More

    ಅನ್​ಲಾಕ್​ ಬಳಿಕ ಈಗ ಸಿನಿಮಾಗಳ ಮರುಬಿಡುಗಡೆ ಪರ್ವ!

    ಬೆಂಗಳೂರು: ಎಲ್ಲ ಸರಿ, ಜನ ಚಿತ್ರಮಂದಿರದತ್ತ ಬರುತ್ತಾರಾ? ಇಂಥದ್ದೊಂದು ಪ್ರಶ್ನೆ ಬರೀ ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಕಾಡುತ್ತಿದೆ. ಸರಿ, ಜನ ಬರುತ್ತಾರೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಅದನ್ನು ತಿಳಿದುಕೊಳ್ಳುವುದಕ್ಕೆಂದೇ ಚಿತ್ರಮಂದಿರದವರೆಲ್ಲ ಮೊದಲಿಗೆ ಒಂದಿಷ್ಟು ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಐದಾರು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿವೆ.

    ಕೇಂದ್ರ ಸರ್ಕಾರ ಚಿತ್ರಪ್ರದರ್ಶನಕ್ಕೆ ಅನುಮತಿ ಕೊಡುತ್ತಿದ್ದಂತೆಯೇ ಮೊದಲು ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಪ್ರಾಶಸ್ಱ ಕೊಡಬೇಕು ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೊದಲೇ ತೀರ್ಮಾನವಾಗಿತ್ತು. ಕಾರಣ, ಮಾರ್ಚ್ 14ರಂದು ಲಾಕ್​ಡೌನ್ ಘೋಷಣೆಯಾಗುವುದಕ್ಕಿಂತ ಮುನ್ನ ‘ದಿಯಾ’, ‘ಲವ್ ಮಾಕ್​ಟೇಲ್’, ‘ಜಂಟಲ್​ವ್ಯಾನ್’, ‘ಶಿವಾಜಿ ಸುರತ್ಕಲ್’ ಮುಂತಾದ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತಿದ್ದವು.ಇನ್ನು ಮಾರ್ಚ್ 13ರಂದು ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರ ಬಿಡುಗಡೆಯಾಗಿತ್ತು. ಲಾಕ್​ಡೌನ್​ನಿಂದಾಗಿ ಈ ಎಲ್ಲ ಚಿತ್ರಗಳ ಪ್ರದರ್ಶನಕ್ಕೆ ನಿಂತಿತ್ತು. ಅದೇ ಕಾರಣಕ್ಕೆ ಲಾಕ್​ಡೌನ್​ಗೂ ಮುನ್ನ ಬಿಡುಗಡೆಯಾದ ಚಿತ್ರಗಳಿಗೆ ಮೊದಲ ಪ್ರಾಶಸ್ಱ ಎಂದು ತೀರ್ವನವಾಗಿತ್ತು. ಅದರಂತೆ ಇದೀಗ ‘ಲವ್ ಮಾಕ್​ಟೇಲ್’, ‘ದಿಯಾ’, ‘ಶಿವಾಜಿ ಸುರತ್ಕಲ್’, ‘ಶಿವಾರ್ಜುನ’, ‘ಜಂಟಲ್​ವ್ಯಾನ್’, ‘ದಮಯಂತಿ’ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ‘ಶಿವಾಜಿ ಸುರತ್ಕಲ್’, ‘ಲವ್ ಮಾಕ್​ಟೇಲ್’, ‘ಶಿವಾರ್ಜುನ’ ಚಿತ್ರಗಳು ಅಕ್ಟೋಬರ್ 16ರ ಶುಕ್ರವಾರದಂದು ಬಿಡುಗಡೆಯಾದರೆ, ಮಿಕ್ಕ ಚಿತ್ರಗಳು ದಸರಾ ಹಬ್ಬದ ಕೊಡುಗೆಯಾಗಿ ಅದರ ಮುಂದಿನ ವಾರ ಅಂದರೆ ಅ.23ರಂದು ಬಿಡುಗಡೆಯಾಗಲಿವೆ.

    ಮರುಬಿಡುಗಡೆ ಆಗುತ್ತಿರುವ ಚಿತ್ರಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ. ಇದು ಬರೀ ಕನ್ನಡದ ಚಿತ್ರರಂಗದ ಮಾತಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅದರ ಜತೆಗೆ, ಓವರ್ ದಿ ಟಾಪ್ (ಓಟಿಟಿ)ನಲ್ಲಿ ಮೊದಲು ಬಿಡುಗಡೆಯಾದ ಚಿತ್ರಗಳನ್ನು ಸಹ ಬಿಡುಗಡೆ ಮಾಡುವ ಪ್ರಯತ್ನಗಳಾಗುತ್ತಿವೆ. ಇಷಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಅಭಿನಯದ ಹಿಂದಿ ಚಿತ್ರ ‘ಖಾಲಿ ಪೀಲಿ’ ಮತ್ತು ವಿಜಯ್ ಸೇತುಪತಿ ಮತ್ತು ಐಶ್ವರ್ಯಾ ರಾಜೇಶ್ ಅಭಿನಯದ ತಮಿಳು ಚಿತ್ರ ‘ಕಾಪೇ ರಣಸಂಗಂ’ಚಿತ್ರಗಳನ್ನು ಅ. 16ರಂದು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ.

    ನಮ್ಮ ನ್ಯಾಯಯುತ ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕಿವೆ. ಆದ್ದರಿಂದ, ಸರ್ಕಾರ ಅನುಮತಿ ನೀಡಿದರೂ ತಕ್ಷಣ ಚಿತ್ರ ಪ್ರದರ್ಶನ ಆರಂಭಿಸಲು ಸಾಧ್ಯವಾಗದು.

    | ಆರ್.ಆರ್. ಓದುಗೌಡರ, ಚೇರ್ಮನ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ

    ಪಿಪಿಇ ಕಿಟ್ ಧರಿಸಬೇಕು: ಚಿತ್ರಮಂದಿರದ ಗೇಟ್ ಕೀಪರ್ ಪಿಪಿಇ ಕಿಟ್ ಧರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಸದ್ಯ ಪರಿಸ್ಥಿತಿ ಹೇಗಿದೆ ಎಂದರೆ, ಪಿಪಿಇ ಕಿಟ್ ಧರಿಸಿದವರನ್ನು ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಎಂದೇ ಜನರು ಭಾವಿಸಿ, ಕರೊನಾ ಭಯದಿಂದ ದೂರ ಸರಿಯುತ್ತಾರೆ. ಹೀಗಿರುವಾಗ, ಸಿನಿಮಾ ಮಂದಿರದಲ್ಲಿ ಪಿಪಿಇ ಕಿಟ್ ಕಂಡರೆ ಪ್ರೇಕ್ಷಕರು ಹೇಗೆ ವರ್ತಿಸಬಹುದು ಎಂಬ ಪ್ರಶ್ನೆ ಇದೆ.

    ಉತ್ತರ ಕರ್ನಾಟಕದಲ್ಲಿ ಬಿಡುಗಡೆ ಕಗ್ಗಂಟು: ಚಲನಚಿತ್ರ ಪ್ರದರ್ಶನವನ್ನು ಪುನಃ ಆರಂಭಿಸಲು ಅನುಮತಿಯೊಂದೇ ಸಾಲದು; ಅನುಕೂಲತೆಗಳೂ ಬೇಕು ಎನ್ನುವುದು 650 ಸದಸ್ಯರನ್ನು ಹೊಂದಿರುವ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಪ್ರತಿಪಾದನೆ. ‘ಈ ಹಿಂದೆ ಐದು ಸಾವಿರ ಚದರ ಅಡಿ ವಿಸ್ತೀರ್ಣದ ಸಿನಿಮಾ ಮಂದಿರಕ್ಕೆ, ಐದು ವರ್ಷಗಳಿಗೆ ಐದು ಸಾವಿರ ರೂ. ಲೈಸೆನ್ಸ್ ಶುಲ್ಕ ಇತ್ತು. 2018ರಲ್ಲಿ ಸರ್ಕಾರ ಅದನ್ನು 1.25 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ಶುಲ್ಕ ಇಳಿಸುವಂತೆ ಕಳೆದ ಜನವರಿಯಲ್ಲೇ ಮನವಿಪತ್ರ ಸಲ್ಲಿಸಿದ್ದೇವೆ. ಅಷ್ಟರಲ್ಲಿ ಲಾಕ್​ಡೌನ್ ಘೊಷಣೆಯಾಯಿತು. ಈಗ ಅನೇಕ ಥಿಯೇಟರ್​ಗಳ ಲೈಸೆನ್ಸ್ ನವೀಕರಣಕ್ಕೆ ಬಂದಿದೆ. ವಿಷಯ ಇತ್ಯರ್ಥವಾಗದೆ ಲಕ್ಷಗಟ್ಟಲೆ ಶುಲ್ಕ ಕಟ್ಟಲು ನಾವು ಸಿದ್ಧರಿಲ್ಲ’ ಎನ್ನುತ್ತಾರೆ ಅಧ್ಯಕ್ಷ ಆರ್.ಆರ್. ಓದುಗೌಡರ್. ಬರೀ ಏಕಪರದೆಯ ಚಿತ್ರಮಂದಿರಗಳಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಪ್ರದರ್ಶನ ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಷರತ್ತುಗಳನ್ನು ಪಾಲಿಸುವುದು ಕಷ್ಟ. ಅರ್ಧ ಚಿತ್ರಮಂದಿರ ಭರ್ತಿ ಎನ್ನುವುದು ಅನೇಕ ತೊಡಕಿಗೂ ಕಾರಣವಾಗಬಹುದು. ನಷ್ಟ ಸರಿದೂಗಿಸಲು ಹೆಣಗಾಡುವುದಕ್ಕಿಂತ ಇನ್ನಷ್ಟು ಕಾಲ ಕಾಯುವುದು ಒಳಿತು ಎಂಬುದು ಹಲವರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts