More

    ರೈಲಿನಲ್ಲಿ ಗುಜರಾತ್‌ಗೆ ರಬ್ಬರ್ ಸಾಗಾಟ, ದ.ಕ. ಜಿಲ್ಲೆಯ ಬೆಳೆಗಾರರಿಗೆ ಅನುಕೂಲವಾಗುವ ನಿರೀಕ್ಷೆ

    ಬೆಳ್ತಂಗಡಿ: ಲಾಲ ರಬ್ಬರ್ ಬೆಳೆಗಾರರ ಗೋದಾಮಿನಿಂದ ಗುಜರಾತ್‌ಗೆ ಕೊಂಕಣ್ ರೈಲ್ವೆ ಮೂಲಕ 16 ಟನ್ ರಬ್ಬರ್ ಸಾಗಾಟಕ್ಕೆ ಕೊಂಕಣ್ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಮಂಗಳವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಕೃಷಿ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ದೂರದ ಮಾರುಕಟ್ಟೆಗೆ ಸಾಗಾಟ ಮಾಡಲು ರೈತರಿಗೆ ಪ್ರೋತ್ಸಾಹ ನೀಡಬೇಕೆಂಬ ಪ್ರಧಾನ ಮಂತ್ರಿಯವರ ಸೂಚನೆಯಂತೆ ಕೊಂಕಣ್ ರೈಲ್ವೆ ಕಿಸಾನ್ ಪಾರ್ಸೆಲ್ ಟ್ರೈನ್ ಪ್ರಾರಂಭಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಎರಡು ಬಾರಿ ಕೃಷ್ಯುತ್ಪನ್ನಗಳನ್ನು ಸಾಗಿಸಿದ್ದು, ರೈತರಿಗೆ ವೆಚ್ಚ ಉಳಿತಾಯವಾಗಿದೆ. ರಬ್ಬರ್, ಅಡಕೆ, ತೆಂಗು, ಕಾಳುಮೆಣಸು ಮುಂತಾದ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ರೈಲು ಅನುಕೂಲಕರ. ಅ.3ರಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪುತ್ತೂರು ಎಪಿಎಂಸಿ ಆವರಣದಲ್ಲಿ ಪಾರ್ಸೆಲ್ ಟ್ರೈನ್‌ಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಳಿಕ ನಿರಂತರವಾಗಿ ಕೃಷಿ ಉತ್ಪನ್ನ ಸಾಗಾಟ ಮಾಡಲಾಗುತ್ತದೆ ಎಂದರು.

    ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಭಿಡೆ, ನಿರ್ದೇಶಕರಾದ ಜಯಶ್ರೀ ಡಿ.ಎಂ, ಅನಂತ ಭಟ್ ಎಂ, ಗ್ರೇಸಿಯನ್ ವೇಗಸ್, ಇ.ಸುಂದರ ಗೌಡ, ಎಚ್.ಪದ್ಮ ಗೌಡ, ಕೆ.ಜೆ.ಅಗಸ್ಟೀನ್, ಪಿ.ವಿ.ಅಬ್ರಹಾಂ, ಶಶಿಧರ ಡೋಂಗ್ರೆ, ಕೊಂಕಣ್ ರೈಲ್ವೆ ರೀಜನಲ್ ಟ್ರಾಫಿಕ್ ಮ್ಯಾನೇಜರ್ ವಿನಯ್ ಕುಮಾರ್ ಉಪಸ್ಥಿತರಿದ್ದರು.

    1985ರಲ್ಲಿ ನಮ್ಮ ಸೊಸೈಟಿ ಪ್ರಾರಂಭವಾಗಿದೆ. ಪ್ರಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ರಬ್ಬರ್ ಖರೀದಿ ಮಾಡಲು ನಾವು ಪ್ರಾರಂಭಿಸಿದ್ದು, ರಬ್ಬರ್ ಖರೀದಿಯಲ್ಲಿ ಏಷ್ಯಾದಲ್ಲೇ ನಂ.1 ಸ್ಥಾನದಲ್ಲಿದೆ. ಈಗ ರಬ್ಬರ್ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಸಾಗಿಸಲು ಕೊಂಕಣ್ ರೈಲ್ವೆ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾಗಾಟ ವೆಚ್ಚ ಕಡಿಮೆಯಾಗುವುದರಿಂದ ಲಾಭವನ್ನು ರೈತರಿಗೆ ನೀಡಲಾಗುವುದು.
    – ಶ್ರೀಧರ್ ಭಿಡೆ, ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts