More

    ಗ್ರಾಪಂಗಳಿಗೆ ಗ್ರಾಮ ಸ್ವರಾಜ್ ಬಲ

    ಶೃಂಗೇರಿ: ಪ್ರಧಾನಿ ನರೇಂದ್ರ ಮೋದಿ ಗ್ರಾಮ ಸ್ವರಾಜ್ ಆಡಳಿತ ಬಲಪಡಿಸುವ ದೃಷ್ಟಿಯಿಂದ ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ಗ್ರಾಪಂಗೂ 1ರಿಂದ 3 ಕೋಟಿ ರೂ.ವರೆಗೆ ಅನುದಾನ ನೀಡಲಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ವಿನಿಯೋಗಿಸಲು ಸಮರ್ಥ ಪ್ರತಿನಿಧಿಗಳನ್ನು ಗ್ರಾಪಂ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ದೇಶದ ರೈತರ ಆದಾಯ ಇಮ್ಮಡಿಗೊಳಿಸುವ ದೃಷ್ಟಿಯಿಂದ ಕೃಷಿ ಉತ್ಪನ್ನಗಳ ವೆಚ್ಚ ತಗ್ಗಿಸುವ ಮಾರ್ಗವಾಗಿ ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಜತೆಗೆ ಖಾಸಗಿಯವರಿಗೂ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಈ ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬುದನ್ನು ತಿಳಿಸಿದ್ದರೂ ರಾಜಕೀಯ ಕಾರಣಕ್ಕೆ ಪಂಜಾಬ್ ಮತ್ತು ಹರಿಯಾಣದ ರೈತರು ಧರಣಿ ನಡೆಸಿ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಜೆಎನ್​ಯುು, ಸಿಎಎ, ಶಾಹೀನ್ ಬಾಗ್ ಗಲಭೆ ನಿರತರು, ದೇಶದ್ರೋಹಿ ಕುತಂತ್ರಿಗಳು ರೈತರೊಂದಿಗೆ ಸೇರಿ ಚಳವಳಿಯನ್ನು ಹೈಜಾಕ್ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಅವರನ್ನು ಶತಾಯಗತಾಯ ವಿರೋಧಿಸುವ ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂದು ದೂರಿದರು.

    ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ, ಹುಲಿ ಯೋಜನೆ ಎಲ್ಲವೂ ಕಾಂಗ್ರೆಸ್ ಆಡಳಿತ ಅವಧಿಯ ಬಳುವಳಿ. ಅವರು ಮಾಡಿರುವ ತಪ್ಪನ್ನು ಸರಿಪಡಿಸುವ ಹೊಣೆ ನಮ್ಮದಾಗಿದೆ. ಇದಕ್ಕಾಗಿ ಸಮರ್ಥ ವಕೀಲರ ನೇಮಕ ಮಾಡಿದ್ದೇವೆ. ಕೇರಳ ಮಾದರಿಯಲ್ಲಿ ಪ್ರತ್ಯಕ್ಷ ಸಮೀಕ್ಷೆ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ವರದಿ ತಯಾರಿಗೆ ಮನವಿ ಮಾಡಿದ್ದೇವೆ. ಪರಿಸರ ಸೂಕ್ಷ್ಮ ವಲಯವನ್ನು ಭದ್ರಾನದಿ ಅಂಚಿಗೆ ಸೀಮಿತಗೊಳಿಸುವ ಪ್ರಯತ್ನ ನಡೆದಿದೆ ಎಂದರು.

    ಕೃಷಿ ಕಾಯ್ದೆ ಕಾಂಗ್ರೆಸ್ ಕಾಲದ್ದು: ಈಗ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳು 25 ವರ್ಷಗಳ ಹಿಂದೆಯೇ ಪ್ರತಿಪಾದಿತವಾಗಿದ್ದವು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. 2010ರಲ್ಲಿ ಶರದ್ ಪವಾರ್ ಎಲ್ಲ ರಾಜ್ಯ ಸರ್ಕಾರಗಳಿಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಲು ಕೋರಿದ್ದರು. ರಾಹುಲ್ ಗಾಂಧಿ ಸಹ ಇದನ್ನು ಬೆಂಬಲಿಸುವಂತೆ ಸೂಚಿಸಿದ್ದು ದಾಖಲೆಯಲ್ಲಿದೆ. ಆಮ್ ಆದ್ಮಿ ಪಕ್ಷ ತನ್ನ ವಿಧಾನಸಭೆಯಲ್ಲಿ ಇದಕ್ಕೆ ಒಪ್ಪಿ ಈಗ ಉಲ್ಟಾ ಹೊಡೆದಿದೆ. ಕೃಷಿ ಸ್ಥಾಯಿ ಸಮಿತಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ಸಂಸದರು ಸೂಚಿಸಿರುವ ತಿದ್ದುಪಡಿಗಳನ್ನು ಒಳಪಡಿಸಿ ಕಾಯ್ದೆಯನ್ನು ಸಂಸತ್​ನಲ್ಲಿ ಅಂಗೀಕರಿಸಿದ ನಂತರವೂ ಈಗ ಪ್ರತಿರೋಧ ತೋರುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು. ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಕ್ಷೇತ್ರ ಉಸ್ತುವಾರಿ ದೀಪಕ್ ದೊಡ್ಡಯ್ಯ, ಜಿಪಂ ಸದಸ್ಯೆ ಶಿಲ್ಪಾ ರವಿ, ತಾಪಂ ಅಧ್ಯಕ್ಷೆ ಜಯಶೀಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts