More

  ಮಳಿಗೆಗಳಿಗೆ ಮುಂಗಡ ಪಾವತಿಸುವುದು ಕಡ್ಡಾಯ

  ಶಿರಸಿ: ಇಲ್ಲಿನ ಮಾರಿಕಾಂಬಾ ಜಾತ್ರೆ ವೇಳೆ ಮಳಿಗೆಗಳ ಹರಾಜು ಸಂದರ್ಭದಲ್ಲಿ ಹರಾಜುದಾರಿಗೆ 10 ಸಾವಿರ ರೂ. ಮುಂಗಡ ಹಣ ಪಾವತಿ ಕಡ್ಡಾಯವಾಗಿದ್ದು, ಸರ್ಕಾರದ ನಿಯಮ ಮೀರಿದರೆ ಆ ಮೊತ್ತವನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.

  ನಗರದ ಮಿನಿವಿಧಾನ ಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾರಿಕಾಂಬಾ ದೇವಾಲಯ ಪ್ರಮುಖರ, ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

  ಜಾತ್ರೆ ವೇಳೆ ಜನ ಸಂಚಾರಕ್ಕೆ ಆದ್ಯತೆ ನೀಡಬೇಕು. ವ್ಯವಸ್ಥೆ ಸುಗಮವಾಗಿರಬೇಕು. ಅವಘಡಗಳು ಸಂಭವಿಸಿದಂತೆ ವಾಹನಗಳು ತೆರಳುವಷ್ಟು ರಸ್ತೆ ಖಾಲಿಯಿರಬೇಕು. ಆದರೆ, ಪ್ರತಿ ಜಾತ್ರೆ ವೇಳೆ ಜನರಿಗೆ ಓಡಾಡಲು ಇಲ್ಲದಂತೆ ಅಂಗಡಿಗಳನ್ನು ಹಾಕಲಾಗುತ್ತಿದೆ. ಕಾರಣ ಈ ಜಾತ್ರೆಯ ಮಳಿಗೆಗಳ ಹರಾಜಿನ ವೇಳೆಯೇ ಹರಾಜು ಪಡೆಯುವ ಜನರಿಂದ 10 ಸಾವಿರ ರೂ. ಮುಂಗಡ ಹಣ ಪಡೆಯಲಾಗುವುದು. ನಗರಸಭೆ, ದೇವಾಲಯಗಳ ಸೂಚನೆ ಪಾಲಿಸದಿದ್ದರೆ ಅಂತಹ ಅಂಗಡಿಕಾರರು ನೀಡಿದ ಮುಂಗಡ ಹಣ ಮುಟ್ಟುಗೋಲು ಹಾಕಲಾಗುವುದು. ಜತೆಗೆ ಟೆಂಡರ್​ನಲ್ಲಿ ಪಾಲ್ಗೊಂವರೇ ಅಂಗಡಿ ನಡೆಸಬೇಕು. ಬೇರೆಯವರಿಗೆ ಹಸ್ತಾಂತರಿಸುವ, ಉಪಬಾಡಿಗೆ ನೀಡುವ ಕಾರ್ಯವಾದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

  ಜನದಟ್ಟಣೆ ಆಗುವ ಪ್ರದೇಶದಲ್ಲಿ ಅಂಗಡಿಕಾರರ ಉಪಟಳ ತಡೆಯಲು ಪ್ರತ್ಯೇಕ ತಂಡ ರಚಿಸಿ ಕ್ರಮ ವಹಿಸಲಾಗುವುದು. ಇಕ್ಕಟ್ಟಾದ ರಸ್ತೆ ಇರುವಲ್ಲಿ ಮಳಿಗೆ ನೀಡುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ದೇವಾಲಯದ ಆಡಳಿತ ಮಂಡಳಿಯವರು ಜಾತ್ರಾ ಪೂರ್ವ ಹಸಿ ಮರಗಳನ್ನು ಕಡಿಯದಂತೆ ಜಿಲ್ಲಾ ನ್ಯಾಯಾಧೀಶರು ನೀಡಿರುವ ಆದೇಶವನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು.

  ನಗರಸಭೆ ಆರೋಗ್ಯ ನಿರೀಕ್ಷಕ ಆರ್.ಎಂ. ವೇರ್ಣೆಕರ್ ಮಾತನಾಡಿ, ಜಾತ್ರೆಗಾಗಿ ಸುಸಜ್ಜಿತ ನೀರಿನ ವ್ಯವಸ್ಥೆ, ಜಾತ್ರೆ ನಡೆಯುವ ಪ್ರದೇಶದಲ್ಲಿ 15 ಕಡೆ ಸಿಂಟೆಕ್ಸ್​ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ವ್ಯಾಪಾರಸ್ಥರಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗುವುದು. 15 ಸ್ಥಳಗಳಲ್ಲಿ ತಾತ್ಕಾಲಿಕ ಶೌಚಗೃಹ ನಿರ್ವಿುಸಲಾಗುವುದು ಎಂದರು.

  ಸ್ಥಳೀಯ ಬಾಳಾ ರೇವಣಕರ್ ಮಾತನಾಡಿ, ಹಳೇ ಬಸ್ ನಿಲ್ದಾಣದಲ್ಲಿ ಯಾವುದೇ ಅಂಗಡಿ ಹಾಕಲು ಅವಕಾಶ ನೀಡದೇ ಸಂಪೂರ್ಣ ಖುಲ್ಲಾ ಇಡಬೇಕು. ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು ಎಂದರು.

  ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶೌಚಗೃಹ ಹಾಗೂ ಸ್ನಾನ ಗೃಹದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು ಸಭೆಯಲ್ಲಿ ಉಪಸ್ಥಿತರಿದ್ದರು ಸ್ಥಳಿಯರು ಆಗ್ರಹಿಸಿದರು.

  ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಶಾಂತಾರಾಮ ಹೆಗಡೆ, ವ್ಯವಸ್ಥಾಪಕ ನರೇಂದ್ರ ಜಾಧವ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ತಾಲೂಕು ಪಂಚಾಯಿತಿ ಇಒ ಎಫ್.ಜಿ. ಚಿನ್ನಣ್ಣನವರ ಇತರರಿದ್ದರು.

  ದೇವಸ್ಥಾನದ ವತಿಯಿಂದ ಬಿಡ್ಕಿಬೈಲ್ ಹಾಗೂ ಕೋಣನಬಿಡ್ಕಿಯಲ್ಲಿ ಒಟ್ಟು 203 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು. ಜನರ ಓಡಾಟಕ್ಕೆ ಪೂರಕವಾಗಿ ಕಳೆದೆಲ್ಲ ಜಾತ್ರೆಗಿಂತ ಕಡಿಮೆ ಅಂಗಡಿ ಬಾಡಿಗೆಗೆ ನೀಡಲಾಗುವುದು. | ಲಕ್ಷ್ಮಣ ಕಾನಡೆ ಆಡಳಿತ ಮಂಡಳಿ ಧರ್ಮದರ್ಶಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts