More

    ಏತ ನೀರಾವರಿ ಕೃಷಿಗೆ ವರದಾನ

    ಆರ್.ಬಿ.ಜಗದೀಶ್
    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸತನ ನೀಡುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಂಪೂರ್ಣ ಕಾರ್ಯಗತಗೊಳ್ಳುವುದರೊಂದಿಗೆ ತಾಲೂಕಿನ ಹಲವು ಗ್ರಾಮಗಳ ಕೃಷಿ ಕಾರ್ಯಗಳಿಗೆ ಪೂರಕವಾಗಿ ರೈತರಿಗೆ ವರದಾನವಾಗಲಿದೆ.

    ಮಳೆಗಾಲದಲ್ಲಿ ಉಕ್ಕಿ ಹರಿಯುವ ಸ್ವರ್ಣ ನದಿ ಕಡು ಬೇಸಿಗೆ ದಿನಗಳಲ್ಲಿ ಬತ್ತುವುದು ಸಾಮಾನ್ಯ. ಇದೇ ಕಾರಣದಿಂದಾಗಿ ಕಾರ್ಕಳದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಾಲೂಕಿನ ನೀರಿನ ಕೊರತೆ ನೀಗಿಸುವ ಜತೆಗೆ ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ 108 ಕೋಟಿ ರೂ. ಅನುದಾನದಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಯನ್ನು ಕೈಗೊಂಡಿದ್ದಾರೆ.

    ಕೃಷಿ-ಅಂತರ್ಜಲ-ಕುಡಿಯುವ ನೀರಿಗೆ ಆದ್ಯತೆ: ಕಾರ್ಕಳ ತಾಲೂಕಿನ ಎಣ್ಣೆಹೊಳೆ, ಅಜೆಕಾರು, ಮರ್ಣೆ, ಕಿರೆಂಚಿಬೈಲು, ಹಿರ್ಗಾನ, ಹೆರ್ಮುಂಡೆ ಮತ್ತು ಸುತ್ತಮುತ್ತಲಿನ ರೈತರು ಬೇಸಿಗೆಯಲ್ಲಿ ವ್ಯವಸಾಯಕ್ಕೆ ಮತ್ತು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದು ಈ ಗ್ರಾಮಗಳ ರೈತರು ಹಾಗೂ ಜನಪ್ರತಿನಿಧಿಗಳು ಈ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿದ್ದರು. ಏತ ನೀರಾವರಿ ಯೋಜನೆಯಡಿ ಎಣ್ಣೆಹೊಳೆ ಎಂಬಲ್ಲಿ ಎಣ್ಣೆಹೊಳೆ(ಸ್ವರ್ಣಾ) ನದಿಗೆ 125 ಮೀಟರ್ ಉದ್ದ, 3 ಮೀಟರ್ ಎತ್ತರದ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಬ್ಯಾರೇಜ್‌ನಲ್ಲಿ ಸಂಗ್ರಹವಾಗುವ ನೀರನ್ನು ಅಣೆಕಟ್ಟಿನ ಬಲಭಾಗದ ಪ್ರದೇಶಗಳಿಗೆ 3 ಕಿ.ಮೀ ಉದ್ದ ರೈಸಿಂಗ್ ಮೈನ್ ಮುಖಾಂತರ 450 ಎಚ್.ಪಿ ಸಾಮರ್ಥ್ಯದ 2 ಪಂಪ್ ಬಳಸಲಾಗುವುದು. ಎಡಭಾಗದ ಪ್ರದೇಶಗಳಿಗೆ 9.93 ಕಿ.ಮೀ ಉದ್ದದ ರೈಸಿಂಗ್ ಮೈನ್ ಮುಖಾಂತರ ನೀರನ್ನು ಹರಿಸಲು 935 ಎಚ್.ಪಿ ಸಾಮರ್ಥ್ಯದ 3 ಪಂಪ್ ಬಳಸಲಾಗುತ್ತದೆ. ಯೋಜನೆಯ ಉತ್ತರ ದಿಕ್ಕಿನಲ್ಲಿರುವ ಎಣ್ಣೆಹೊಳೆ, ಮರ್ಣೆ ಹಾಗೂ ಅಜೆಕಾರು ಗ್ರಾಮಗಳಿಗೆ ಮತ್ತು ದಕ್ಷಿಣ ಭಾಗದಲ್ಲಿರುವ ಚಿಕ್ಕಲ್‌ಬೆಟ್ಟು, ಕುಕ್ಕುಂದೂರು, ಹಿರ್ಗಾನ ಗ್ರಾಮಗಳ ಸಹಿತ ಜೋಡುರಸ್ತೆ, ಮೂಜೂರು ಮತ್ತು ಕಾರ್ಕಳ ಪ್ರದೇಶಗಳ ಸುಮಾರು 1500 ಹೆಕ್ಟೇರ್ ಪ್ರದೇಶಗಳಿಗೆ ನೀರನ್ನು ಒದಗಿಸಲು ಉದ್ದೇಶಿಸಲಾಗಿದೆ.

    ಸ್ವರ್ಣೆಯಾಗುವ ಎಣ್ಣೆಹೊಳೆ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕಾರ್ಕಳವು ತಾಲೂಕಿನಲ್ಲಿ ಉಗಮವಾಗುವ ನದಿಯಲ್ಲಿ ಸ್ವರ್ಣ ನದಿ ಒಂದಾಗಿದೆ. ಮಾಳ ಪ್ರದೇಶದಲ್ಲಿ ಉಗಮವಾಗಿ ಎಣ್ಣೆಹೊಳೆ ಮೂಲಕವಾಗಿ ಉಡುಪಿ ಕಲ್ಯಾಣಪುರದಲ್ಲಿ ಸ್ವರ್ಣ ನದಿ ಸಮುದ್ರ ಸೇರುತ್ತದೆ. ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆ ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.

    ಕೃಷಿಕರಿಗೆ ಸಹಕಾರಿಯಾಗಲಿದ್ದಾಳೆ ಸ್ವರ್ಣ: ಪಶ್ವಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಹುಟ್ಟಿ ಹರಿಯುವ ಸ್ವರ್ಣ ನದಿ ಕೃಷಿಕನ ಪಾಲಿಗೆ ಅಷ್ಟೊಂದು ಪ್ರಯೋಜನವಾಗದೇ ಸಮುದ್ರಪಾಲಾಗುತ್ತಿದೆ. ಏತ ನೀರಾವರಿ ಯೋಜನೆ ಸಂಪೂರ್ಣ ಕಾರ್ಯಗತಗೊಂಡಾಗ ಮರ್ಣೆ, ಹಿರ್ಗಾನ, ಕುಕ್ಕುಂದೂರು, ಎರ್ಲಪ್ಪಾಡಿ, ಕಾರ್ಕಳ ಕಸಬಾ ಮೊದಲಾದೆಡೆಗಳಲ್ಲಿ ನೀರು ಸರಬರಾಜು ಮಾಡಲು ಸಾಧ್ಯ. ಆ ಮೂಲಕ ಕೃಷಿ ಕಾಯಕಗಳಿಗೆ ನೀರು ಲಭ್ಯವಾಗುವುದಲ್ಲದೆ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲಿದೆ.

    ಸ್ವರ್ಣ ನದಿ ಹರಿದು ಹೋಗುವ ಪ್ರದೇಶದಲ್ಲಿ ಹೂಳು ತುಂಬಿದೆ. ಹೂಳೆತ್ತುವ ಕಾರ್ಯ ನಡೆಯಬೇಕು. ಆ ಮೂಲಕ ಸ್ವರ್ಣ ನದಿಯಲ್ಲಿ ನೀರು ಶೇಖರಣೆಗೆ ಅವಕಾಶ ಹೆಚ್ಚಾಗಲಿದೆ. ಎಣ್ಣೆಹೊಳೆ ಏತ ನೀರಾವರಿ ಯೋಜನೆಯು ಕೃಷಿಕರನ್ನು ಮುಂದಿಟ್ಟುಕೊಂಡು ಜಾರಿಗೆ ತಂದಿರುವ ಯೋಜನೆಯಾಗಿದ್ದರೂ, ನದಿಯ ನೀರನ್ನು ಕೃಷಿಯ ಜತೆಗೆ ಕುಡಿಯಲು ಸದ್ಬಳಕೆ ಮಾಡುವುದರಿಂದ ನಾಗರಿಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗಲಿದೆ.
    ಹರೀಶ್ ನಾಯಕ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts