More

    ಎಇಪಿಎಸ್‌ನಲ್ಲಿ ಕೋಟಿ ವ್ಯವಹಾರ

    ಮಂಗಳೂರು: ಅಂಚೆ ಇಲಾಖೆ 2019ರ ಅ.1ರಂದು ಜಾರಿಗೆ ತಂದ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ)ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದುವರೆಗೆ ದ.ಕ. ಜಿಲ್ಲೆಯಲ್ಲಿ 3.87 ಕೋಟಿ ರೂ. ಹಾಗೂ ಉಡುಪಿಯಲ್ಲಿ 3.17 ಕೋಟಿ ರೂ. ವ್ಯವಹಾರ ನಡೆದಿದೆ.
    ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ) ಡಿಜಿಟಲ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಮನೆಮನೆಗಳಿಗೆ ತಲುಪಿಸುವಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ. ಇದರ ಒಂದು ಭಾಗವೇ ಎಇಪಿಎಸ್ ಅಥವಾ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ. ಬ್ಯಾಂಕ್, ಎಟಿಎಂ ಮೊದಲಾದ ವ್ಯವಸ್ಥೆಗಳಿಲ್ಲದ ಗ್ರಾಮ, ಪ್ರದೇಶದ ಜನರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಅಂಚೆ ಇಲಾಖೆಯ ಈ ಸೇವೆಯನ್ನು ಪಡೆಯಬಹುದು. ಪೋಸ್ಟ್‌ಮನ್‌ಗಳ ಮೂಲಕವೂ ಈ ವ್ಯವಸ್ಥೆಯ ಪ್ರಯೋಜನ ಪಡೆಯಲು ಸಾಧ್ಯ.

    ವ್ಯವಹಾರದಲ್ಲಿ ಹೆಚ್ಚಳ: ಮಂಗಳೂರು ಅಂಚೆ ಮತ್ತು ಪುತ್ತೂರು ವಿಭಾಗವನ್ನೊಳಗೊಂಡ ದ.ಕ ಜಿಲ್ಲೆಯಲ್ಲಿ ಎಇಪಿಎಸ್ ಮೂಲಕ ಒಟ್ಟು 15,821 ವ್ಯವಹಾರಗಳು ನಡೆದು 3,87,54,951 ರೂ. ಮೊತ್ತವನ್ನು ಖಾತೆಯಿಂದ ಹಿಂಪಡೆಯಲಾಗಿದೆ. ಈ ಪೈಕಿ 14,881 ವ್ಯವಹಾರಗಳು ಈ ಆರ್ಥಿಕ ವರ್ಷದಲ್ಲಿ ಅಂದರೆ ಏ.1ರಿಂದ ಈವರೆಗೆ ನಡೆದಿದ್ದು, 3.64 ಕೋಟಿ ರೂ.ವನ್ನು ಖಾತೆಯಿಂದ ಹಿಂಪಡೆಯಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆಯಲ್ಲಿ ದ.ಕ.ಜಿಲ್ಲೆಯಲ್ಲಿ 42,555 ಮಂದಿ ಖಾತೆದಾರರಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 10,607 ಮಂದಿ ಖಾತೆ ತೆರೆದಿದ್ದಾರೆ. ಅಂಚೆ ಇಲಾಖೆಯ ಈ ಸೇವೆ ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ನೆರವಾಗಿದೆ ಎನ್ನುತ್ತಾರೆ ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ.

    ಉಡುಪಿಯಲ್ಲೂ ಉತ್ತಮ: ಉಡುಪಿ ಜಿಲ್ಲೆಯಲ್ಲಿ 3.17 ಕೋಟಿ ರೂ. ವ್ಯವಹಾರ ನಡೆದಿದೆ. 10,779 ಖಾತೆದಾರರು 3,06,73,109 ರೂ. ಹಣ ವಾಪಸ್ ಪಡೆದಿದ್ದು, 495 ಮಂದಿ ಆಧಾರ್ ಲಿಂಕ್ ಬ್ಯಾಂಕ್ ಖಾತೆಯಿಂದ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆಗೆ 11,90,900 ರೂ. ವರ್ಗಾಯಿಸಿದ್ದಾರೆ. ಅಂಚೆ ಇಲಾಖೆಗಳಲ್ಲಿ 35872 ಉಳಿತಾಯ ಖಾತೆ, 104 ಚಾಲ್ತಿ ಖಾತೆ ಸೇರಿದಂತೆ 35,976 ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್) ಖಾತೆ ತೆರೆಯಲಾಗಿದೆ. 6757 ಮಂದಿ ತಮ್ಮ ಪೋಸ್ಟಲ್ ಎಸ್‌ಬಿ ಖಾತೆಯನ್ನು ಐಪಿಪಿಬಿ ಖಾತೆಗೆ ಜೋಡಣೆ ಮಾಡಿಕೊಂಡಿದ್ದಾರೆ.

    ಹಣ ಪಡೆಯುವುದು ಹೇಗೆ?
    ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವ ಪ್ರತಿಯೊಬ್ಬರೂ ಹಣ ಪಡೆಯಲು ಅರ್ಹರಾಗುತ್ತಾರೆ. ದಿನಕ್ಕೆ ಗರಿಷ್ಠ 10 ಸಾವಿರ ರೂ.ವರೆಗೆ ಹಿಂಪಡೆಯಬಹುದು. ಆಧಾರ್ ಮತ್ತು ಆಧಾರ್ ಜೋಡಣೆಯ ಮೊಬೈಲ್ ಸಂಖ್ಯೆ ಉಪಯೋಗಿಸಿ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ಮೂಲಕ ವ್ಯವಹಾರ ನಡೆಸಲಾಗುತ್ತದೆ. 5 ನಿಮಿಷದಲ್ಲಿ ತಮ್ಮ ಮೊತ್ತ ಪಡೆಯಬಹುದಾಗಿದೆ.

    ಏನಿದು ಐಪಿಪಿಬಿ?
    ಆಧಾರ್ ಸಂಖ್ಯೆ, ಮೊಬೈಲ್ ಹೊಂದಿದ್ದರೆ ಹಾಗೂ 100 ರೂ. ಠೇವಣಿ ಮಾಡಿ ಖಾತೆ ಆರಂಭಿಸಬಹುದಾಗಿದೆ. ಇತರ ಬ್ಯಾಂಕ್ ಖಾತೆಗಳಿಗೆ ಹಾಗೂ ಖಾತೆಗಳಿಂದ ತಕ್ಷಣ ಹಣ ವರ್ಗಾವಣೆ, ನೆಫ್ಟ್, ಮೊಬೈಲ್ ರಿಚಾರ್ಜ್, ಡಿಟಿಎಚ್ ರಿಚಾರ್ಜ್, ಆನ್‌ಲೈನ್ ಮೂಲಕ ಅಂಚೆ ಕಚೇರಿಯ ಆರ್‌ಡಿ, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಜಮಾ ಮಾಡುವ ಅವಕಾಶ ಐಪಿಪಿಬಿಯಲ್ಲಿದೆ. ವಿಧವಾ ವೇತನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ವಿಕಲಚೇತನ ವೇತನ, ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಕಾಲರ್‌ಷಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಿಡಿ ಮೊದಲಾದ ಸರ್ಕಾರದ ಹಲವಾರು ಯೋಜನೆಗಳ ಮೊತ್ತವನ್ನೂ ಪಡೆಯಬಹುದು.

    ಗ್ರಾಮಾಂತರ ಭಾಗದ ಜನರಿಗೆ ತಮ್ಮ ಬ್ಯಾಂಕ್ ವ್ಯವಹಾರ ನಡೆಸಲು ಇದು ಸುಲಭ ಸೌಲಭ್ಯ. ತಿಂಗಳ ಪಿಂಚಣಿ ಮೊತ್ತ ಪಡೆಯಲು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೊತ್ತವನ್ನು ಖಾತೆಯಿಂದ ಡ್ರಾ ಮಾಡಲು ನೆಫ್ಟ್, ಐಎಂಪಿಎಸ್ ಮೊದಲಾದ ಹಣ ವರ್ಗಾವಣೆ ಪ್ರಕ್ರಿಯೆನ್ನು ಅಂಚೆ ಕಚೇರಿ ಅಥವಾ ಅಂಚೆಯಣ್ಣನ ಮೂಲಕ ಮಾಡಬಹುದಾಗಿದೆ.
    ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕ, ಮಂಗಳೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts