More

    ಅಪಾರ ಕೃಷಿ ಭೂಮಿ ಜಲಾವೃತ, ಅವೈಜ್ಞಾನಿಕ ಉಪ್ಪು ನೀರು ತಡೆ ಅಣೆಕಟ್ಟೆಯಿಂದ ಅವಾಂತರ

    -ಹೇಮನಾಥ ಪಡುಬಿದ್ರಿ

    ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸಲು ಸಣ್ಣ ನೀರಾವರಿ ಇಲಾಖೆ ಮೂಲಕ ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟೆಯಿಂದ ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ ಉಂಟಾಗಿದ್ದು, ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

    ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸಲು 25 ವರ್ಷ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟೆ ಕಾಮಗಾರಿ ದೋಷದಿಂದ ಹಲವು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿರಲಿಲ್ಲ. ಅಣೆಕಟ್ಟು ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಹಳೇ ಅಣೆಕಟ್ಟೆ ಬಳಿಯಲ್ಲೇ ಸಣ್ಣ ನೀರಾವರಿ ಇಲಾಖೆ ಮೂಲಕ 7.5 ಕೋಟಿ ರೂ. ವೆಚ್ಚದಲ್ಲಿ ನೂತನ ಅಣೆಕಟ್ಟು ನಿರ್ಮಿಸಲಾಗಿತ್ತು. 15 ದಿನಗಳ ಹಿಂದೆ ಅಣೆಕಟ್ಟೆಗೆ ಹಲಗೆ ಅಳವಡಿಸಲಾಗಿತ್ತು. ಪರಿಣಾಮ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೀರು ಹೊರ ಹರಿವಿಗೆ ಸಂಪರ್ಕಿಸುವ ತೋಡುಗಳು ಹೂಳು ತುಂಬಿ ಪಲಿಮಾರು, ಇನ್ನಾ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆ ಗ್ರಾಮಗಳ ನೂರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ.

    ಈಗ ನಿರ್ಮಾಣವಾಗಿರುವ ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟೆಯಷ್ಟೇ ಅಂದರೆ 7.5 ಮೀಟರ್‌ವರೆಗೆ ಎತ್ತರಿಸಿ ಅಣೆಕಟ್ಟೆಯ ನಾಲ್ಕು ಕಡೆ 4/100 ಮೀಟರ್ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಬಳ್ಕುಂಜೆ ಗ್ರಾಮಕ್ಕೆ ನೀರು ಪೂರೈಸಲು ಕಿರು ಕಾಲುವೆ ನಿರ್ಮಿಸಲಾಗಿತ್ತು. ಯೋಜನೆ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಆ ಕಾಲುವೆ ಸ್ಲಾೃಬ್ ಕುಸಿದು ಹಾನಿಯಾಗಿರುವುದು ಕಾಮಗಾರಿಯ ಗುಣಮಟ್ಟವನ್ನೇ ಪ್ರಶ್ನಿಸುವಂತಿದೆ. ಅಣೆಕಟ್ಟೆ ನಿರ್ಮಾಣ ಸಂದರ್ಭವೇ ಕೃಷಿ ಪ್ರದೇಶಗಳಿಂದ ನೀರು ಸರಾಗವಾಗಿ ಹರಿಯುವಂತೆ ಇರುವ ತೋಡುಗಳ ಹೂಳೆತ್ತಲು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

    ಮಳೆಗಾಲದಲ್ಲಿ ನೆರೆಯಿಂದ ಏಣೆಲು ಭತ್ತ ಕೃಷಿ ಮಾಡಲು ಅಸಾಧ್ಯ. ಸುಗ್ಗಿ ಬೆಳೆಯೋಣವೆಂದರೆ ಅಣೆಕಟ್ಟೆ ಗೇಟ್ ಅಳವಡಿಕೆಯಿಂದ ಕೃಷಿ ಭೂಮಿಯೆಲ್ಲ ಮುಳುಗಡೆಯಾಗುತ್ತಿದ್ದು, ಅಲ್ಪ ಸ್ವಲ್ಪ ಭೂಮಿಯಿದ್ದರೂ ಕೃಷಿ ಮಾಡದಂಥ ಪರಿಸ್ಥಿತಿ ಬಂದೊದಗಿದೆ. ನೀರಿನ ಮಟ್ಟ ಏರಿಕೆಯಿಂದ ಬಾವಿ ನೀರು ಕೂಡ ಮಲಿನವಾಗಿದ್ದು, ಮಾರು ದೂರದಿಂದ ಕುಡಿಯುವ ನೀರನ್ನು ಹೊತ್ತು ತರುವಂತಾಗಿದೆ.
    -ಅಪ್ಪಿ ಪೂಜಾರಿ, ಅಣೆಕಟ್ಟೆ ಪ್ರದೇಶ ನಿವಾಸಿ

    ಸಾವಿರಾರು ರೂ. ಖರ್ಚು ಮಾಡಿ ನಾವೇ ಸ್ವತಃ ಕಷ್ಟಪಟ್ಟು ತರಕಾರಿ ಬೆಳೆದಿದ್ದೇವೆ. ನೀರು ತುಂಬಿ ಗಿಡಗಳೆಲ್ಲ ನೀರಲ್ಲಿ ಕೊಳೆತು ಹೋಗಿವೆ. ಅಣೆಕಟ್ಟೆ ನೀರಿನ ಸಮಸ್ಯೆಯಿಂದ ಕೃಷಿಯನ್ನೇ ನಂಬಿರುವ ನಾವು ಅತಂತ್ರರಾಗಿದ್ದೇವೆ.
    -ಚಂದ್ರಕಾಂತ ಶೆಟ್ಟಿ, ಕೃಷಿಕ

    ಅಂತರ್ಜಲ ವೃದ್ಧಿಸಲು ಅಣೆಕಟ್ಟೆ ಬೇಕು. 90ರ ದಶಕದ ಬಳಿಕ ಅಣೆಕಟ್ಟೆ ನಿರ್ವಹಣೆಗೆ ಸೂಕ್ತ ಕಾವಲುಗಾರರ ನೇಮಕವಾಗದೆ ಆಸುಪಾಸಿನ ಗ್ರಾಮಗಳವರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸದ್ಯ ಅಣೆಕಟ್ಟೆ ಹಲಗೆ ಅಳವಡಿಕೆಯಿಂದ ಬಳ್ಕುಂಜೆ ಭಾಗದ ಕರ್ನಿರೆ, ಉಳೆಪಾಡಿ, ಬಳ್ಕುಂಜೆ ಪ್ರದೇಶಗಳ ಸುಮಾರು 25 ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಮೇಲ್ಮಟ್ಟದಲ್ಲಿ ನೀರಿಲ್ಲದಿದ್ದರೂ, ಭೂಮಿಗಳಲ್ಲಿ ಒರತೆ ಹೆಚ್ಚಾಗಿ ಹಿಂಗಾರು ಕೃಷಿ ಮಾಡುವುದು ಕಷ್ಟವಾಗುತ್ತಿದೆ.
    -ರಿಚರ್ಡ್ ಡಿಸೊಜ, ಪ್ರಗತಿಪರ ಕೃಷಿಕ ಉಳೆಪಾಡಿ

    ಹೆಚ್ಚುವರಿ ನೀರು ಹರಿದು ಹೋಗಲು ಅಣೆಕಟ್ಟೆ ಹಲಗೆ ತೆರವಿಗೆ ಸೂಚನೆ ನೀಡಲಾಗಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಬಳ್ಕುಂಜೆ ಭಾಗದಲ್ಲಿ ಕೃಷಿ ಭೂಮಿ ಜಲಾವೃತವಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
    -ಮಮತಾ, ಸಹಾಯಕ ಇಂಜಿನಿಯರ್, ಸಣ್ಣನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts