More

    ಕೃಷಿ, ಜಾನಪದ ಸೊಬಗು: ಇಂದಿನಿಂದ ಮೈಸೂರಿನಲ್ಲಿ ಕೃಷಿ ಮೇಳ, ನೀರಿನ ಬಳಕೆ ಪ್ರಾತ್ಯಕ್ಷಿಕೆ

    ಮೈಸೂರು: ಮೈಸೂರು ಕೃಷಿ ಮೇಳ ಶುಕ್ರವಾರ ಕೃಷಿ ಪ್ರಾತ್ಯಕ್ಷಿಕೆ ಜತೆಗೆ ಜಾನಪದ ನೃತ್ಯ ಸ್ಪರ್ಧೆ, ದೇಸೀ ಕ್ರೀಡೋತ್ಸವದ ಸೊಬಗನ್ನು ಜನತೆಗೆ ಕಟ್ಟಿಕೊಡಲಿದೆ. ಸಮಗ್ರ ಕೃಷಿ, ಸಾವಯವ ಕೃಷಿ, ಆಧುನಿಕ ಬೇಸಾಯ, ಉತ್ತಮ ಬಿತ್ತನೆ ಬೀಜಗಳು, ಕೃಷಿ ಅನ್ವೇಷಣೆ ಇನ್ನಿತರ ಮಾಹಿತಿ ಲಭಿಸುವುದು ಒಂದೆಡೆಯಾದರೆ ನೀರಿನ ಬಳಕೆ ಕಡಿಮೆ ಮಾಡುವ ಕುರಿತು ಪ್ರಾತ್ಯಕ್ಷಿಕೆ ವೀಕ್ಷಣೆಗೂ ಅವಕಾಶ ಉಂಟು. ಬೀಜ ಉತ್ಪಾದಿತ ರೈತರು ಮತ್ತು ಬೀಜ ಪೂರೈಕೆ ಮಾಡುವ ಪ್ರತಿನಿಧಿಗಳ ಸಮಾಗಮವೂ ಆಗಲಿದೆ. ಇದರೊಂದಿಗೆ ಕೃಷಿಯ ಸಂಕಷ್ಟ-ಪರಿಹಾರ ಕುರಿತು ವಿಚಾರ ಮಂಥನವಾಗಲಿದೆ.

    ಮಧ್ಯಾಹ್ನ 3ಕ್ಕೆ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ವಿದ್ಯಾಶಂಕರ್ ಉದ್ಘಾಟಿಸುವರು. ಇದೇ ಹೊತ್ತಿಗೆ ಹೊರಾಂಗಣದ ವೇದಿಕೆಯಲ್ಲಿ ದೇಸಿ ಕ್ರೀಡೆಗಳ ಸ್ಪರ್ಧೆ ಕಳೆಗಟ್ಟಲಿವೆ. ಪುರುಷರಿಗೆ ಹಗ್ಗಜಗ್ಗಾಟ, ಬುಗುರಿ, ಲಗೋರಿ, ಕುದುರೆ ಓಟ, ಮೂರು ಕಾಲಿನ ಓಟ, ಮೂಟೆ ಹೊರುವ ಸ್ಪರ್ಧೆ, ಗೋಣಿ ಚೀಲ ಓಟ, ಹಿಮ್ಮುಖ ಓಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಸಂಜೆ 5ಕ್ಕೆ ಜಾನಪದ ಗಾಯಕ ಮೈಸೂರು ಗುರುರಾಜ್ ನಡೆಸಿಕೊಡುವ ಮಂಟೇಸ್ವಾಮಿ ಕಥಾ ಪ್ರಸಂಗ ಈ ಭಾಗದ ದಾರ್ಶನಿಕರಾದ ಮಂಟೇಸ್ವಾಮಿ ಮಹಿಮೆಯನ್ನು ಕಟ್ಟಿಕೊಡಲಿದೆ.

    ಶುಕ್ರವಾರದ ಕಾರ್ಯಕ್ರಮ: ಬೆಳಗ್ಗೆ 10ಕ್ಕೆ ಸಂಸ್ಕೃತ ಪಾಠಶಾಲೆ ವೃತ್ತದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಯಲಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಚಾಲನೆ ನೀಡುವರು. ಸಭಾವೇದಿಕೆಯಲ್ಲಿ ರಂಗಕರ್ವಿು ಎಚ್. ಜನಾರ್ದನ್(ಜನ್ನಿ) ಅವರಿಂದ ಜಾನಪದ ಗೀತೆಗಳ ಗಾಯನ ಜರುಗಲಿದೆ. ಕೃಷಿ ಮೇಳದ ಹಿನ್ನೆಲೆಯಲ್ಲಿ ವಿಜಯವಾಣಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸುವರು. ಕೃಷಿ ಸಂಸ್ಕೃತಿ ಕಟ್ಟಿಕೊಡುವ ಮಳಿಗೆಗಳ ಉದ್ಘಾಟನೆಯನ್ನು ಸಚಿವ ನಾರಾಯಣಗೌಡ ನೆರವೇರಿಸುವರು. ಶಾಸಕರು, ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

    ಮೇಳದ ಆಕರ್ಷಣೆ: 

    • ಜಾನಪದ ನೃತ್ಯ ಸ್ಪರ್ಧೆ
    • ದೇಸಿ ಆಟಗಳ ಸ್ಪರ್ಧೆ
    • ಮಂಟೇಸ್ವಾಮಿ ಕಥಾ ಪ್ರಸಂಗ
    • ಚೋರ ಚರಣದಾಸ ನಾಟಕ
    • ರಂಗೋಲಿ ಸ್ಪರ್ಧೆ
    • ವೇಷಭೂಷಣ ಸ್ಪರ್ಧೆ
    • ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ

    ಚಿಂತನ ಮಂಥನ, ಗೋಷ್ಠಿಗಳು: 2ನೇ ದಿನವಾದ ಶನಿವಾರ ಬೆಳಗ್ಗೆ 10ಕ್ಕೆ ಕೃಷಿ ವಿಚಾರ ಗೋಷ್ಠಿಯನ್ನು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಉದ್ಘಾಟಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸುವರು. ಬಳಿಕ ‘ಆಧುನಿಕ ಕೃಷಿ’ ಮತ್ತು ಮಧ್ಯಾಹ್ನ 12ಕ್ಕೆ ‘ಸುಸ್ಥಿರ ಕೃಷಿ’ ಬಗ್ಗೆ ಗೋಷ್ಠಿ ಜರುಗಲಿದೆ. ಭಾನುವಾರ ಬೆಳಗ್ಗೆ 10ಕ್ಕೆ ಸಮಗ್ರ ಕೃಷಿ ಕುರಿತು ವಿಚಾರ ಮಂಡನೆಯಾಗಲಿದೆ. ಮಧ್ಯಾಹ್ನ 12ಕ್ಕೆ ನಡೆಯುವ ಗೋಷ್ಠಿಯಲ್ಲಿ ಕೃಷಿಗೆ ಪೂರಕ ಕಸುಬುಗಳ ಕುರಿತು ವಿಚಾರ ಮಂಥನ ಜಗುರಲಿದೆ.

    ಮಹಿಳೆಯರಿಗೆ ಹಲವು ಸ್ಪರ್ಧೆಗಳು: ಶನಿವಾರ ಬೆಳಗ್ಗೆ 10ಕ್ಕೆ ಜಿಪಂ ಸಿಇಒ ಕೆ.ಜ್ಯೋತಿ ರಂಗೋಲಿ ಸ್ಪರ್ಧೆ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಮಹಿಳೆಯರಿಗಾಗಿ ದೇಸಿ ಕ್ರೀಡಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾಗಿ ಬೀಸುವುದು, ಬಿಂದಿಗೆ ಹೊತ್ತು ಓಡುವುದು, ಕೂಸುಮರಿ, ಒಂದು ಕಾಲಿನ ಓಟ, ಗೋಣಿಚೀಲದ ಓಟ, ಅವರೆಕಾಯಿ ಬಿಡಿಸುವುದು, ಹಗ್ಗಜಗ್ಗಾಟ ಸಭಿಕರನ್ನು ರಂಜಿಸಲಿವೆ. ಮುಖ್ಯವೇದಿಕೆಯಲ್ಲಿ ವೇಷಭೂಷಣ ಸ್ಪರ್ಧೆ ನಡೆಯಲಿದೆ. ಸಂಜೆ 6ಕ್ಕೆ ಮಂಡ್ಯ ರಮೇಶ್ ನಿರ್ದೇಶನದಲ್ಲಿ ನಟನಾ ರಂಗಶಾಲೆಯ ಕಲಾವಿದರು ಪ್ರಸ್ತುತಪಡಿಸುವ ‘ಚೋರ ಚರಣದಾಸ’ ರಂಗಾಸಕ್ತರನ್ನು ನಗೆಗಡಲಿನಲ್ಲಿ ತೇಲಿಸಲಿದೆ. ಮೇಳದ ಕೊನೆಯ ದಿನವಾದ ಭಾನುವಾರ ಕೂಡ ತರಹೇವಾರಿ ಕಾರ್ಯಕ್ರಮಗಳಿವೆ. ಹೊರಾಂಗಣದ ವೇದಿಕೆಯಲ್ಲಿ ರಾಗಿಮುದ್ದೆ, ಬಾಳೆಹಣ್ಣು ಮತ್ತು ಕಡ್ಲೆಪುರಿ ತಿನ್ನುವ ಸ್ಪರ್ಧೆ ತುರುಸಿನಿಂದ ಜರುಗಲಿದೆ. ಮೂರೂ ದಿನ ಇರುವ ಗೆಡ್ಡೆಗೆಣಸು ಮೇಳ, ಸಿರಿಧಾನ್ಯಗಳ ಮೇಳ ಆಕರ್ಷಣೆಯಾಗಿದೆ. ಭಾನುವಾರ ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಎಂ.ಮಹದೇವಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ, ಸುಮಲತಾ ಮತ್ತು ಪ್ರಜ್ವಲ್ ರೇವಣ್ಣ, ಅಪೆಕ್ಸ್ ಬ್ಯಾಂಕ್​ನ ಅಧ್ಯಕ್ಷ ಕೆ.ಎನ್.ರಾಜಣ್ಣ ಪಾಲ್ಗೊಳ್ಳಲಿದ್ದಾರೆ. ಆಧುನಿಕತೆಯ ಅಬ್ಬರದಲ್ಲಿ ಕೃಷಿ ಹಾಗೂ ಅನ್ನದಾತನ ಜೀವನ ದುಸ್ತರವಾಗುತ್ತಿದೆ. ರೈತರ ಬದುಕು ಸುಸ್ಥಿರವಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ಬೇಸಾಯ ಕ್ರಮ, ನೀರಾವರಿ ನಿರ್ವಹಣೆ, ತಂತ್ರಜ್ಞಾನದ ಸೂಕ್ತ ಬಳಕೆ, ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳುವುದು ಸೇರಿ ರೈತರನ್ನು ಹದಗೊಳಿಸುವ ಕೆಲಸ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ಮೇಳವನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts