More

    ಅಂಜಲಿ ಕೊಲೆ ಪ್ರಕರಣಕ್ಕೆ ಅಹಿಂದ ಮುಖಂಡರ ತೀವ್ರ ಖಂಡನೆ, ಬಿಜೆಪಿಗರ ರಕ್ತ ಕುದಿಯುತ್ತಿಲ್ಲವೇಕೆ ಎಂದು ಮುಖಂಡರ ಪ್ರಶ್ನೆ

    ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹಾಗೂ ನೇಹಾ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಅಹಿಂದ ಒಕ್ಕೂಟದ ಮುಖಂಡರು, ಬಿಜೆಪಿ ಪಕ್ಷ ನೇಹಾಳ ಪ್ರಕರಣಕ್ಕೆ ನೀಡಿದಷ್ಟು ಬೆಂಬಲ ಅಂಜಲಿ ಪ್ರಕರಣಕ್ಕೆ ನೀಡದಿರುವುದು ಕೋಮುವಾದ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

    ಇತ್ತೀಚೆಗೆ ಯಾವುದೇ ಕೊಲೆ ಪ್ರಕರಣ ನಡೆದರೂ ಬಿಜೆಪಿ ಹೆಣಗಳ ಮೇಲೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗಿ ನಿಲ್ಲುತ್ತಿದೆ. ನೇಹಾಳ ಕೊಲೆ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಎಂಬ ಕಾರಣಕ್ಕೆ ಜೆ.ಪಿ. ನಡ್ಡಾ ಮತ್ತಿತರ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಓಡೋಡಿ ಬಂದರು. ಇದೀಗ ಅಂಜಲಿ ಪ್ರಕರಣದಲ್ಲಿ ನಡ್ಡಾಗೆ ಹುಬ್ಬಳ್ಳಿ ದೂರವಾಯಿತೇ? ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಅಂಜಲಿ ಅಂಬಿಗೇರ ಅವರ ಸಾವಿಗೆ ಬಿಜೆಪಿಯ ರಕ್ತ ಕುದಿಯುತ್ತಿಲ್ಲವೇಕೆ? ಅವರು ಹಿಂದುಗಳು ಅಲ್ಲವೇ? ಅಲ್ಲಿ ಮುಸ್ಲಿಂ ಆರೋಪಿ ಇಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ದೆಯೇ? ಎಂದು ಪ್ರಶ್ನಿಸಿದರು.

    ಕೊಲೆಯನ್ನು ಕೊಲೆಯನ್ನಾಗಿ ಮಾತ್ರ ನೋಡಬೇಕು. ಕೊಂದವರು ಯಾರೇ ಇರಲಿ ಅವರು ನೀಚರೇ. ಕೊಲೆಯಾಗಲ್ಪಟ್ಟವರು ಯಾವುದೇ ಧರ್ಮ, ಮತ, ಪಂಥದವರಾಗಿರಲಿ ಅವರದ್ದು ಕೂಡ ಒಂದು ಜೀವವೆ. ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ, ನೇಹಾ ಹಿರೇಮಠ, ರುಕ್ಸಾನಾ, ಮಂಗಳೂರು ಸೇರಿದಂತೆ ಅನೇಕ ಯುವತಿಯರ ಕೊಲೆ ನಡೆದಿರುವುದು ನೋವಿನ ಸಂಗತಿ, ಅಪರಾಧಿಗಳಿಗೆ ಜಾತಿ ಇಲ್ಲ, ಅಪರಾಧಿಗಳು ಅಪರಾಧಿಗಳೇ ಎಂದರು.

    ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಮಣಿಪುರದಲ್ಲಿ ಯುವತಿ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆದರೂ ಐವತ್ತಾರೂ ಇಂಚಿನ ಪ್ರಧಾನಿ ತುಟಿ ಪಿಟಕ್ ಎನ್ನಲಿಲ್ಲ, ದೇಶ ಕಂಡ ಅತ್ಯಂತ ಅಶಕ್ತ ಪ್ರಧಾನಿ ಮೋದಿ ಎಂದರು.

    ಕೊಲೆಗೀಡಾಗಿರುವ ಅಂಜಲಿ ಅಂಬಿಗೇರ ಅವರ ಕುಟುಂಬ ಅತ್ಯಂತ ಬಡತನದಿಂದ ಕೂಡಿದೆ, ಮನೆ ಕೊಡುವುದರ ಜೊತೆಗೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದರು.

    ಮುಸ್ಲಿಂರು ಆರೋಪಿಯಾಗಿದ್ದರೆ ಪ್ರತಿಭಟನೆ, ಆಕ್ರೋಶ, ಆದರೆ ಹಿಂದೂ ಆರೋಪಿಯಾಗಿದ್ದರೆ ಬಿಜೆಪಿ ಪಾಲಿಗೆ ಬಾರಾ ಖೂನ್ ಮಾಫ್ ಎಂದು ಆಕ್ರೋಶ ಹೊರಹಾಕಿದ ಅವರು, ಟೀಕೆ ಬರಬಹುದು ಎಂಬ ಕಾರಣಕ್ಕೆ ವಿಜಯಪುರ ನಗರ ಶಾಸಕ ಯತ್ನಾಳ ಅಂಜಲಿ ಅವರ ಮನೆಗೆ ಕಾಟಾಚಾರಕ್ಕೆ ಹೋಗಿದ್ದಾರೆ ಎಂದರು.

    ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ಕೊಲೆಗಡುಕರ ಮೇಲೆ ಕಠಿಣ ಕ್ರಮ ನಡೆಯಬೇಕು, ಪ್ರೀತಿ ದೊರಕಲಿಲ್ಲ ಎಂದು ಯುವತಿಯರಿಗೆ ಕೊಲೆ ಮಾಡಿದ ಕೊಲೆಗಡುಕರಿಗೆ ಎನ್‌ಕೌಂಟರ್ ಮಾಡಿ ಬಿಸಾಕಬೇಕು. ವಿಷಾದನೀಯವೆಂದರೆ ಕೊಲೆಗೀಡಾಗಿರುವವರು ಹಿಂದುಳಿದ ವರ್ಗಗಳಿಗೆ ಸೇರಿದ್ದರೆ ಪ್ರತಿಭಟನೆ ದೊಡ್ಡ ಧ್ವನಿ ಮೊಳಗುವುದೇ ಇಲ್ಲ ಎಂದರು.

    ಡಾ.ರವಿ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳು ವೈಯಕ್ತಿಕ ವಿಚಾರಕ್ಕೆ ಆಗಿರುವಂಥದ್ದು. ಪ್ರಜ್ವಲ್ ರೇವಣ್ಣ ಸುಮಾರು ಜನರ ಬದುಕು ಹಾಳು ಮಾಡಿದಾಗ ಬಿಜೆಪಿಯ ನಿಲುವೇ ಬೇರೆ. ಯತ್ನಾಳ ಆಗಲಿ ಇನ್ನಿತರ ಬಿಜೆಪಿ ಮುಖಂಡರು ಎನ್‌ಕೌಂಟರ್ ಮಾಡಿ ಎಂದು ಎಲ್ಲೂ ಹೇಳುತ್ತಿಲ್ಲ. ಪ್ರಜ್ವಲ್ ಕೇಸ್‌ನಲ್ಲಿ ದೌರ್ಜನ್ಯ ಕ್ಕೆ ಒಳಗಾದವರು ಹಿಂದು ಮಹಿಳೆಯರಲ್ಲವಾ? ದೌರ್ಜನ್ಯ ಎಸಗಿದವರು ಅನ್ಯ ಕೋಮಿನವರಾದರೆ ಮಾತ್ರ ನಿಮಗೆ ರೋಷ ಬರೋದಾ? ಎಂದರು.
    ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ನಾಗರಾಜ ಲಂಬು, ಶಿವಾಜಿ ಮೆಟಗಾರ, ಡಾ.ರವಿ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts