More

    ರೈತರ ನೆರವಿಗೆ ಕೃಷಿ ಆಂಬುಲೆನ್ಸ್

    ಹುಬ್ಬಳ್ಳಿ: ತುರ್ತು ಆರೋಗ್ಯ ಸಮಯದಲ್ಲಿ ಕಾರ್ಯನಿರ್ವಹಿಸುವ ‘ಆರೋಗ್ಯ ಕವಚ (108)’ ಮಾದರಿಯಲ್ಲಿ ಕೃಷಿಗೆ ಸಂಬಂಧಿಸಿದ ಅಗತ್ಯ ಸೇವೆಗಳನ್ನು ಪೂರೈಸುವುದಕ್ಕಾಗಿ ‘ಕೃಷಿ ಸಂಜೀವಿನಿ (155313)’ ಕಾರ್ಯಾರಂಭ ಮಾಡಿದೆ.

    ಮಣ್ಣು ಪರೀಕ್ಷೆ, ಕೀಟ ಬಾಧೆಗಳ ನಿವಾರಣೆಗೆ ಸಿಂಪಡಿಸುವ ಔಷಧ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ನೀಡುವ ಉದ್ದೇಶದಿಂದ ಕೃಷಿ ಇಲಾಖೆ, ರಾಜ್ಯಾದ್ಯಂತ ಕೃಷಿ ಸಂಜೀವಿನಿ ಯೋಜನೆಯಡಿ ‘ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ’ ವಾಹನಗಳನ್ನು ಪ್ರಾರಂಭಿಸಿದೆ.

    ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಕಳೆದ ಭಾನುವಾರದಿಂದ ಧಾರವಾಡ ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿದೆ. ಈ ಮೊದಲು ಮಣ್ಣು ಪರೀಕ್ಷೆ ಮಾಡಬೇಕಾದರೆ ರೈತರು ತಮ್ಮ ಹೊಲದ ಮಣ್ಣನ್ನು ತೆಗೆದುಕೊಂಡು ಕೃಷಿ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದೇ ಕಾರಣಕ್ಕಾಗಿ ಅನೇಕ ರೈತರು ಪ್ರತಿ ಬಿತ್ತನೆ ಸಮಯದಲ್ಲಿ ಮಣ್ಣು ಪರೀಕ್ಷೆ ಮಾಡಿಸದೆ, ಬಿತ್ತನೆ ಮಾಡುತ್ತಿದ್ದರು. ಹೊಲದಲ್ಲಿ ಯಾವ ಲವಣಾಂಶ ಇದೆ ಅಥವಾ ಯಾವುದು ಇಲ್ಲ ಎಂಬುದನ್ನು ಅರಿಯದೆ, ಮನಬಂದಂತೆ ರಸಗೊಬ್ಬರಗಳನ್ನು ಹಾಕುತ್ತಿದ್ದರು. ಇದು ಮಣ್ಣಿನ ಫಲವತ್ತತೆ ಜತೆಗೆ ಬೆಳೆಗಳ ಮೇಲೂ ಅಡ್ಡಪರಿಣಾಮ ಬೀರುತ್ತಿತ್ತು.

    ಇದೀಗ ಪರೀಕ್ಷೆಗೆ ಮಣ್ಣನ್ನು ದೂರದ ಕೃಷಿ ಇಲಾಖೆ ಕಚೇರಿ ಅಥವಾ ಕೃಷಿ ವಿವಿಗೆ ತೆಗೆದುಕೊಂಡು ಹೋಗಬೇಕಿಲ್ಲ. 155313 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ಬಂದು, ಮಣ್ಣು ಪರೀಕ್ಷೆ ಮಾಡುತ್ತಾರೆ. ಇದಕ್ಕೆ ಯಾವುದೇ ವೆಚ್ಚ ನೀಡುವ ಅಗತ್ಯವೂ ಇಲ್ಲ. ಕಡಿಮೆ ಸಮಯದಲ್ಲಿಯೇ ಮಣ್ಣಿನ ಫಲವತ್ತತೆ, ಕೊರತೆ ಇರುವ ಲವಣಾಂಶಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಮಾಹಿತಿಯನ್ನಾಧರಿಸಿ, ಅಗತ್ಯ ಇರುವ ರಸಗೊಬ್ಬರಗಳನ್ನು ಹಾಕಿದರೆ ಸಾಕು. ಇದರಿಂದ ರೈತರಿಗೆ ಸಾಕಷ್ಟು ಖರ್ಚು ಹಾಗೂ ಸಮಯ ಉಳಿತಾಯವಾಗುತ್ತದೆ. ಕೃಷಿ ಭೂಮಿಯಲ್ಲಿ ಫಲವತ್ತತೆ ಕಾಪಾಡಿಕೊಳ್ಳಲೂ ಅನುಕೂಲವಾಗುತ್ತದೆ.

    ಬೆಳೆಗಳಲ್ಲಿ ಕೀಟಬಾಧೆ ಕಾಣಿಸಿದರೂ ಈ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಕೃಷಿ ಅಧಿಕಾರಿಗಳು ಬಂದು, ಕೀಟಗಳನ್ನು ಪರೀಕ್ಷಿಸುತ್ತಾರೆ. ಸಿಂಪಡಿಸಬಹುದಾದ ರಾಸಾಯನಿಕದ ಬಗ್ಗೆ ವಿವರ ನೀಡುತ್ತಾರೆ.

    ಪ್ರಯೋಗಾಲಯ: ಕೃಷಿ ಇಲಾಖೆಯ ಪ್ರಯೋಗಾಲಯದಲ್ಲಿ ಇರುವ ಉಪಕರಣ, ರಾಸಾಯನಿಕಗಳು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನದಲ್ಲಿ ಇರುತ್ತವೆ. ಕೃಷಿ ಡಿಪ್ಲೊಮಾ ಪೂರೈಸಿರುವ ಒಬ್ಬ ತಾಂತ್ರಿಕ ಸಿಬ್ಬಂದಿ ಈ ವಾಹನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಣ್ಣು ಪರೀಕ್ಷೆ, ರಸಗೊಬ್ಬರ ತ್ವರಿತ ಪರೀಕ್ಷೆ, ಕೀಟ ರೋಗ, ಕಳೆ ಬಾಧೆ ಗುರುತಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯ ಮಾಡುತ್ತಾರೆ.

    ಸಸ್ಯ ಆರೋಗ್ಯ ಚಿಕಿತ್ಸಾಲಯ

    108 ಸಂಖ್ಯೆಗೆ ಕರೆ ಮಾಡಿದರೆ ವೈದ್ಯಕೀಯ ಸೇವೆಯ ಅಗತ್ಯ ಇರುವವರ ಮನೆ ಬಾಗಿಲಿಗೆ ಆಂಬುಲೆನ್ಸ್ ಬರುತ್ತದೆ. ಅದೇ ರೀತಿ, 155313 ಸಂಖ್ಯೆಗೆ ಕರೆ ಮಾಡಿದರೆ ಕೃಷಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸಲು ಕೃಷಿ ಸಂಜೀವಿನಿಯ ‘ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ’ ವಾಹನ ರೈತರ ಹೊಲಗಳಿಗೆ ಬರುತ್ತದೆ.

    ಜಿಲ್ಲೆಗೆ ಒಂದರಂತೆ ‘ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ’ ವಾಹನವನ್ನು ಸರ್ಕಾರ ನೀಡಿದೆ. ಪ್ರತಿ ವಿಧಾನಸಭೆಗೆ ಒಂದರಂತೆ ಈ ವಾಹನ ನೀಡಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಇತ್ತೀಚೆಗೆ ಧಾರವಾಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿ ಹೋಬಳಿಗೆ ಒಂದು ವಾಹನ ನೀಡುವ ಬಗ್ಗೆ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ.
    | ರಾಜಶೇಖರ ಬಿಜಾಪುರ ಜಂಟಿ ಕೃಷಿ ನಿರ್ದೇಶಕರು, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts