More

    ರಕ್ತ ಹರಿದರೂ ಮೀಟರ್ ಹಾಕಲು ಬಿಡೆವು; ಜಗಳೂರಿನಲ್ಲಿ ರೈತರ ಪ್ರತಿಜ್ಞೆ, ಬೃಹತ್ ಪ್ರತಿಭಟನೆ

    ಜಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಹಾಗೂ ಎಪಿಎಂಸಿ ಮೂರು ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಳೇ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

    ದೇಶಕ್ಕೆ ಅನ್ನ ನೀಡುವ ರೈತರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಬೇಕು. ಅದರ ಹೊರತಾಗಿ ಯಾವುದೇ ಕಾರಣಕ್ಕೂ ಮೀಟರ್ ಹಾಕಲು ಬಿಡುವುದಿಲ್ಲ. ಇದಕ್ಕಾಗಿ ನಮ್ಮ ರಕ್ತ ಹರಿದರು ಚಿಂತೆ ಇಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಅಲ್ಲಿಂದ ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

    ಅನೇಕ ವರ್ಷಗಳಿಂದಲೂ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರಗಳು ಉಚಿತವಾಗಿ ವಿದ್ಯುತ್ ನೀಡುತ್ತ ಬಂದಿವೆ. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಟರ್ ಅಳವಡಿಸಲು ಚಿಂತನೆ ನಡೆಸಿ ರೈತ ವಿರೋಧಿ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದರು.

    ಎಪಿಎಂಸಿ ಮೂರು ಕಾಯ್ದೆಗಳನ್ನು ಜಾರಿಗೆ ತಂದಿರುವ ನರೇಂದ್ರ ಮೋದಿ ಅವರು ಲಕ್ಷಾಂತರ ರೈತರ ನಿರಂತರ ಹೋರಾಟದಿಂದ ಎಚ್ಚೆತ್ತು ಕಾಯ್ದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರೂ ಈವರೆಗೆ ಅಂಗೀಕೃತವಾಗಿಲ್ಲ. ಕೂಡಲೇ ರದ್ದುಪಡಿಸಬೇಕು, ರೈತರಿಗೆ ಅನ್ಯಾಯವಾಗುವುದನ್ನು ತಡೆಯಬೇಕು, ಎಪಿಎಂಸಿ ಯಥಾವತ್ತಾಗಿ ಮುಂದುವರಿಸಬೇಕು ಎಂದು ಮನವಿ ಮಾಡಿದರು.

    ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ದೇಶಕ್ಕೆ ಕೃಷಿ ಉತ್ಪಾದನೆಯ ಬಲ ನೀಡುವ ರೈತರ ನೋವು ಕೇಳುವವರೇ ಇಲ್ಲವಾಗಿದೆ. ಈಗಿನ ದುಬಾರಿ ಬೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಿ ಬಿತ್ತಿ ಕೊನೆಗೆ ಉತ್ತಮ ಬೆಲೆ ಸಿಗದೆ ಸಾಲದ ಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರಂತ ಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ರೈತ ಸಂಘದ ಜಿಲ್ಲಾ ಮುಖಂಡ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಪಡೆಯುವ ರಾಜಕಾರಣಿಗಳಿಗೆ ರೈತರ ನೋವು ಕಣ್ಣಿಗೆ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದರು.

    ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಸಾಕಷ್ಟು ಹಾನಿಯಾದರೆ ಸರ್ಕಾರ ಕೆಲವರಿಗೆ ಮಾತ್ರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಸಾಲದ ಹೊರೆಯನ್ನು ರೈತ ಹೊತ್ತುಕೊಳ್ಳುತ್ತಿದ್ದಾನೆ ಎಂದರು.

    ಇದೀಗ ಸರ್ಕಾರಗಳು ರೈತರ ವಿರುದ್ಧ ಅವೈಜ್ಞಾನಿಕ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಇದರ ವಿರುದ್ಧ ರೈತರು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕಾಧ್ಯಕ್ಷ ಪಿ.ಗಂಗಾಧರಪ್ಪ, ಗೌರವಾಧ್ಯಕ್ಷ ವೀರೇಶ್, ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ಕಾರ್ಯದರ್ಶಿ ಟಿ.ಎಚ್.ಸಹದೇವ, ಹೋಬಳಿ ಅಧ್ಯಕ್ಷ ಎಂ.ಶರಣಪ್ಪ, ಕೆಂಚಪ್ಪ, ಪ್ರಹ್ಲಾದಪ್ಪ ನೂರಾರು ರೈತರು ಇದ್ದರು.

    ಬೇಡಿಕೆಗಳು:
    1. ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಖಾಸಗೀಕರಣ ಕೈ ಬಿಡಬೇಕು.
    2. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ತೀರ್ಮಾನದಿಂದ ಹಿಂದೆ ಸರಿಯಬೇಕು.
    3. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಸಂಪೂರ್ಣ ಉಚಿತವಾಗಿ ನೀಡಬೇಕು. ಬಾಕಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು.
    4. ಕೃಷಿ ಪಂಪ್‌ಸೆಟ್‌ಗೆ ಕನಿಷ್ಠ ಹತ್ತು ತಾಸು ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಹಗಲಿನಲ್ಲಿಯೇ ವಿದ್ಯುತ್ ನೀಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts