More

    ಮತ್ತೆ ಕರೊನಾ ತಾಂಡವ: ಚೀನಾದಲ್ಲಿ ಶೇ. 60 ಜನರಿಗೆ ಸೋಂಕು, 10 ಲಕ್ಷ ಸಾವು ಸಾಧ್ಯತೆ..

    ಬೀಜಿಂಗ್: ಚೀನಾದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದ ನಂತರ ಕರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳು, ಸ್ಮಶಾನಗಳು ತುಂಬಿತುಳುಕುತ್ತಿವೆ. ಮುಂದಿನ 3 ತಿಂಗಳಲ್ಲಿ ಚೀನಾದ ಶೇ. 60ಕ್ಕಿಂತ ಹೆಚ್ಚು ಮತ್ತು ವಿಶ್ವದ ಜಸಂಖ್ಯೆಯ ಶೇ.10ರಷ್ಟು ಜನರು ಸೋಂಕಿಗೆ ಒಳಗಾಗುವ ಮತ್ತು ಲಕ್ಷಾಂತರ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಪೀಗಲ್ -ಡಿಂಗ್ ಎಚ್ಚರಿಕೆ ನೀಡಿದ್ದಾರೆ.

    ಚಿಕಿತ್ಸಾಲಯಗಳ ಮುಂದೆ ಕ್ಯೂ: ರಾಜಧಾನಿ ಬೀಜಿಂಗ್​ನಲ್ಲಿ ಸೋಂಕಿತ ಜನರು ಔಷಧಕ್ಕಾಗಿ ಪರದಾಡುತ್ತಿದ್ದಾರೆ. ಚಿಕಿತ್ಸಾಲಯ ಗಳ ಮುಂದೆ ಜನರು ದೀರ್ಘ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿವೆ. ಆಂಬುಲೆನ್ಸ್​ಗೆ ಕರೆಗಳು ಹೆಚ್ಚಾಗುತ್ತಿವೆ.

    ಚಿತಾಗಾರದಲ್ಲಿ ಮೃತದೇಹಗಳ ರಾಶಿ: ಕೋವಿಡ್ -19 ರೋಗಿಗಳಿಗೆ ಬೀಜಿಂಗ್​ನಲ್ಲಿ ಗೊತ್ತುಪಡಿಸಿದ ಸ್ಮಶಾನವು ಮೃತದೇಹಗಳಿಂದ ತುಂಬಿ ಹೋಗಿದೆ. ಎರಿಕ್ ಪೀಗಲ್ -ಡಿಂಗ್ ಪ್ರಕಾರ, ‘ಚೀನಾದ ಕಮ್ಯುನಿಸ್ಟ್ ಪಕ್ಷವು ಸೋಂಕಿಗೆ ಒಳಗಾಗುವವರು ಒಳಗಾಗಲಿ, ಸಾಯುವವರು ಸಾಯಲಿ, ಆರಂಭಿಕ ಸೋಂಕು, ಆರಂಭಿಕ ಸಾವು’ ಎಂಬ ಧೋರಣೆ ಅನುಸರಿಸುತ್ತಿದೆ.

    ‘ಕೋವಿಡ್ ಪುನರಾರಂಭವಾದಾಗಿನಿಂದ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಮೃತದೇಹ ಸುಡುವ ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ ಸುಮಾರು 200 ಮೃತದೇಹಗಳು ಬರುತ್ತಿವೆ. ಹೆಚ್ಚಿದ ಕೆಲಸದ ಹೊರೆಯಿಂದ ಸುಸ್ತಾಗಿದ್ದೇವೆ. ಸಿಬ್ಬಂದಿಯಲ್ಲಿ ಕೆಲವರು ಸೋಂಕಿಗೆ ಒಳಗಾಗಿದ್ದಾರೆ’ ಎಂದು ಬೀಜಿಂಗ್​ನ ಡೊಂಗ್ ಜಿಯಾವೊ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತಿಳಿಸಿದ್ದಾರೆ.

    ಬೀಜಿಂಗ್​ನಲ್ಲಿ ಅಂತ್ಯಕ್ರಿಯೆಗಳು ತಡೆರಹಿತವಾಗಿ ನಡೆಯುತ್ತಿವೆ. ಶೈತ್ಯೀಕರಿಸಿದ ಕಂಟೇನರ್​ಗಳ ಅಗತ್ಯವಿದೆ. 24/7 ಅಂತ್ಯಕ್ರಿಯೆಗಳು ನಡೆಯುತ್ತಿವೆ. 2 ಸಾವಿರ ಶವಗಳು ಶವಸಂಸ್ಕಾರಕ್ಕೆ ಕಾಯುತ್ತಿವೆ ಎಂದು ಎರಿಕ್ ಪೀಗಲ್ ಹೇಳಿದ್ದಾರೆ. ಈ ಮಧ್ಯೆ, ಚಿತಾಗಾರದ ಹೊರಗೆ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

    ಡೊಂಗ್ ಜಿಯಾವೊ ಸ್ಮಶಾನಕ್ಕೆ ಸೋಮವಾರ ಪ್ರವೇಶಿಸಿದ್ದ ಒಂದು ಡಜನ್ ಕಪು್ಪ ಮಿನಿ ವ್ಯಾನ್​ಗಳು ಮೃತದೇಹಗಳನ್ನು ಕೆಳಗೆ ಬಿಸಾಡಿದ್ದವು. ಈ ಬಗ್ಗೆ ವರದಿ ಮಾಡಲು ಹೋಗಿದ್ದ ಪತ್ರಕರ್ತರನ್ನು ಗಾರ್ಡ್​ಗಳು ಚಿತಾಗಾರದ ರ್ಪಾಂಗ್ ಲಾಟ್ ಹಿಂಭಾಗಕ್ಕೆ ತಳ್ಳಿದ್ದರು. ವ್ಯಾನ್​ಗಳಿಗೆ ಶವಸಂಸ್ಕಾರದ ಭಾಗವೆಂದು ಸೂಚಿಸಲು ರಿಬ್ಬನ್​ಗಳಿಂದ ಅಲಂಕರಿಸಲಾಗಿತ್ತು.

    ಬೀಜಿಂಗ್​ನಲ್ಲಿ ಶೇ. 70: ಬೀಜಿಂಗ್​ನ ಶೇ. 70 ಜನರು ವೈರಸ್ ಸೋಂಕಿನಿಂದ ಬಳಲುತ್ತಿದ್ದು, ಲಕ್ಷಾಂತರ ಜನರನ್ನು ಮನೆಯಲ್ಲಿ ಬಂದಿಯಾಗುವಂತೆ ಮಾಡಿದೆ. ಚೀನಾದ ನಗರಗಳು ಓಮಿಕ್ರಾನ್ ತಳಿಗಳಾದ ಬಿಎ.5.2 ಮತ್ತು ಬಿಎಫ್.7ನಿಂದ ಹಾನಿಗೊಳಗಾಗಿದ್ದು, ಈ ತಳಿಗಳು ಕಾಡ್ಗಿಚ್ಚಿನಂತೆ ವೇಗವಾಗಿ ಹರಡುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

    ಜಾಗತಿಕ ಆತಂಕವೆಂದ ಅಮೆರಿಕ: ಚೀನಾದಲ್ಲಿ ಈಗ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್ ಹೊಸ ರೂಪಾಂತರಿಗಳನ್ನು ಸೃಷ್ಟಿಸಬಹುದು ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಚೀನಾದಲ್ಲಿ ಏಕಾಏಕಿ ಹರಡುತ್ತಿರುವ ವೈರಸ್ ಜಗತ್ತಿನ ಯಾವುದೇ ಭಾಗಕ್ಕೆ ವ್ಯಾಪಕವಾಗಿ ಹರಡುವ ಮತ್ತು ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ. ಅದನ್ನು ನಿಗ್ರಹಿಸುವ ಅಗತ್ಯವಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೖೆಸ್ ತಿಳಿಸಿದ್ದಾರೆ. ಪ್ರೖೆಸ್ ಹೇಳಿಕೆಗೆ ವಾಷಿಂಗ್ಟನ್​ನಲ್ಲಿರುವ ಚೀನಿ ರಾಯಭಾರ ಕಚೇರಿಯ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ. ಹೊಸ ವರ್ಷದ ಆರಂಭದಲ್ಲಿ ಅಮೆರಿಕವು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬಿಂಕನ್ ನೇತೃತ್ವದ ನಿಯೋಗವನ್ನು ಚೀನಾಕ್ಕೆ ಕಳುಹಿಸುತ್ತಿದೆ. ಅಷ್ಟರಲ್ಲಿ ಚೀನಾದ ಪ್ರಸ್ತುತ ಕೋವಿಡ್ ಹೆಚ್ಚಳವು ನಿಯಂತ್ರಣಕ್ಕೆ ಬರಬಹುದೆಂದು ನೆಡ್ ಪ್ರೖೆಸ್ ಆಶಿಸಿದ್ದಾರೆ. ಚೀನಾಕ್ಕಾಗುವ ಯಾವುದೇ ಹೊಡೆತವು ಜಾಗತಿಕ ಆರ್ಥಿಕತೆಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಚೀನಾದ ಜಿಡಿಪಿ ಗಾತ್ರ ಗಮನಿಸಿದರೆ ವೈರಸ್ ಹರಡುತ್ತಿರುವ ಸಂಖ್ಯೆಯು ಪ್ರಪಂಚದ ಉಳಿದ ಭಾಗಗಳಿಗೆ ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

    ಉಸಿರಾಟ ವೈಫಲ್ಯ ಮಾತ್ರ ಲೆಕ್ಕಕ್ಕೆ: ಉಸಿರಾಟ ವೈಫಲ್ಯದ ಕೋವಿಡ್-19 ಸಾವುಗಳನ್ನು ಮಾತ್ರ ಅಧಿಕೃತ ಸಾವಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಚೀನಾ ತಿಳಿಸಿದೆ. ಒಮಿಕ್ರಾನ್ ತಳಿಯ ಬಿಎಫ್. 7 ರೂಪಾಂತರದಿಂದ ಬೀಜಿಂಗ್​ನಲ್ಲಿ ಸೋಮವಾರ ಇಬ್ಬರು, ಮಂಗಳವಾರ ಐವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಕೋವಿಡ್ ನಿರ್ಬಂಧಗಳನ್ನು ವಾಪಸ್ ತೆಗೆದುಕೊಂಡ ನಂತರ ಚೀನಾ ಸರ್ಕಾರ ಪ್ರಕಟಿಸಿರುವ ಮೊದಲ ಅಧಿಕೃತ ಸಾವಿನ ಸಂಖ್ಯೆ ಇದಾಗಿದೆ. ಕರೊನಾ ಸೋಂಕಿನಿಂದ ಅಧಿಕ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಚಿತಾಗಾರದಲ್ಲಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂಬ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರೀಯ ಅಯೋಗ ಈ ಸ್ಪಷ್ಟನೆ ನೀಡಿದೆ.

    ಎಚ್ಚೆತ್ತ ಭಾರತ ಸರ್ಕಾರ

    ನವದೆಹಲಿ: ಚೀನಾದಲ್ಲಿನ ಕರೊನಾ ಆರ್ಭಟ ಹಿನ್ನೆಲೆಯಲ್ಲಿ ಐಘಖಅಇಣಎ ನೆಟ್​ವರ್ಕ್ ಮೂಲಕ ಕರೊನಾ ವೈರಸ್ ರೂಪಾಂತರಗಳನ್ನು ಪತ್ತೆ ಹಚ್ಚಲು ಪಾಸಿಟಿವ್ ಪ್ರಕರಣಗಳ ಮಾದರಿಯ ಜಿನೋಮ್ ಸೀಕ್ವೆನಿಂಗ್ (ಅನುಕ್ರಮ) ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ. ಕರೊನಾ ವೈರಸ್ ಹೊಸ ರೂಪಾಂತರಗಳನ್ನು ಗುರುತಿಸಲು ಮತ್ತು ಟ್ರಾ್ಯಕ್ ಮಾಡಲು ಜೀನೋಮ್ ಸೀಕ್ವೆನಿಂಗ್ ನಿರ್ಣಾಯಕವಾಗಿದೆ. ಅಮೆರಿಕ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕರೊನಾ ವೈರಸ್ ಸೋಂಕಿನ ಏಕಾಏಕಿ ಹೆಚ್ಚಳದ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಜೀನೋಮ್ ಸೀಕ್ವೆನಿಂಗ್ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.

    ಮೂರು ಮಾರಕ ಅಲೆಗಳು: ಕರೊನಾ ಸಾಂಕ್ರಾಮಿಕ ಜನವರಿ ಮತ್ತು ಫೆಬ್ರವರಿಯಲ್ಲಿ ಉತ್ತುಂಗಕ್ಕೇರುತ್ತದೆ. ಆದಾಗ್ಯೂ ಕೋವಿಡ್ ಸೋಂಕುಗಳ ಸಂಖ್ಯೆ ಅಲ್ಪಾವಧಿಯಲ್ಲಿ ಹೆಚ್ಚಾಗುತ್ತಲೇ ಇರುತ್ತದೆ ಎಂದು ಚೀನಾದ ಪ್ರಮುಖ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ವು ಜುನ್ಯು ತಿಳಿಸಿದ್ದಾರೆ. ಈಗಿನ ಸೋಂಕು ಏರಿಕೆಯ ಮಟ್ಟವು ಜನವರಿ ಮಧ್ಯಭಾಗದವರೆಗೆ ಇದೇ ರೀತಿ ಇರುತ್ತದೆ. 2ನೇ ಅಲೆ ಜನವರಿ 21ರಿಂದ ಶುರುವಾಗುತ್ತದೆ. ಜನರು ರಜೆಯ ನಂತರ ಕೆಲಸಕ್ಕೆ ಮರಳುವುದರಿಂದ ಫೆಬ್ರವರಿ ಅಂತ್ಯದಿಂದ ಮಾರ್ಚ್ ಮಧ್ಯದಲ್ಲಿ ಸೋಂಕುಗಳ ಮೂರನೇ ಉಲ್ಬಣ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

    ನಿಂಬೆಹಣ್ಣಿಗೆ ಭಾರಿ ಡಿಮಾಂಡು: ಕರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರಿ ಬೇಡಿಕೆ ಉಂಟಾಗಿದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಮಟ್ಟ ಹೆಚ್ಚಿಸುತ್ತದೆ. ಹಾಗಾಗಿ ನಾಲ್ಕೈದು ದಿನಗಳಿಂದ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಜನರು ನಿಂಬೆಹಣ್ಣಿಗೆ ಮುಗಿಬಿದ್ದಿದ್ದಾರೆ. ಒಂದು ನಿಂಬೆಹಣ್ಣು 12 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ರೈತ ಲಿಯು ಯಾಂಜಿಂಗ್ ಹೇಳಿದ್ದಾರೆ. ಕಿತ್ತಳೆ ಮತ್ತು ಪೇರಳೆ ಹಣ್ಣಿಗೂ ಡಿಮಾಂಡ್ ಉಂಟಾಗಿದ್ದು, ಬೆಲೆ ಗಗನಕ್ಕೇರಿದೆ. ಈ ಹಣ್ಣುಗಳ ಮಾರಾಟದಲ್ಲಿ ಶೇ. 900ರಷ್ಟು ಜಿಗಿತ ಕಂಡಿದೆ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಕಳೆದ ತಿಂಗಳು ಸಾರಿಗೆ ಮೇಲಿನ ನಿರ್ಬಂಧದಿಂದಾಗಿ ಟನ್​ಗಟ್ಟಲೆ ತಾಜಾ ಹಣ್ಣುಗಳನ್ನು ಮಾರುಕಟ್ಟೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗದೆ ನಷ್ಟವುಂಟಾಗಿ ರೈತರು ಆತಂಕಕ್ಕೊಳಗಾಗಿದ್ದರು.

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಎನ್‌ಪಿಎಸ್ ವಿರೋಧಿ ಹೋರಾಟಕ್ಕೆ ಭಾರಿ ಹಿನ್ನಡೆ; ಇಲ್ಲಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts