More

    ಕೃಷಿ, ಅರಣ್ಯ ಡಿಪ್ಲೊಮಾ ಪ್ರವೇಶಾತಿ ಸ್ಥಗಿತ

    ಸುಭಾಸ ಧೂಪದೊಂಡ ಕಾರವಾರ

    ಕೃಷಿಕರ ಮಕ್ಕಳ ಕೋರ್ಸ್ ಎಂದೇ ಹೆಸರಾಗಿದ್ದ ಕೃಷಿ ಹಾಗೂ ಅರಣ್ಯ ಡಿಪ್ಲೊಮಾ ಕೋರ್ಸ್​ಗಳನ್ನು ಸ್ಥಗಿತ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

    ಪರಿಣಾಮ ಜಿಲ್ಲೆಯ ಕುಮಟಾ ಹಾಗೂ ಶಿರಸಿಯಲ್ಲಿದ್ದ ಕೃಷಿ ಹಾಗೂ ಅರಣ್ಯ ಡಿಪ್ಲೊಮಾ ಕಾಲೇಜ್​ಗಳು ಈ ವರ್ಷದಿಂದ ಹೊಸ ದಾಖಲಾತಿ ಸ್ಥಗಿತ ಮಾಡಿವೆ.

    10 ನೇ ತರಗತಿ ಮುಗಿಸಿದ ಅಭ್ಯರ್ಥಿಗಳಿಗೆ ಬೆಳೆಗಳ ಪದ್ಧತಿ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಹೀಗೆ ವಿವಿಧ ಅಂಶಗಳನ್ನು ತಿಳಿಸಿಕೊಡುವ ಡಿಪ್ಲೊಮಾ ಕೋರ್ಸ್​ಗಳು ಹಲವು ವರ್ಷಗಳಿಂದ ನಡೆಯುತ್ತಿದ್ದವು.

    ಕೃಷಿಕರ ಮಕ್ಕಳಿಗೆ ಶೇ. 50 ಮೀಸಲಾತಿ ಇತ್ತು. ಇನ್ನು ಅರಣ್ಯ ಡಿಪ್ಲೊಮಾದಲ್ಲಿ ಬಿಎಸ್​ಸಿ ಫಾರೆಸ್ಟ್ರಿಯ ಪಠ್ಯಕ್ರಮವನ್ನೇ ಸಂಕ್ಷಿಪ್ತವಾಗಿ ಅಳವಡಿಸಲಾಗಿತ್ತು.

    ಧಾರವಾಡ ಕೃಷಿ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಇಂಥ 8 ಡಿಪ್ಲೊಮಾ ಕಾಲೇಜ್​ಗಳಿದ್ದವು. ಸಾವಿರಕ್ಕೂ ಅಧಿಕ ಸೀಟುಗಳಿದ್ದವು. ಈ ಶೈಕ್ಷಣಿಕ ವರ್ಷಕ್ಕೆ ಡಿಪ್ಲೊಮಾ ಮೊದಲ ವರ್ಷದ ಪ್ರವೇಶಕ್ಕಾಗಿ ಪ್ರಕಟಣೆಯನ್ನೂ ವಿವಿ ನೀಡಿತ್ತು. ನಂತರ ಸರ್ಕಾರದ ಆದೇಶದಂತೆ ತನ್ನ ಪ್ರಕಟಣೆಯನ್ನು ಹಿಂಪಡೆದಿದೆ.

    ಎಲ್ಲ ಕಾಲೇಜ್​ಗಳಲ್ಲಿ ಪ್ರವೇಶಾತಿ ನಿಲ್ಲಿಸಲಾಗಿದೆ. ಈಗ ಎರಡನೇ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ತರಗತಿ ಮುಗಿಸಿ ಕಾಲೇಜ್ ಅನ್ನು ಸಂಪೂರ್ಣವಾಗಿ ಬಾಗಿಲು ಹಾಕಲಾಗುವುದು ಎಂದು ವಿವಿ ಮೂಲಗಳು ತಿಳಿಸಿವೆ.

    ಕುಮಟಾ ಡಿಪ್ಲೊಮಾ ಕಾಲೇಜ್ ಸ್ಥಳಾಂತರ

    ಕುಮಟಾದ ಮಣಕಿ ಸರ್ಕಲ್ ಪಕ್ಕದಲ್ಲೇ ಇರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಪಾಠ ಶಾಲೆ ಹೆಸರಿನಲ್ಲಿ ತರಬೇತಿಗಳನ್ನು ನಡೆಸಲಾಗುತ್ತಿತ್ತು.

    ನಂತರ ಅಲ್ಲಿ ಡಿಪ್ಲೊಮಾ ಕಾಲೇಜ್ ಕೂಡ ಪ್ರಾರಂಭಿಸಲಾಗಿತ್ತು. ಕಳೆದ ವರ್ಷವೇ ಕಾಲೇಜ್ ಅನ್ನು ಹನುಮನಮಟ್ಟಿಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿ ಮಾತ್ರ ಕುಮಟಾದಲ್ಲಿದ್ದು, ಈ ವರ್ಷ ಅಧಿಕೃತವಾಗಿ ಕಾಲೇಜ್ ಬಾಗಿಲು ಹಾಕಲಿದೆ.

    ಮುಂಡಗೋಡಿನ ಮಳಗಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿವಿಯಿಂದಲೇ ಅರಣ್ಯ ಡಿಪ್ಲೊಮಾ ಕೋರ್ಸ್ ನಡೆಯುತ್ತಿತ್ತು. ಧಾರವಾಡದಿಂದ ಮಳಗಿಗೆ ಪ್ರಾಧ್ಯಾಪಕರು ಬಂದು ಹೋಗುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಶಿರಸಿಯ ಅರಣ್ಯ ಮಹಾವಿದ್ಯಾಲಯಕ್ಕೆ ಅದನ್ನು ಸ್ಥಳಾಂತರಿಸಲಾಗಿತ್ತು. ಈ ವರ್ಷದಿಂದ ಶಿರಸಿಯಲ್ಲೂ ಅರಣ್ಯ ಡಿಪ್ಲೊಮಾ ಕೋರ್ಸ್ ಸ್ಥಗಿತವಾಗಲಿದೆ.

    ಏಕೆ ಸ್ಥಗಿತ..?

    ಕೃಷಿ ಡಿಪ್ಲೊಮಾ ಮುಗಿಸಿದವರಿಗೆ ಎಸ್​ಎಸ್​ಎಲ್​ಸಿ ನಂತರದ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ ಇದಾಗಿದ್ದರೂ ಇದನ್ನು ಪಿಯುಸಿಗೆ ಸಮಾನಾಂತರ ಎಂದು ಪಿಯು ಬೋರ್ಡ್ ಪರಿಗಣಿಸಿರಲಿಲ್ಲ.

    ಕೃಷಿ ಇಲಾಖೆಯಲ್ಲಿ ಉದ್ಯೋಗ ಪಡೆಯಲೂ ಈ ಕೋರ್ಸ್ ಪರಿಗಣನೆ ಮಾಡಿರಲಿಲ್ಲ. ಈ ಡಿಪ್ಲೊಮಾ ಪಡೆದವರು ಖಾಸಗಿ ರಾಸಾಯನಿಕಗೊಬ್ಬರ, ಕೀಟನಾಶಕ ಕಂಪನಿಗಳಲ್ಲಿ ಉದ್ಯೋಗ ಹುಡುಕಬೇಕಿತ್ತು.

    ಈ ಕೋರ್ಸ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಫಲವಾಗುತ್ತಿವೆ ಎಂಬ ಕಾರಣ ನೀಡಿ ಕೋರ್ಸ್ ಬಂದ್ ಮಾಡಲು ಕೃಷಿ ಇಲಾಖೆ ಕಾರ್ಯದರ್ಶಿಗಳು ಶಿಫಾರಸು ಮಾಡಿದ್ದರು ಎನ್ನಲಾಗಿದೆ.

    ಡಿಪ್ಲೊಮಾ ಕಾಲೇಜ್​ಗಳಿಗೆ ಪ್ರತ್ಯೇಕ ಬೋಧಕರಿರಲಿಲ್ಲ. ಬಿಎಸ್​ಸಿ ಎಗ್ರಿ ಹಾಗೂ ವಿವಿಯ ಪ್ರಾಧ್ಯಾಪಕರಿಂದಲೇ ನಾವು ಡಿಪ್ಲೊಮಾ ಕಾಲೇಜ್​ಗಳನ್ನೂ ನಡೆಸಬೇಕಿತ್ತು. ಆದರೂ ಅವುಗಳನ್ನು ನಿರ್ವಹಿಸುತ್ತಿದ್ದೆವು. ಈ ವರ್ಷ ಸರ್ಕಾರದ ಸೂಚನೆಯಂತೆ ಹೊಸ ಪ್ರವೇಶಾತಿಯನ್ನು ಬಂದ್ ಮಾಡಲಾಗಿದೆ.

    | ಉಮೇಶ ಮುಕ್ತಾಮಠ ಪ್ರಾಂಶುಪಾಲರು ಹಾಗೂ ಕೋಆರ್ಡಿನೇಟರ್ ಕೃಷಿ ವಿವಿ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts