹುದು. ಸಾಮಾನ್ಯವಾಗಿ ಎ.ಸಿ. ಬಳಕೆದಾರರು ರೂಂ ಟೆಂಪರೇಚರನ್ನು 20-21 ಡಿ.ಸೆ.ಗೆ ಸೆಟ್ ಮಾಡಿಕೊಳ್ಳುತ್ತಾರೆ. 24-25 ಡಿ.ಸೆ. ತಾಪಮಾನದಲ್ಲಿ ಇರುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯ. 20 ಡಿ.ಸೆ.ನಿಂದ 24 ಡಿ.ಸೆ.ಗೆ ಬದಲಾಯಿಸುವುದರಿಂದ ಶೇಕಡ 24ರಷ್ಟು ಇಂಧನ ಉಳಿಸಬಹುದು.

    ಬೇರೆ ದೇಶಗಳಲ್ಲೂ ಇದೆ: ಈ ನಿಯಮ ಭಾರತದಲ್ಲಿ ಮಾತ್ರ ಜಾರಿಯಾಗುತ್ತಿದೆ ಎಂದೆಣಿಸಬೇಡಿ. ಬೇರೆ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಜಪಾನ್​ನಲ್ಲಿ ಡಿಫಾಲ್ಟ್ ಟೆಂಪರೇಚರೇ 28 ಡಿ.ಸೆ.; ಅಮೆರಿಕದಲ್ಲಿ 23.5 ಡಿ.ಸೆ.ನಿಂದ 25.5 ಡಿ.ಸೆ. ಇತ್ಯಾದಿ.

    ಇಂಧನ ಉಳಿತಾಯ: ರೂಂ ಎ.ಸಿ.ಗಳಿಗೆ ಸ್ಟಾರ್ ಲೇಬೆಲಿಂಗ್ ಪ್ರೋಗ್ರಾಮ್ ಜಾರಿಗೆ ತಂದ ಬಳಿಕ ಇಂಧನ ಉಳಿತಾಯವಾಗುತ್ತಿದೆಯಲ್ಲದೆ, ಕಾರ್ಬನ್ ಹೊರಸೂಸುವಿಕೆಯೂ ಕಡಿಮೆಯಾಗಿದೆ. 2017-18ರ ಆರ್ಥಿಕ ವರ್ಷದಲ್ಲಿ ಈ ಕ್ರಮದಿಂದಾಗಿ 460 ಕೋಟಿ ಯೂನಿಟ್ ವಿದ್ಯುತ್ ಉಳಿತಾಯ ಸಾಧ್ಯವಾಗಿದೆ. 3.8 ಕೋಟಿ ಟನ್​ನಷ್ಟು ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಿದೆ ಎನ್ನುತ್ತವೆ ಬಿಇಇ ಅಂಕಿಅಂಶಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts