More

    ಸೊಂಡೆಕೆರೆಯಲ್ಲಿ ಮೈಲಾರಲಿಂಗೇಶ್ವರನ ದೋಣಿ ಪೂಜೆ

    ಐಮಂಗಲ: ಹೋಬಳಿಯ ಸೊಂಡೆಕೆರೆ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಗೊರವರ ಭಕ್ತಿಯ ಪವಾಡದ ದೋಣಿ ಪೂಜೆಯು ಸಾಂಪ್ರದಾಯಿಕವಾಗಿ ನೆರವೇರಿತು.

    ಪ್ರತಿವರ್ಷದಂತೆ ಮೈಲಾರದ ಕಾರ್ಣಿಕೋತ್ಸವಕ್ಕೆ ಹೋಗುವ ಭಕ್ತರು, ಗೊರವರು ಭಾರತ ಹುಣ್ಣಿಮೆಯಂದು ಈ ಸೇವೆ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಸಾಂಪ್ರದಾಯಿಕ ದಿರಿಸು ತೊಟ್ಟು ಪೂಜಾ ವಿಧಿವಿಧಾನ ಪೂರ್ಣಗೊಳಿಸಿದರು.

    ಕರಿ ಕಂಬಳಿ ಹಾಸಿ ಅದರ ಮೇಲೆ ಅಕ್ಕಿ ಹಾಕಿ ತ್ರಿಶೂಲ ಹಾಗೂ ಈಶ್ವರನ ಲಿಂಗವನ್ನು ಬಿಡಿಸಿ ಮೈಲಾರಲಿಂಗೇಶ್ವರನ ಭಾವಚಿತ್ರ ಇಟ್ಟು ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಗೊರವರು ತಮ್ಮ ದೋಣಿಗಳನ್ನು ಇಟ್ಟು ದೋಣಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಾರೆ.

    ಭಕ್ತರು ತಂದ ಬಾಳೆಹಣ್ಣು, ಹಾಲು, ತುಪ್ಪ, ಮೊಸರು, ಕಲ್ಲು ಸಕ್ಕರೆ, ಉತ್ತುತ್ತಿ ಹಾಗೂ ಮಡಿಯಿಂದ ಮಾಡಿದ ಎಡೆಯನ್ನು ದೋಣಿಗಳಲ್ಲಿ ತುಂಬಿಸಿ ಪೂಜೆ ಸಲ್ಲಿಸಲಾಗುತ್ತದೆ.

    ದೇವಸ್ಥಾನದ ಎದುರು ದೀಪ ಸ್ತಂಭದ ಮೇಲೆ ದೀಪ ಹಚ್ಚಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಿ ದೋಣಿ ಸೇವೆಗೆ ತೆರೆ ಎಳೆಯಲಾಗುತ್ತದೆ.

    ಗೊರವರು ಕೈಯಲ್ಲಿರುವ ಡಮರುಗ ಬಾರಿಸುತ್ತ ನೃತ್ಯ ಮಾಡುತ್ತ ಭಕ್ತರೊಂದಿಗೆ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವಕ್ಕೆ ಪಯಣ ಬೆಳೆಸಿದರು. ದೋಣಿ ಸೇವೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹಸಿರು ಚಪ್ಪರ, ಮಾವಿನ ತೋರಣ ಹಾಗೂ ವಿವಿಧ ಬಣ್ಣದ ಪುಷ್ಪಗಳಿಂದ ಶೃಂಗರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts