More

    ಹಿಂದಿನ ಸಿಇಒ ಸೇರಿ 37 ನೌಕರರ ವಿರುದ್ಧ ಎಫ್‌ಐಆರ್

    ಐಮಂಗಲ: ಯರಬಳ್ಳಿ ಗ್ರಾಪಂ ಹುದ್ದೆಗಳಿಗೆ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ಮತ್ತು ತಾಪಂ ಇಒ ಸೇರಿ 37 ನೌಕರರ ಮೇಲೆ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಿರಿಯೂರು ಜೆಎಂಎಫ್‌ಸಿ ನ್ಯಾಯಾಲಯ ಸೆ.25 ರಂದು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ, ಜಿಪಂ ಹಿಂದಿನ ಸಿಇಒ ಸತ್ಯಭಾಮಾ, ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಈಗಿನ ಉಪಕಾರ‌್ಯದರ್ಶಿ ಮಹಮದ್ ಮುಬೀನ್ ಹಾಗೂ ಹಿರಿಯೂರು ತಾಪಂ ಇಒ ರಾಮ್‌ಕುಮಾರ್ ಸಹಿತ 37 ಅಧಿಕಾರಿ, ನೌಕರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಪ್ರಕರಣದ ವಿವರ

    ಯರಬಳ್ಳಿ ಗ್ರಾಪಂ ನೀರಗಂಟಿ, ಸ್ವಚ್ಛತಾ ಸಿಬ್ಬಂದಿ ಹಾಗೂ ಡಿ ಗ್ರೂಪ್ ಹುದ್ದೆಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಪೂರ್ವಾನುಮತಿ ಪಡೆಯದೇ ನೇಮಕ ಮಾಡಿಕೊಂಡಿದ್ದನ್ನು 2018 ರಲ್ಲಿ ಪಂಚಾಯಿತಿ ಪ್ರತಿನಿಧಿಯೊಬ್ಬರು ಸರ್ಕಾರಕ್ಕೆ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ, ನೇಮಕಾತಿ ಅಕ್ರಮವಾಗಿದ್ದು ಕೂಡಲೇ ರದ್ದು ಮಾಡುವಂತೆ ಹಾಗೂ ಸಂಬಂಧಿತರ ವಿರುದ್ಧ ಮೊಕದ್ದಮೆ ಹೂಡುವಂತೆ ಆದೇಶಿಸಿದ್ದರು.

    ಈ ಆದೇಶ ಹೊರ ಬಿದ್ದ ನಂತರದಲ್ಲಿ ಆರು ಸಿಬ್ಬಂದಿ ವಜಾಗೊಂಡಿದ್ದರು. ಈ ಪೈಕಿ ನಾಲ್ವರು ರಾಜಕೀಯ ಹಾಗೂ ಹಿರಿಯ ಅಧಿಕಾರಿಗಳ ಸಹಾಯದಿಂದ 2019 ಫೆಬ್ರವರಿಯಲ್ಲಿ ಮರುನೇಮಕಗೊಂಡು ಅಲ್ಲಿಂದ ಒಂದುವರೆ ವರ್ಷದವರೆಗೂ ವೇತನ ಪಡೆಯುತ್ತಿದ್ದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಕಂದಿಕೆರೆ ಜಗದೀಶ್ ಹೂಡಿದ್ದ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಾಲಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದರಿಂದಾಗಿ 37 ಜನರ ವಿರುದ್ಧ ಸೆ.29ರಂದು ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣದ ಕುರಿತಂತೆ FIR ದಾಖಲಾಗಿರುವುದರಿಂದ ಪೊಲೀಸರು ತನಿಖೆ ನಡೆಸುತ್ತಾರೆ. ನಾನೂ ಕೂಡ ನಮ್ಮಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತೇನೆ.
    > ಟಿ.ಯೋಗೇಶ್ ಸಿಇಒ, ಜಿಪಂ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts